ಸಾರಾಂಶ
ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ (ಜಿಎಸ್‌ಬಿ)ದ 87ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸೆ.28ರಂದು ಬೆಳಗ್ಗೆ 9ರಿಂದ ನಗರದ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ (ಜಿಎಸ್‌ಬಿ)ದ 87ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸೆ.28ರಂದು ಬೆಳಗ್ಗೆ 9ರಿಂದ ನಗರದ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಡಾ.ಕಸ್ತೂರಿ ಮೋಹನ್ ಪೈ, ಕಾರ್ಯಕ್ರಮದಲ್ಲಿ ಕೆನರಾ ವರ್ಕ್‌ಶಾಪ್ ಲಿಮಿಟೆಡ್ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ್ ಎಸ್. ಕುಡ್ವ, ಮಂಗಳೂರು ಗೋಕರ್ಣ ಮಠದ ಉಪಾಧ್ಯಕ್ಷ ಎಸ್. ಪಾಂಡುರಂಗ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ವರ್ಷದ ಸಂಸ್ಥಾಪನಾ ದಿನವನ್ನು ಜಿಎಸ್‌ಬಿ ಸಮಾಜದ ಎರಡು ಶ್ರೇಷ್ಠ ಸಂಸ್ಥೆಗಳಾದ 550 ವರ್ಷಗಳ ಸಂಭ್ರಮಾಚರಣೆ ಮಾಡುತ್ತಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠ ಹಾಗೂ 100 ವರ್ಷಗಳನ್ನು ಪೂರೈಸಿರುವ ಸಿಂಡಿಕೇಟ್ ಬ್ಯಾಂಕ್‌ಗಳಿಗೆ ಸಮರ್ಪಿಸುತ್ತಿದ್ದೇವೆ. ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊಂಕಣಿ ಕಥಾ ಅನುವಾದ, ಕೊಂಕಣಿ ಪದಗಳ ಬರವಣಿಗೆ, ಭಾಷಣ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮುಂತಾದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ ಎಸ್ಸೆಸೆಲ್ಸಿಯಿಂದ ಸ್ನಾತಕೋತ್ತರವರೆಗಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕ್ರೀಡೆ, ಲಲಿತಕಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ, 6ನೇ ತರಗತಿಯಿಂದ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯುತ್ತಿರುವ ಮಂಗಳೂರಿನ ಸುಮಾರು 25 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರು. ನಗದು ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಲಾಗುವುದು ಎಂದವರು ಹೇಳಿದರು.ಜಿಎಸ್‌ಬಿ ಸೇವಾ ಸಂಘದ ಜತೆ ಕಾರ್ಯದರ್ಶಿ ಡಾ.ಎ.ರಮೇಶ್ ಪೈ, ಪ್ರೋಗ್ರಾಂ ಇನ್‌ಚಾರ್ಜ್ ಎಂ.ಆರ್.ಕಾಮತ್, ಪ್ರೋಗ್ರಾಂ ಕೋ-ಆರ್ಡಿನೇಟರ್ ಜಿ.ಗೋವಿಂದ್ರಾಯ ಪ್ರಭು, ಆಡಳಿತಾಧಿಕಾರಿ ವೆಂಕಟೇಶ್ ಎನ್.ಬಾಳಿಗ, ಕಾರ್ಯಕ್ರಮ ಸಂಘಟಕಿ ಮೀನಾಕ್ಷಿ ಪೈ ಇದ್ದರು.