ಸಾರಾಂಶ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಸೇವಾ ದರ ಏರಿಕೆಯಲ್ಲಿ ಸರ್ಕಾರದ ಪಾತ್ರವಿಲ್ಲ. 2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಲಾಗಿತ್ತು. ಈಗ ಬಿಜೆಪಿ ನಾಯಕರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವ ಬಿ.ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ, ಅಲ್ಲಿಗೆ ಸರ್ಕಾರ ಕಾರ್ಯ ನಿರ್ವಹಣಾಧಿಕಾರಿ ನೇಮಕ ಕೂಡ ಮಾಡುವಂತಿಲ್ಲ. ಆಡಳಿತವು ಸಂಪೂರ್ಣ ದೇವಸ್ಥಾನದ ಮಂಡಳಿಗೆ ಸೇರಿದ್ದು, ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಾಗಿ ಅವರೇ ದರ ಪರಿಷ್ಕರಣೆ ಮಾಡಿದ್ದಾರೆ ಎಂದು ತಿಳಿಸಿದರು.
2010ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇವೆಗಳ ಶುಲ್ಕ ಹೆಚ್ಚಿಸುವಾಗ ಬಿಜೆಪಿ ಸರ್ಕಾರವಿತ್ತು. ಈಗ 2025ರಲ್ಲಿ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಡಿ ಎಂದು ಆಡಳಿತ ಮಂಡಳಿ ಮನವಿ ಮಾಡುವಾಗ ನಮ್ಮ ಸರ್ಕಾರವಿದೆ. ಹಾಗಂತ ಕಾಂಗ್ರೆಸ್ ಸರ್ಕಾರ ಹೆಚ್ಚು ಮಾಡಿದೆ ಎನ್ನುವುದು ಸರಿಯೇ ಎಂದು ಸಚಿವರು ಪ್ರಶ್ನಿಸಿದರು.2003ರಲ್ಲಿ ಕಾಯಿದೆ ಜಾರಿಗೆ ಬಂದಂದಿನಿಂದ ಒಂದು ದೇವಸ್ಥಾನದ ಹಣವನ್ನು ಇನ್ನೊಂದು ದೇವಸ್ಥಾನಕ್ಕೂ ಕೊಡುವಂತಿಲ್ಲ. ಯಾವುದೇ ದೇವಸ್ಥಾನದ ಹಣ ಸರ್ಕಾರದ ಖಜಾನೆಗೂ ಬರುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯವರೂ ಅಧಿಕಾರದಲ್ಲಿದ್ದರು. ಅವರಿಗೂ ಆ ವಿಷಯ ಗೊತ್ತಿದ್ದರೂ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಎಲೆಕ್ಟ್ರಿಕ್ ಬಸ್:ಕೇಂದ್ರ ಸರ್ಕಾರ ಘೋಷಿಸಿದಂತೆ ರಾಜ್ಯಗಳಿಗೆ ಎಲೆಕ್ಟ್ರಿಕ್ ಬಸ್ ನೀಡುವ ಪ್ರಕ್ರಿಯೆಯಲ್ಲಿ ಟೆಂಡರ್ ಮತ್ತಿತರ ಪ್ರಕ್ರಿಯೆ ನಡೆಯಲು ಇನ್ನೂ ಆರು ತಿಂಗಳು ಬೇಕಾಗಬಹುದು ಎಂದರು.
ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಎ.ಎಂ., ಸಹಾಯಕ ಆಯುಕ್ತ ಸಿ.ಮಲ್ಲಿಕಾರ್ಜುನ, ಶಿವಮೊಗ್ಗ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್, ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ಇದ್ದರು.