ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಸಂಕಷ್ಟ: ಕೃಷ್ಣ ಬೈರೇಗೌಡ

| N/A | Published : Sep 23 2025, 01:03 AM IST / Updated: Sep 23 2025, 08:09 AM IST

Krishna byregowda

ಸಾರಾಂಶ

ಜಿಎಸ್‌ಟಿ ದರ ಕಡಿತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಇದರಿಂದ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟಾರೆ ಒಂದೂವರೆ ಲಕ್ಷ ಕೋಟಿ ರು.ನಷ್ಟು ವರಮಾನ ನಷ್ಟವಾಗಲಿದ್ದು, ಈ ನಷ್ಟಕ್ಕೆ ಪರಿಹಾರ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ.

 ಬೆಂಗಳೂರು  :  ಜಿಎಸ್‌ಟಿ ದರ ಕಡಿತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಇದರಿಂದ ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟಾರೆ ಒಂದೂವರೆ ಲಕ್ಷ ಕೋಟಿ ರು.ನಷ್ಟು ವರಮಾನ ನಷ್ಟವಾಗಲಿದ್ದು, ಈ ನಷ್ಟಕ್ಕೆ ಪರಿಹಾರ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಎಸ್‌ಟಿ ದರ ಕಡಿತ ಕುರಿತ ಪ್ರಶ್ನೆಗೆ ಉತ್ತರಿಸಿದರು. ಕೇಂದ್ರ ಸರ್ಕಾರದವರು ಜಿಎಸ್‌ಟಿ ದರ ಕಡಿತವನ್ನು ರಾಜ್ಯಗಳಿಗೆ ಬಹಳ ಅನ್ಯಾಯವಾಗುವ ರೀತಿಯಲ್ಲಿ ಮಾಡಿದ್ದಾರೆ. ಇದರಿಂದ ರಾಜ್ಯಗಳು ಒಂದೂವರೆ ಲಕ್ಷ ಕೋಟಿ ರು.ನಷ್ಟು ವರಮಾನ ನಷ್ಟ ಅನುಭವಿಸಲಿವೆ. ಕರ್ನಾಟಕಕ್ಕೆ 15ರಿಂದ 16 ಸಾವಿರ ಕೋಟಿ ರು.ನಷ್ಟು ಆದಾಯ ನಷ್ಟವಾಗಲಿದೆ. ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸದೆ ಹೋದರೆ ರಾಜ್ಯಗಳು ಮುಂದೆ ಸರ್ಕಾರ ನಡೆಸುವುದೇ ಕಷ್ಟವಾಗಲಿದೆ. ಇದರ ಹೊಣೆಯನ್ನು ಕೇಂದ್ರವೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವರಮಾನ ಅಥವಾ ಆದಾಯದ ಭದ್ರತೆ ಇಲ್ಲದೆ ಸ್ವಾಯತ್ತವಾಗಿ ಯಾವ ರಾಜ್ಯ ಸರ್ಕಾರವೂ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜಿಎಸ್‌ಟಿ ನಷ್ಟ ಪರಿಹಾರಕ್ಕಾಗಿ ವಿವಿಧ ಸೆಸ್‌ಗಳಿಂದ ಬರುವ ಆದಾಯವನ್ನು ರಾಜ್ಯಗಳಿಗೆ ನೀಡಬೇಕು. ಇದರಿಂದ ಕೇಂದ್ರಕ್ಕೂ ಹೊರೆ ಆಗುವುದಿಲ್ಲ ಎಂದು ರಾಜ್ಯಗಳು ಸಲಹೆ ಕೊಟ್ಟಿದ್ದೆವು. ಆದರೆ, ಕೇಂದ್ರ ಸರ್ಕಾರ ರಾಜ್ಯಗಳ ಬೇಡಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ಮುರಿದು ಏಕಪಕ್ಷೀಯವಾಗಿ ತೀರ್ಮಾನ ಮಾಡಿದೆ. ತನ್ಮೂಲಕ ರಾಜ್ಯಗಳ ಮೇಲೆ ಹಿಡಿತ ಸಾಧಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

Read more Articles on