ಜಿಎಸ್‌ಟಿ ದರ ಇಳಿಕೆ, ಬಿಜೆಪಿ ವಿಜಯೋತ್ಸವ

| Published : Sep 23 2025, 01:04 AM IST / Updated: Sep 23 2025, 01:05 AM IST

ಸಾರಾಂಶ

ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಎದುರು ಸೋಮವಾರ ಬಿಜೆಪಿ ಬ್ಯಾಡಗಿ ಮಂಡಲದಿಂದ ವಿಜಯೋತ್ಸವ ಆಚರಿಸಲಾಯಿತು.

ಬ್ಯಾಡಗಿ: ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಎದುರು ಸೋಮವಾರ ಬಿಜೆಪಿ ಬ್ಯಾಡಗಿ ಮಂಡಲದಿಂದ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ದೇಶದ ಜನರ ನಾಡಿ ಮಿಡಿತ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಅರ್ಥವಾಗಿದೆ. ಕೂಲಿ ಕಾರ್ಮಿಕರು ಸೇರಿದಂತೆ ಬಡ ಮಧ್ಯಮ ಹಾಗೂ ರೈತಾಪಿ ವರ್ಗದ ಜನರಿಗೆ ಜಿಎಸ್‌ಟಿ ಇಳಿಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರು ಒಬ್ಬ ಸಮರ್ಥ ಹಾಗೂ ಜನಪರ ಆಡಳಿತಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವ ಗುರುವಾಗುವತ್ತ ಕಾಲಿಡುತ್ತಿದ್ದು, ವಿಶ್ವದಲ್ಲೇ ಅತ್ಯಂತ ಬಲಿಷ್ಠ ರಾಷ್ಟವಾಗಿ ಹೊರಹೊಮ್ಮುತ್ತಿದೆ. ಆತ್ಮ ನಿರ್ಭರ ಮೂಲಕ ವಿಶ್ವದೆಲ್ಲೆಡೆ ಸದ್ದು ಮಾಡಿದ ಭಾರತ ಎಲ್ಲ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆ ಕಡಿಮೆ ಮಾಡಿದ್ದು ಕೆಲವನ್ನ ಜಿಎಸ್‌ಟಿಯಿಂದ ಮುಕ್ತಗೊಳಿಸಿದೆ. ಇದರಿಂದ ಜನರು ನೆಮ್ಮದಿಯ ಬದುಕು ನಡೆಸಲು ಸಹಕಾರಿಯಾಗಲಿದೆ ಎಂದರು.

ಬಡವರ ಬದುಕು ಮತ್ತಷ್ಟು ಹಸನು: ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ದೇಶದ ಚುಕ್ಕಾಣಿ ಹಿಡಿದು ದಿನದಿಂದ ನರೇಂದ್ರ ಮೋದಿ ಅವರು ಕೇವಲ ದೇಶದ ಹಿತವನ್ನೇ ಬಯಸುತ್ತಾ ಬಂದಿದ್ದಾರೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಜನ ಮನ್ನಣೆ ಗಳಿಸಿದ್ದಾರೆ. ಇದೀಗ ಜಿಎಸ್‌ಟಿ ಇಳಿಕೆ ಮಾಡಿ ನರೇಂದ್ರ ಮೋದಿ ಸರ್ಕಾರ ಬಡವರ ಬದುಕನ್ನು ಮತ್ತಷ್ಟು ಹಸನಾಗಿಸಿದ್ದಾರೆ ಎಂದರು. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮಂಕು ಬೂದಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕರು ಗ್ಯಾರಂಟಿ ಹೆಸರಲ್ಲಿ ಜನರಿಗೆ ಮಂಕು ಬೂದಿ ಎರಚಿ ರಾಜ್ಯದಲ್ಲಿನ ಜನರ ಮೇಲೆ ಇಲ್ಲ ಸಲ್ಲದ ಟ್ಯಾಕ್ಸ್ ವಿಧಿಸಿ ಜನರ ಬದುಕು ದುಸ್ತರವಾಗಿಸಿದ್ದಾರೆ, ಇದನ್ನ ನೋಡಿಕೊಂಡು ಪ್ರಜೆಗಳು ಸುಮ್ಮನಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೇಂದ್ರ ಸರಕಾರ ಮಾಡಿರುವ ಜಿಎಸ್‌ಟಿ ಇಳಿಕೆ ಕೊಂಚ ನಿರಾಳತೆ ತಂದಿದೆ ಎಂದರು. ಈ ವೇಳೆ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ವಿದ್ಯಾಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ, ಫಕ್ಕಿರಮ್ಮ ಛಲವಾದಿ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಹನುಮಂತಪ್ಪ ಮ್ಯಾಗೇರಿ, ವಿನಯ ಕುಮಾರ ಹಿರೇಮಠ, ರಾಮಣ್ಣ ಕೋಡಿಹಳ್ಳಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಸುರೇಶ ಆಸಾದಿ, ಎಂ.ಎಸ್. ಪಾಟೀಲ, ವಿಜಯ ಭರತ ಬಳ್ಳಾರಿ, ನಾಗರಾಜ ಹಾವನೂರ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ವಿಜಯ ಮಾಳಗಿ, ವಿನಾಯಕ ಕಂಬಳಿ, ಕೊಟ್ರಯ್ಯ ಸೊಪ್ಪಿನಮಠ, ಪ್ರದೀಪ ಜಾಧವ, ಶಿವಾನಂದ ಯಮನಕ್ಕವರ, ಶಿವಯೋಗಿ ಗಡಾದ, ಸುರೇಶ ಉದ್ಯೋಗಣ್ಣನವರ, ಪರಶುರಾಮ ಉಜನಿಕೊಪ್ಪ, ಗಣೇಶ ಅಚಲಕರ, ಗುತ್ತೆಮ್ಮ ಮಾಳಗಿ, ಗಿರಿಜಮ್ಮ ಪಟ್ಟಣಶೆಟ್ಟಿ, ಜಿತೇಂದ್ರ ಸುಣಗಾರ ಕುಮಾರ ಮಾಳಗಿ ಹಾಗೂ ಇನ್ನಿತರರಿದ್ದರು.