ಗದಗ- ಹುಬ್ಬಳ್ಳಿ ರಸ್ತೆಯನ್ನು ತಡೆದು ಹೋರಾಟ ನಡೆಸುವ ವೇಳೆ ಪೊಲೀಸರು ಮತ್ತು ಅತಿಥಿ ಉಪನ್ಯಾಸಕರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ 1 ಗಂಟೆಗೂ ಅಧಿಕ ಸಮಯ ಗದಗ- ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಸಮಯದಲ್ಲಿ ಉಪನ್ಯಾಸಕಿಯೊಬ್ಬರು ದಿಢೀರ್‌ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಗದಗ- ಹುಬ್ಬಳ್ಳಿ ರಸ್ತೆಯನ್ನು ತಡೆದು ಹೋರಾಟ ನಡೆಸುವ ವೇಳೆ ಪೊಲೀಸರು ಮತ್ತು ಅತಿಥಿ ಉಪನ್ಯಾಸಕರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಹುಲಕೋಟಿಯ ಕೆ.ಎಚ್. ಪಾಟೀಲ ಕಾಲೇಜಿನ ಅತಿಥಿ ಉಪನ್ಯಾಸಕಿ ನೂರಜಹಾನ ಕದಾಂಪುರ ತೀವ್ರ ಅಸ್ವಸ್ಥರಾಗಿ ಪ್ರಜ್ಞಾಹೀನರಾದರು. ಕೂಡಲೇ ಅವರನ್ನು ಆ್ಯಂಬುಲೆನ್ಸ್‌ ಇರದ ಕಾರಣ ಪೊಲೀಸರ ವಾಹನದಲ್ಲೇ ಕರೆದುಕೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಹೋರಾಟಗಾರರ ಆಕ್ರೋಶ: ಪ್ರತಿಭಟನೆಯ ವೇಳೆ ವಿ.ಆರ್. ಗೋವಿಂದಗೌಡರ ಮಾತನಾಡಿ, ಅತಿಥಿ ಉಪನ್ಯಾಸಕರು 10 ವರ್ಷಕ್ಕೂ ಹೆಚ್ಚು ವರ್ಷದವರೆಗೆ ಜ್ಞಾನದ ಸುಧೆ ಹರಿಸಿದವರನ್ನು ಸರ್ಕಾರದ ದ್ವಂದ್ವ ನೀತಿಯಿಂದಾಗಿ ಬೀದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ಇದು ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯನ್ನು ಖಂಡಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯ 4ನೇ ದಿನದ ಹೋರಾಟದಲ್ಲಿ ಮಾತನಾಡಿದರು.ಕೆವಿಎಸ್‌ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ದಂಡಿನ ಮಾತನಾಡಿ, ಅತಿಥಿ ಉಪನ್ಯಾಸಕರು ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿರುವ ಅಧಿಕಾರಿಗಳು ಸೌಜನ್ಯಕ್ಕಾದರೂ ಮಾತನಾಡಿಸದೆ ಇರುವುದು ಖೇದಕರ. ನ್ಯಾಯ ನೀಡಬೇಕಾಗಿರುವ ಸರ್ಕಾರ ಹಿರಿಯ ಅತಿಥಿ ಉಪನ್ಯಾಸಕರನ್ನು ಹೊರ ಇಟ್ಟು ಅವರಿಗೆ ಅನ್ಯಾಯ ಮಾಡುತ್ತಿರುವುದನ್ನು ತಡೆದು ಸೂಕ್ತ ನ್ಯಾಯ ಒದಗಿಸಿಕೊಡಬೇಕು ಮತ್ತು 6 ಸಾವಿರ ಅತಿಥಿ ಉಪನ್ಯಾಸಕರ ಬೆನ್ನಿಗೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಲ್ಲುತ್ತವೆ ಎಂದರು.ಸಂಘಟನೆಯ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ಕೂಡಲೆ ಕೌನ್ಸೆಲಿಂಗ್‌ನ್ನು ನಿಲ್ಲಿಸಬೇಕು. ಅತಿಥಿ ಉಪನ್ಯಾಸಕರಿಗೆ ಏನಾದರೂ ಅನಾಹುತವಾದರೆ ಸರ್ಕಾರವೇ ಹೊಣೆ ಹೊರಬೇಕು. ಇಲ್ಲಿಯವರೆಗೆ ಅಧಿಕಾರಿಗಳಾಗಲಿ ಮತ್ತು ಜನಪ್ರತಿನಿಧಿಯಾಗಲಿ ನಮ್ಮ ಕಡೆ ತಿರುಗಿ ನೋಡದೆ ಇರುವುದು ನೋವಿನ ಸಂಗತಿಯಾಗಿದೆ. ಕೂಡಲೆ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಸ್ಪಂದಿಸಿ ನ್ಯಾಯ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ, ಪ್ರೊ. ಉಮೇಶ ಹಿರೇಮಠ ಮಾತನಾಡಿದರು. ಬೀದರ, ಕಲಬುರಗಿ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಅತಿಥಿ ಉಪನ್ಯಾಸಕರು ಇದ್ದರು.