ಗ್ಯಾರಂಟಿ ಯೋಜನೆಗಳ ಜಾರಿಯಿಂದ ₹ 56 ಸಾವಿರ ಕೋಟಿ ಖರ್ಚು

| Published : Feb 11 2024, 01:53 AM IST

ಗ್ಯಾರಂಟಿ ಯೋಜನೆಗಳ ಜಾರಿಯಿಂದ ₹ 56 ಸಾವಿರ ಕೋಟಿ ಖರ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಇದಕ್ಕಾಗಿ 56 ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಇದಕ್ಕಾಗಿ 56 ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಜಯಮ್ಮಶಿವಲಿಂಗೇಗೌಡ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಮತ್ತು ತಾಪಂ ವತಿಯಿಂದ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುರಿತ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮುಂದಿನ ವರ್ಷ ಗ್ಯಾರಂಟಿ ಅನುಷ್ಟಾನಕ್ಕಾಗಿ 69 ಸಾವಿರ ಕೋಟಿಯಾಗುತ್ತದೆ. ಆದರೂ ಎಲ್ಲಾ ಇಲಾಖೆಯಲ್ಲಿ ನೀಡಿರುವ ಸೌಲಭ್ಯಗಳನ್ನು ನಿಲ್ಲಿಸಿಲ್ಲ. ಬಡ್ಡಿರಹಿತ ಸಾಲವನ್ನು ಕೊಡುತ್ತಿದ್ದೇವೆ. ನಾವು ನಿಮಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆಸುತ್ತಿದ್ದೇವೆ ಎಂದರು.ಈಗಾಗಲೇ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ 223 ತಾಲೂಕುಗಳನ್ನು ಗುರುತಿಸಿ ಕೇಂದ್ರಕ್ಕೆ ವರದಿ ಕಳಿಸಿದ್ದೇವೆ. ಆದರೆ, ಬರ ಕುರಿತು ಕೇಂದ್ರ ಯಾವುದೇ ತೀರ್ಮಾನ ಮಾಡಲಿಲ್ಲ. ನಮ್ಮ ಪಾಲಿನ ತೆರಿಗೆಹಣ ಕೊಡುತ್ತಿಲ್ಲ ಎಂದು ದೂರಿದರು.ಪ್ರತಿವರ್ಷ ಕೇಂದ್ರಕ್ಕೆ 4.3 ಲಕ್ಷ ಕೋಟಿ ರು. ನಮ್ಮ ರಾಜ್ಯದಿಂದ ತೆರಿಗೆ ಹಣ ಹೋಗುತ್ತಿದೆ. ಉತ್ತರಪ್ರದೇಶಕ್ಕೆ 2.5 ಲಕ್ಷ ಕೋಟಿ ಕೊಡುತ್ತಾರೆ. ನಮಗೆ ಬರಿ 50 ಸಾವಿರ ಕೋಟಿ ಮಾತ್ರ ಕೋಡುತ್ತಾರೆ. ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಬನ್ನಿ ಪ್ರತಿಭಟನೆ ಅಂತ ಮನವಿ ಮಾದಿದರೆ ಯಾರೂ ಸಹ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ 18 ಸಾವಿರ ಕೋಟಿ ಕೇಳಿದರೂ ಕೊಟ್ಟಿಲ್ಲ. ಈ ಬಗ್ಗೆ ಒಂದು ಸಭೆ ಕೂಡ ಮಾಡಿಲ್ಲ. ಅನಿವಾರ್ಯವಾಗಿ ರೈತರನ್ನು ಉಳಿಸಲು ಸಿಎಂ, ಡಿಸಿಎಂ ಕುಳಿತು ರಾಜ್ಯ ಸರ್ಕಾರದಿಂದ 32 ಲಕ್ಷ ರೈತರಿಗೆ ತಲಾ 2 ಸಾವಿರ ಹಣ ಹಾಕಿದ್ದೇವೆ. ನಮ್ಮ ಯೋಜನೆಗಳನ್ನು ನೋಡಿ ಇತರೆ ರಾಜ್ಯಗಳು ಬೆಚ್ಚಿ ಬಿದ್ದಿವೆ ಎಂದರು. ಕಾರ್ಯಕ್ರಮದಲ್ಲಿ ವಿ.ಪ ಸದಸ್ಯ ದಿನೇಶ್ ಗೂಳಿಗೌಡ, ಡೀಸಿ ಕುಮಾರ್, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಉಪವಿಭಾಗಾಧಿಕಾರಿ ನಂದೀಶ್, ತಾಪಂ ಇಒ ರಾಜಮೂರ್ತಿ, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ಸತೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿವಿಶ್ವನಾಥ, ಬಿ.ನಾಗೇಂದ್ರಕುಮಾರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹತ್ತು ವರ್ಷದಲ್ಲಿ ಮೋದಿ ಒಂದು ಡ್ಯಾಂ ಕಟ್ಟಿದ್ದಾರಾ?

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿ । ಡ್ಯಾಂ ಕಟ್ಟಿದ್ರೆ ನಾನು ಅವರಿಗೆ ಗುಲಾಮನಾಗುತ್ತೇನೆ ನರೇಂದ್ರ ಸವಾಲು

ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷ ಪ್ರಧಾನಿಯಾಗಿ ಒಂದು ಡ್ಯಾಂ ಕಟ್ಟಿದ್ದಾರೇಂತ ಹೇಳಲಿ. ನಾನು ಅವರಿಗೆ ಗುಲಾಮನಾಗುತ್ತೇನೆ ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸವಾಲು ಹಾಕಿದರು.ಪಟ್ಟಣದಲ್ಲಿ ನಡೆದ ರಾಜ್ಯಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿರುವ ಅಣೆಕಟ್ಟುಗಳು, ಕೈಗಾರಿಕೆಗಳನ್ನು ಸ್ಥಾಪಿಸಿದ್ದು ಕಾಂಗ್ರೆಸ್. ಇದನ್ನು ಮರೆಮಾಚುತ್ತಿರುವುದೇಕೆ. 70 ವರ್ಷದಿಂದ ದೇಶ ಯಾವುದೇ ಅಭಿವೃದ್ಧಿ ಕಂಡಿಲ್ಲವೇ. ಎಲ್ಲಾ ಬಿಜೆಪಿಯವರೇ ಬಂದು ಮಾಡಿದ್ದಾ ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ, ಪ್ರಸ್ತುತ ದಿನಗಳಲ್ಲಿ ಸುಳ್ಳು ಹೇಳುವವರು ಪಾಳೇಗಾರರಾಗಿದ್ದಾರೆ ಸತ್ಯವಂತರು ಮನೆ ಸೇರಿಕೊಂಡಿದ್ದರೆ. ಇವತ್ತಿನ ಸರ್ಕಾರಗಳ ಬಗ್ಗೆ ಚರ್ಚೆ ಮಾಡಿ ಜವಾಬ್ದಾರಿಯುತ ತೀರ್ಮಾನ ನೀಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.

ನಾವೆಲ್ಲರೂ ಸ್ವಾತಂತ್ರ್ಯ ನಂತರ ಹುಟ್ಟಿರುವವರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತು. ಆನಂತರ ಎಷ್ಟೆಲ್ಲಾ ಪ್ರಗತಿ ಸಾಧಿಸಿದೆ ಎಂಬುದನ್ನು ಯಾರೊಬ್ಬರೂ ಹೇಳುತ್ತಿಲ್ಲ. ದೇಶ ಈಗ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸುಳ್ಳು ಹೇಳುವವರು ಇಂದು ಸಾಮ್ರಾಟರಾಗಿದ್ದಾರೆ. ಅಭಿವೃದ್ಧಿಗೆ ಕೊಡುಗೆ ನೀಡಿದ ಸತ್ಯವಂತರು ಮನೆ ಸೇರಿಕೊಂಡಿದ್ದಾರೆ ಎಂದು ಖಾರವಾಗಿ ಹೇಳಿದರು.ಈ ದೇಶದಲ್ಲಿರುವ ಎಲ್ಲಾ ಜಾತಿ-ಧರ್ಮದವರು ಒಟ್ಟಾಗಿ ಸಹೋದರತ್ವದ ಭಾವನೆಯಿಂದ ಬಾಳುತ್ತಿದ್ದೇವೆ. ಧರ್ಮ, ಸಂಘರ್ಷದಿಂದ ದೇಶ ಮುನ್ನಡೆಯಲು ಸಾಧ್ಯವೇ ಎಂದ ಅವರು, ನರೇಂದ್ರ ಮೋದಿ ರಾಜಕಾರಣಕ್ಕೆ ಬರುವ ಮುನ್ನ ನಿಜವಾದ ಬಿಜೆಪಿ ನಾಯಕ ವಾಜಪೇಯಿ ಅವರು ಇಂದಿರಾ ಗಾಂಧಿಯ ಅವರನ್ನು ದುರ್ಗಾಮಾತೆಗೆ ಹೋಲಿಸಿದ್ದರು. ಇಂದಿರಾಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ಬಿಜೆಪಿಯವರದು ಮಾತನಾಡುವುದೇ ಸಾಧನೆಯಾಗಿದೆ ಎಂದು ಜರಿದರು.

ಶಾಂತಿನಾಡು ಮಂಡ್ಯ ಜಿಲ್ಲೆಗೆ ಧರ್ಮದ ಬೆಂಕಿ ಹಚ್ಚಲು ಬರುತ್ತಿದ್ದಾರೆ. ಜಿಲ್ಲೆಯನ್ನು ಒಡೆದು ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನಕ್ಕೆ ಇಳಿದಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ನರೇಂದ್ರ ಮೋದಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತೆ ಎನ್ನುತ್ತಾರೆ. ಮನೆಗೆ 2 ಸಾವಿರ ರು. ಹಣ ಕೊಡುತ್ತಿದ್ದೇವೆ. ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿಗಳಿಗೆ ಯುವನಿಧಿ, ಉಚಿತ ವಿದ್ಯುತ್ ಇವೆಲ್ಲವೂ ರಾಜಕಾರಣಕ್ಕಾಗಿ ಮಾಡಿದ ಯೋಜನೆಗಳಲ್ಲ. ಜನರ ಅಭಿವೃದ್ಧಿ ಮಾಡುವುದೇ ನಮ್ಮ ಯೋಜನೆ ಎಂದು ಹೇಳಿದರು.

ದೇಶಕ್ಕೆ ಪಟೇಲರ ಪ್ರತಿಮೆ ಬಿಟ್ಟರೆ ಮೋದಿ ಕೊಡುಗೆ ಏನೂ ಇಲ್ಲ. ಹಾಸನಕ್ಕೂ ಮಂಡ್ಯಕ್ಕೂ ಹೋಲಿಸಿದರೆ ಹಿಂದಿನ ಸರ್ಕಾರ ಹಾಸನ ಅಭಿವೃದ್ಧಿ ಮಾಡಿದ್ದಾರೆಯೇ ಹೊರತು ಮಂಡ್ಯಕ್ಕೆ ಅಭಿವೃದ್ಧಿ ಮಾಡಿಲ್ಲ ಎಂದು ಶಾಸಕ ಮಂಜು ಅವರ ಕಾಲೆಳೆದರು.

ಈಶ್ವರಪ್ಪ, ಅನಂತಕುಮಾರ್ ಹೆಗಡೆಗೆ ಗುಂಡಿಕ್ಕಲಿ

ಚಲುವರಾಯಸ್ವಾಮಿ ಕಿಡಿ । ಈಶ್ವರಪ್ಪ ಮೆದುಳಿಗೂ ನಾಲಿಗೆಗೂ ಸಂಪರ್ಕ ಕಡಿತವಾಗಿದೆ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ

ಕೇಸರಿ ಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇನೆ ಎಂದಿದ್ದ ಈಶ್ವರಪ್ಪ ಹಾಗೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿಯವರು ಮೊದಲು ಗುಂಡಿಕ್ಕಲಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.ದೇಶ ವಿಭಜನೆಯ ಬಗ್ಗೆ ಮಾತನಾಡಿರುವ ಸಂಸದ ಡಿ.ಕೆ.ಸುರೇಶ್‌ಗೆ ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಈಶ್ವರಪ್ಪ ಮೆದುಳಿಗೂ ನಾಲಿಗೆಗೂ ಸಂಪರ್ಕ ಕಡಿತವಾಗಿದೆ. ಹಾಗಾಗಿ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಷ್ಟ್ರ, ರಾಜ್ಯ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ರಾಜಕಾರಣಕ್ಕಾಗಿ ನಾಲಿಗೆ ಹರಿಬಿಡುವವರಿಗೆ ಉತ್ತರ ನೀಡುವುದಿಲ್ಲ ಎಂದು ನೇರವಾಗಿ ಹೇಳಿದರು.ಬಿಜೆಪಿಯವರಂತೆ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿಲ್ಲ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಳುವುದೇ ತಪ್ಪಾ. ಅವರು ಕೊಟ್ಟಿದ್ದನ್ನಷ್ಟೇ ಪಡೆಯಬೇಕಾ. ಅದನ್ನು ಯಾರೂ ಪ್ರಶ್ನಿಸಬಾರದಾ? ಹಾಗೇನಾದರೂ ಪ್ರಶ್ನಿಸಿದರೆ ಅವರು ರಾಷ್ಟ್ರದ್ರೋಹಿಗಳಾ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ. ಬಿಜೆಪಿಯ 26 ಸಂಸದರಿಗೆ ಮಾತನಾಡುವ ತಾಕತ್ತಿಲ್ಲ. ಅದನ್ನು ನಮ್ಮ ಕಾಂಗ್ರೆಸ್ ಸಂಸದರು ಪ್ರದರ್ಶಿಸಿದ್ದಾರೆ. ಅದು ದೊಡ್ಡ ತಪ್ಪೇ. ಬಿಜೆಪಿಯವರು ಆರ್ಥಿಕ ಅನ್ಯಾಯ ಮಾಡಿರುವುದಕ್ಕೆ ಉತ್ತರ ಕೊಟ್ಟು ಸರಿಪಡಿಸಬೇಕೇ ವಿನಃ ಪ್ರಶ್ನಿಸುವುದೇ ಸರಿಯಲ್ಲ ಎಂದು ಹೇಳುವುದು ತಪ್ಪು ಎಂದರು.

ಸುಮಲತಾ-ಬಿಜೆಪಿ ವರಿಷ್ಠರ ಭೇಟಿ ಬಗ್ಗೆ ಕೇಳಿದಾಗ, ಸುಮಲತಾ ಅವರು ಬಿಜೆಪಿ ಟಿಕೆಟ್ ಕೇಳುತ್ತಿರುವುದು ಸತ್ಯ ಎಂದು ಸ್ಪಷ್ಟವಾಯಿತಲ್ವಾ. ಹಾಗೆಂದ ಮೇಲೆ ಅವರು ಬಿಜೆಪಿಯಲ್ಲಿರೋದು ಖಚಿತವಾಗಿದೆ. ಕಾಂಗ್ರೆಸ್‌ನಿಂದ ಆಫರ್ ಬಂದಿತ್ತು ಎಂದಾದರೆ ಅವರಿಗೆ ಆಫರ್ ನೀಡಿದವರು ಯಾರು ಎನ್ನುವುದನ್ನೂ ಸುಮಲತಾ ಹೇಳಬೇಕು ಎಂದು ತಿಳಿಸಿದರು.

ಸುಮಲತಾ ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಜಿ.ಟಿ.ದೇವೇಗೌಡರು ಹೇಳಿದ್ದಾರಲ್ಲ ಎಂದಾಗ, ಜಿ.ಟಿ.ದೇವೇಗೌಡರಿಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ. ಈಗ ಬಿಜೆಪಿ ಟಿಕೆಟ್ ಕೇಳಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದು ಸೂಕ್ತ ಅಲ್ಲ. ಅವರಿಗೆ ಕಾಂಗ್ರೆಸ್ ಬಾಗಿಲೂ ಮುಚ್ಚಿದೆಯಾ? ಇಲ್ವಾ? ಅವರನ್ನೇ ಕೇಳಿ. ಸ್ಟಾರ್ ಚಂದ್ರು ಓರ್ವ ಟಿಕೆಟ್ ಆಕಾಂಕ್ಷಿ. ಅಂತಿಮವಾಗಿ ಪಕ್ಷ ತೀರ್ಮಾನಿಸಲಿದೆ. ಇನ್ನೊಂದು ವಾರದಲ್ಲಿ ಬಹುತೇಕ ಅಭ್ಯರ್ಥಿಗಳು ಫೈನಲ್ ಆಗುವರು ಎಂದು ನುಡಿದರು.