ಭಾರತ ವಿಶ್ವಗುರು ಆಗುವತ್ತ ದಿಟ್ಟಹೆಜ್ಜೆ: ಯಡಿಯೂರಪ್ಪ

| Published : Feb 11 2024, 01:53 AM IST

ಭಾರತ ವಿಶ್ವಗುರು ಆಗುವತ್ತ ದಿಟ್ಟಹೆಜ್ಜೆ: ಯಡಿಯೂರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹಾವಾಡಿಗರ ದೇಶವಾಗಿದ್ದ ಭಾರತ ಈಗ ವಿಶ್ವಗುರು ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ‌. ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ಬಂಟರ ಸಮಾಜ ದೇಶಕ್ಕೆ ನೀಡಿದ ಕೊಡುಗೆ ಅರ್ಥಪೂರ್ಣವಾಗಿದೆ. ಬಂಟರು ಎಂದರೆ ಧೈರ್ಯಶಾಲಿಗಳು ಎಂದರ್ಥ. ಬಂಟ ಸಮುದಾಯದ ಸಾಧಕರ ಪಟ್ಟಿ ದೊಡ್ಡದಿದೆ. ಎಲ್ಲ ಕ್ಷೇತ್ರದಲ್ಲೂ ಬಂಟ ಜನಾಂಗದ ಬಹಳಷ್ಟು ಸಾಧಕರನ್ನು ನೋಡಲು ಸಾಧ್ಯವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಾವಾಡಿಗರ ದೇಶವಾಗಿದ್ದ ಭಾರತ ಈಗ ವಿಶ್ವಗುರು ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ‌. ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ ಬಂಟರ ಸಮಾಜ ದೇಶಕ್ಕೆ ನೀಡಿದ ಕೊಡುಗೆ ಅರ್ಥಪೂರ್ಣವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬಂಟರ ಯಾನೆ ನಾಡವರ ಸಂಘದಿಂದ ನಿರ್ಮಿಸಿರುವ ಶಿವಮೊಗ್ಗ ಬಂಟರ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬಂಟರು ಎಂದರೆ ಧೈರ್ಯಶಾಲಿಗಳು ಎಂದರ್ಥ. ಬಂಟ ಸಮುದಾಯದ ಸಾಧಕರ ಪಟ್ಟಿ ದೊಡ್ಡದಿದೆ. ಎಲ್ಲ ಕ್ಷೇತ್ರದಲ್ಲೂ ಬಂಟ ಜನಾಂಗದ ಬಹಳಷ್ಟು ಸಾಧಕರನ್ನು ನೋಡಲು ಸಾಧ್ಯವಾಗಿದೆ ಎಂದರು.

ಡಾ.ದೇವಿ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯಂತ ಸಾಧಕರು ನಮ್ಮ ಸುತ್ತಮುತ್ತ ಇದ್ದಾರೆ. ಬಂಟರ ಜನಾಂಗ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಚಿತ್ರರಂಗ, ವೈದ್ಯಕೀಯ, ಶಿಕ್ಷಣ ಕಲೆ, ಕ್ರೀಡಾಂಗಣದಲ್ಲಿ ಬಂಟರ ಸಾಮರ್ಥ್ಯ ಸಾಬೀತಾಗಿದೆ. ತುಳು ಭಾಷೆಗೆ ನಮ್ಮ ಕುಟುಂಬಕ್ಕೂ ಉತ್ತಮ ಸಂಬಂಧವಿದೆ‌. ಕಾಂತಾರ ಸಿನಿಮಾ ಯಶಸ್ವಿನ ಬಳಿಕ ತುಳುಭಾಷೆ ಮತ್ತು ಸಂಸ್ಕೃತಿ ಬಗ್ಗೆ ಹೆಚ್ಚಿಗೆ ಮಾತನಾಡುವುದಕ್ಕೆ ಏನೂ ಉಳಿದಿಲ್ಲ. ಈ ಬಂಟರ ಭವನ ಶಿವಮೊಗ್ಗ ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಿಗೆ ಸಾಕ್ಷಿಯಾಗಲಿ ಎಂದು ಹಾರೈಸಿದರು.

ಶಾಸಕ ಆರಗ ಜ್ಣಾನೇಂದ್ರ ಮಾತ‌ನಾಡಿ, ಬಂಟರು ಕರಾವಳಿಯಿಂದ ಇಲ್ಲಿಗೆ ಬಂದಾಗ ಕೂಲಿಕಾರರಾಗಿ ಬಂದರು. ಇವತ್ತು ತನ್ನ ಸುತ್ತ ಗೌರವ ಸಂಪಾದಿಸಿಕೊಂಡು ಉತ್ತಮ ಸ್ಥಾನದಲ್ಲಿ ನೆಲೆ‌ನಿಂತಿದ್ದಾರೆ. ಗತ್ತು, ಗೌರವಕ್ಕೆ ಬಂಟರು ಯಾವುದೇ ಕಮ್ಮಿ ಇಲ್ಲ‌. ನಾನು ನಾಲ್ಕು ಬಾರಿ ಶಾಸಕರಾಗಿದ್ದೇನೆ ಎಂದರೆ ತೀರ್ಥಹಳ್ಳಿ ಬಂಟರು ನನ್ನ ಕೈ ಹಿಡಿದಿದ್ದಾರೆ. ಇಂದು ಎಲ್ಲ ಕ್ಷೇತ್ರದಲ್ಲೂ ಬಂಟರ ಸಮುದಾಯದವರು ರಾರಾಜಿಸುತ್ತಿದ್ದಾರೆ. ದೇಶದಲ್ಲೇ ಬಂಟರ ಸಮಾಜ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.

ಬೆಂಗಳೂರಿನ ಎಂ.ಆರ್‌.ಜಿ. ಗ್ರೂಪ್‌ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಬಂಟರ ಸಮಾಜದ 10 ವರ್ಷಗಳ ಕನಸು ಇವತ್ತು ನನಸಾಗಿದೆ. ಬಂಟರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದೇವೆ. ಇವತ್ತು ಬಂಟರು ಯಾವ ಕ್ಷೇತ್ರದಲ್ಲಿ ಇದ್ದಾರೆ ಎಂಬುದಕ್ಕಿಂತ ಯಾವ ಕ್ಷೇತ್ರದಲ್ಲಿ ಇಲ್ಲ ಎಂಬಂತೆ ಎಲ್ಲೆಡೆ ಹಬ್ಬಿಕೊಂಡಿದ್ದೇವೆ. ಇಡೀ ಸಮಾಜ ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಬಂಡಾರಿ ಮಾತ‌ನಾಡಿ, ಬಂಟರ ಸಮಾಜಕ್ಕೆ ಯಡಿಯೂರಪ್ಪ ನೀಡಿದ ಕೊಡುಗೆ ಅನನ್ಯ. ಕಷ್ಟದ ಸಮುದಾಯದಲ್ಲೂ ಅವರು ಅನುದಾನ ನೀಡಿ, ಬಂಟರ ಸಮಾಜ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ಶಾಸಕ ಎಸ್‌.ಎನ್‌. ಚನ್ನಬಸಪ್ಪ, ವಿಧಾನ ಪರಿಷತ್ತು ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್‌. ಅರುಣ್‌, ಭಾರತಿ ಶೆಟ್ಟಿ, ಸಮಾಜದ ಪ್ರಮುಖರಾದ ಕಿಶೋರ್‌ ಶಟ್ಟಿ, ಪ್ರಭಾಕರ ಶೆಟ್ಟಿ, ಸುರೇಶ್‌ ಶೆಟ್ಟಿ, ಎನ್‌.ಎಲ್‌. ನಾಯಕ್‌, ರಾಜ್‌ ಮೋಹನ್‌ ಹೆಗ್ಡೆ, ರಾಜೀವ್‌ ಶೆಟ್ಟಿ, ಮಧುಕರ್‌ ಶೆಟ್ಟಿ, ದಿವಾಕರ್‌ ಶೆಟ್ಟಿ, ಕೃಷ್ಣ ಶೆಟ್ಟಿ, ಹಲವರಿದ್ದರು.

- - - ಬಾಕ್ಸ್ ಬಂಟರ ಭವನ 8 ವರ್ಷ ಶ್ರಮದ ಫಲ

ಸಂಘದ ಜಿಲ್ಲಾಧ್ಯಕ್ಷ ಸತೀಶಕುಮಾರ್ ಶೆಟ್ಟಿ ಮಾತನಾಡಿ, ಸುಮಾರು 8 ವರ್ಷಗಳ ಪರಿಶ್ರಮದ ಫಲವಾಗಿ ಈ ಬಂಟರ ಭವನ ನಿರ್ಮಾಣವಾಗಿದೆ‌. ಸಮಾಜದ ಬಾಂಧವರಿಗೆ ಹಾಗೂ ನಾಗರೀಕರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಈ ಭವನ ಕಟ್ಟಲಾಗಿದೆ‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಅನುದಾನ ನೀಡಿದರು. ಬಳಿಕ ಸಂಸದ ಬಿ.ವೈ.ರಾಘವೇಂದ್ರ ಎರಡೂವರೆ ಕೋಟಿ ಅನುದಾನ ಬಂದಿದೆ. ಪ್ರಕಾಶ್ ಕುಮಾರ್ ಶೆಟ್ಟಿ, ಮಂಜುನಾಥ ಭಂಡಾರಿಯಂಥ ಅನೇಕ ದಾನಿಗಳ ಸಹಕಾರದಿಂದ ಈ‌ ಭವನ ನಿರ್ಮಾಣವಾಗಿದೆ ಎಂದರು.

- - -

-10ಎಸ್ಎಂಜಿಕೆಪಿ03:

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಬಂಟರ ಯಾನೆ ನಾಡವರ ಸಂಘದಿಂದ ನಿರ್ಮಿಸಿರುವ ಶಿವಮೊಗ್ಗ ಬಂಟರ ಭವನವನ್ನು ಶನಿವಾರ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.