ಗುರು-ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ: ಪ್ರತಿಭಾ ಚಾಮಾ

| Published : May 13 2024, 12:05 AM IST

ಗುರು-ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ: ಪ್ರತಿಭಾ ಚಾಮಾ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಸಾಯಿ ಆದರ್ಶ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳ ಬಳಗದಿಂದ ನಗರದ ಪಟ್ನೆ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಗುರು-ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ ಇರುತ್ತದೆ. ವಿದ್ಯಾರ್ಥಿಯೆಂಬ ಹೂವು ಎಲ್ಲೆಡೆ ಸಂಚರಿಸಿ, ಸಾಧನೆ ಉತ್ತುಂಗ ಶಿಖರಕ್ಕೇರುತ್ತಾನೆ ಎಂದು ವಿದ್ಯಾರಣ್ಯ ಪ್ರೌಢ ಶಾಲೆ ಮುಖ್ಯಗುರು ಪ್ರತಿಭಾ ಚಾಮಾ ನುಡಿದರು.

ಅವರು 1994-95ನೇ ಸಾಲಿನ ಸಾಯಿ ಆದರ್ಶ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳ ಬಳಗದಿಂದ ನಗರದ ಪಟ್ನೆ ಸಭಾಂಗಣದಲ್ಲಿ ಜರುಗಿದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಿಯೆಂಬ ಶಿಕ್ಷಕ ಅದೇ ಶಾಲೆಯಲ್ಲಿ ಜೀವನಪೂರ್ತಿ ಶಿಕ್ಷಣ ನೀಡುತ್ತ ಜೀವನ ಸವೆಸುತ್ತಾನೆ. ಆದರೆ ವಿದ್ಯಾರ್ಥಿಗಳ ಸಾಧನೆಯಲ್ಲಿ ಸಂತಸ ಪಡುವವರೇ ನಿಜವಾದ ಶಿಕ್ಷಕರಾಗುತ್ತಾರೆ ಎಂದರು.

ಸಾಯಿ ಆದರ್ಶ ಶಾಲೆ ಅಪ್ಪಟ ಕನ್ನಡ ಮಾಧ್ಯಮ ಶಾಲೆಯಾಗಿದ್ದು, ಗಡಿಯಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಯಾವ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಇರುತ್ತೋ ಅದು ಶ್ರೇಷ್ಠ ಶಾಲೆ. ಏಕೆಂದರೆ ಕಲಿತ ಶಾಲೆಗೆ ಸಹಕಾರ ನೀಡುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಸ್ವಾಗತಾರ್ಹವಾದದ್ದು ಎಂದರು.

ಆರಂಭದಲ್ಲಿ ಶಿಕ್ಷಕರಾಗಿ ಸೇವೆಗೆ ಸೇರುವ ನಾವು ಬರುಬರುತ್ತಾ ಮಕ್ಕಳ ಅಂತರಾಳಕ್ಕೆ ಇಳಿದು ಪಾಠ ಮಾಡುತ್ತಲೇ ಮಕ್ಕಳ ಆಸಕ್ತಿಗನುಗುಣವಾಗಿ ಬೋಧಿಸಿ, ಅವರ ಹೃದಯ ಗೆದ್ದು ಗುರುವಾಗಿ ಪರಿವರ್ತನೆಯಾಗುತ್ತೇವೆ. ದಾರಿಯಲ್ಲಿ ವಿದ್ಯಾರ್ಥಿಗಳು ನಮಗೆ ಗುರುತಿಸಿ ವಂದಿಸಿದರೆ ಗುರುವಿನ ಜೀವನ ಸಾರ್ಥಕ ಎಂದರು.

ಸತ್ಯ ಸಾಯಿ ಸೇವಾ ಸಮಿತಿ ಅಧ್ಯಕ್ಷೆ ವಿಮಲಾಬಾಯಿ ವಿ.ಫುಲೇಕರ್ ಉದ್ಘಾಟಿಸಿ ಮಾತನಾಡಿ, ಕಲಿಸಿದ ಗುರುವಿಗೆ, ಕಲಿತ ಶಾಲೆಗೆ ಶಿರಬಾಗಿ ನಡೆದರೆ ಬದುಕು ಹಸನಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ತಮ್ಮ ಕೈಲಾದಷ್ಟು ಮುಂದಿನ ಪೀಳಿಗೆಗೆ ಸಹಕಾರವಾಗುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಬೇಕೆಂದರು.

ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ವೀರಶೆಟ್ಟಿ ಪಟ್ನೆ ಮಾತನಾಡಿ, ಪ್ರತೀ ವರ್ಷ ನಮ್ಮ ಬಳಗದಿಂದ ಒಂದು ಕಾರ್ಯಕ್ರಮ ಹಮ್ಮಿಕೊಂಡು ಒಂದೆಡೆ ಸೇರಿಸುವ ಪ್ರಯತ್ನ ಮಾಡುತ್ತೇವೆ. ಕೈಲಾದಷ್ಟು ನಿಧಿ ಸಂಗ್ರಹಿಸಿ ತೊಂದರೆಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಬಳಗದ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಸುಮಾರು ಒಂದು ತಿಂಗಳಿನಿಂದ ಕಾರ್ಯಕ್ರಮ ಆಯೋಜನೆಗಾಗಿ ಸಹಕರಿಸಿದ ಎಲ್ಲಾ ಹಳೆಯ ವಿದ್ಯಾರ್ಥಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಡಾ. ರಾಜಶೇಖರ ಶಿವಾಚಾರ್ಯರು ಗೋರ್ಟಾ, ಪೂಜ್ಯ ಪ್ರಭುದೇವ ಸ್ವಾಮೀ ಲಿಂಗಾಯತ ಮಹಾಮಠ ಗೋರ್ಟಾ ನೇತೃತ್ವ ವಹಿಸಿದ್ದರು. ವೇದಿಕೆ ಮೇಲೆ ಶಿಕ್ಷಣ ಚಿಂತಕ ಮಾರುತಿ ಪಂಚಭಾಯಿ, ಎಸ್.ಬಿ.ಕುಚಬಾಳ, ಶಿವಕುಮಾರ ಕಟ್ಟೆ, ತುಕಾರಾಮ ರೆಡ್ಡಿ, ಗುರುರಾಜ ಪಾಟೀಲ, ನಂದಿನಿ ಗಾಯಕವಾಡ, ಸಾವಿತ್ರಿ ಹೆಗ್ಗೆ, ಮೀನಾಕುಮಾರಿ ಚಂರ್ಕಿಕ, ಅರ್ಚನಾ ಕುಲಕರ್ಣಿ, ಜಗದೇವಿ ಉದಗೀರೆ, ಜ್ಯೋತಿ ಕುಲಕರ್ಣಿ, ಈಶ್ವರ ಮಲ್ಕಾಪೂರ, ಕಲ್ಯಾಣರಾವ ಚಳಕಾಪುರೆ ಸೇರಿ ಇತರರಿದ್ದರು.

ಗುರುವಂದನಾ ಆಯೋಜನಾ ಸಮಿತಿ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ, ನಂದಿನಿ ಗಾಯಕವಾಡ ನಿರೂಪಿಸಿ, ಮೀನಾಕುಮಾರಿ ಚಂಡರ್ಕಿ ವಂದಿಸಿದರು. ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.