ಸಮರ್ಪಕವಾಗಿ ನೀರು ಬಳಸಿ

| Published : May 13 2024, 12:05 AM IST

ಸಾರಾಂಶ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ವಿಜಯಪುರ ನಗರಕ್ಕೆ ನೀರಿನ ಕೊರತೆ ಉಂಟಾಗದಂತೆ ತಿಡಗುಂದಿ ಆಕ್ವಾಡೆಕ್ಟ್ ಮೂಲಕ ಸೈಪನ್ ಮೂಲಕ ಹಾಗೂ ಅರಕೇರಿ ಶಾಖಾ ಕಾಲುವೆಯಿಂದ ಪೈಪ್ಲೈನ್ ಅಳವಡಿಸಿ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ವಿಜಯಪುರ ನಗರಕ್ಕೆ ನೀರಿನ ಕೊರತೆ ಉಂಟಾಗದಂತೆ ತಿಡಗುಂದಿ ಆಕ್ವಾಡೆಕ್ಟ್ ಮೂಲಕ ಸೈಪನ್ ಮೂಲಕ ಹಾಗೂ ಅರಕೇರಿ ಶಾಖಾ ಕಾಲುವೆಯಿಂದ ಪೈಪ್‌ಲೈನ್ ಅಳವಡಿಸಿ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಗೆ ಭೇಟಿ ನೀಡಿ ಕೆರೆಗೆ ನೀರು ಹರಿಸುತ್ತಿರುವ ಕಾರ್ಯವನ್ನು ವಿಕ್ಷೀಸಿದ ಅವರು, ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾಧ್ಯತೆಯ ಮೇಲೆ ನೀಗಿಸಬೇಕು. ಈ ಕೆರೆಯ ನೀರು ಹಲವು ವಾರ್ಡ್‌ಗಳಿಗೆ ತಲುಪುವದರಿಂದ ಭೂತನಾಳ ಕೆರೆ ಭರ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಬರಗಾಲವಿದ್ದು, ಕೆರೆಯ ನೀರನ್ನು ಮಳೆಗಾಲ ಬರುವವರೆಗೂ ಮುಂದಿನ ಎರಡು ತಿಂಗಳುಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಬೇಕು. ವಾರ್ಡ್‌ಗಳಿಗೆ ನೀರು ಸಾಗಿಸುವ ಪೈಪ್‌ಲೈನ್ ಸೋರದಂತೆ ಹಾಗೂ ಸಾರ್ವಜನಿಕರು ನೀರು ಪೋಲು ಮಾಡದಂತೆ ಜಾಗೃತಿ ವಹಿಸಬೇಕು ಎಂದರು.

ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯದಿಂದ 2 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಹರಿಸಲಾಗಿದ್ದು, ಅನ್ಯ ಉದ್ದೇಶಗಳಿಗಾಗಿ ನೀರನ್ನು ಬಳಕೆ ಮಾಡುವುದನ್ನು ತಪ್ಪಿಸಬೇಕು. ಈಗಾಗಲೇ ಕಾಲುವೆ ಜಾಲದ 100 ಮೀಟರ್ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ವಾಚ್ ಆ್ಯಂಡ್ ವಾರ್ಡ್ ಮಾಡಬೇಕು ಎಂದು ಸೂಚಿಸಿದರು.

ಈ ವೇಳೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಗುರುರಾಜ ಭಂಗಿನವರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪರ್ವತಪ್ಪ ಉಪಸ್ಥಿತರಿದ್ದರು.