ಶ್ರೀ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ

| Published : May 13 2024, 12:05 AM IST

ಶ್ರೀ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಿರುನಕ್ಷತ್ರದ ದಿನವಾದ ಭಾನುವಾರ ಬೆಳಗ್ಗೆ 8 ಗಂಟೆಗೆ ರಾಮಾನುಜಾಚಾರ್ಯರಿಗೆ ಪುಷ್ಪಮಂಟಪ ವಾಹನೋತ್ಸವ ಈಯಲ್ ಶಾತ್ತುಮೊರೆ ನಡೆಯಿತು. ಇಳೆಯಾಳ್ವಾರ್ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥ ತಂದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಆಚಾರ್ಯ ರಾಮಾನುಜರು 11ನೇ ಶತಮಾನದಲ್ಲಿ 12 ವರ್ಷಗಳ ಕಾಲ ಮೇಲುಕೋಟೆಯಲ್ಲಿ ನೆಲಸಿ ಕ್ಷೇತ್ರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ದೊರೆ ಬಿಟ್ಟಿದೇವನಿಗೆ ವೈಷ್ಣವ ದೀಕ್ಷೆ ನೀಡಿ ಕರ್ನಾಟಕದಲ್ಲಿ ಪಂಚನಾರಾಯಣಸ್ವಾಮಿ ದೇವಾಲಯಗಳ ನಿರ್ಮಾಣದ ಜೊತೆಗೆ ಹಲವು ಕೊಡುಗೆ ನೀಡಿದ್ದರು.

ಶ್ರೀರಂಗಂ, ಕಂಚಿ, ತಿರುಮಲೆ ದಿವ್ಯಕ್ಷೇತ್ರಗಳಂತೆ ಮೇಲುಕೋಟೆಗೆ ವಿಶೇಷಸ್ಥಾನವನ್ನು ತಂದುಕೊಟ್ಟಿದ್ದರು. ಹೀಗಾಗಿ ಯದುಗಿರಿಯಲ್ಲಿ ರಾಮಾನುಜರ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮಗಳನ್ನು 10 ದಿನಗಳ ಕಾಲ ವೈಭವದಿಂದ ಆಚರಿಸುತ್ತಾ ಬಂದಿದ್ದು, ಪೇಶುಮ್ ರಾಮಾನುಜರಿಗೆ ಹಲವು ವೈವಿಧ್ಯಮಯ ಅಲಂಕಾರಗಳು, ಅಭಿಷೇಕ-ಮಹಾಭಿಷೇಕಗಳು, ಪುಷ್ಪ ಕೈಂಕರ್ಯ ಸೇವೆಗಳು, ವಾಹನೋತ್ಸವಗಳಾದಿ ಮಹಾರಥೋತ್ಸವ ನಡೆಯಿತು.

ಆಚಾರ್ಯರ ಜಯಂತಿಯ ಅಂಗವಾಗಿ ದೇವಾಲಯದ ಆವರಣವನ್ನು ತಳಿರು- ತೋರಣ, ಚಪ್ಪರಗಳಿಂದ ಸಿಂಗಾರ ಮಾಡಲಾಗಿತ್ತು. ಆಚಾರ್ಯರ ಸನ್ನಿಧಿಯ ಮೇಲ್ಭಾಗವನ್ನು ವಿವಿಧ ಹಣ್ಣು, ಪುಷ್ಪ ಹಾಗೂ ಲಾವಂಛದ ಅಲಂಕಾರ ಮಾಡಲಾಗಿತ್ತು.

ತಮಿಳುನಾಡು, ಆಂಧ್ರಪ್ರದೇಶ ಸೇರಿ ನಾಡಿದ ವಿವಿಧ ಭಾಗಗಳಿಂದಲೂ ಸಹಸ್ರಾರು ಭಕ್ತರು ಆಚಾರ್ಯರ ತಿರುನಕ್ಷತ್ರ ಮಹೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವೈಭವವನ್ನು ಕಣ್ತುಂಬಿಕೊಂಡರು. ಶನಿವಾರ ಮತ್ತು ಭಾನುವಾರ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ರಾಮಾನುಜಾಚಾರ್ಯರು ಹಾಗೂ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.

ತಿರುನಕ್ಷತ್ರ ಮಹೋತ್ಸವದಲ್ಲಿ ರಾಮಾನುಜರಿಗೆ ತಿರುಮಲ-ತಿರುಪತಿ ದೇವಸ್ಥಾನ ಶ್ರೀಪೆರಂಬೂದೂರು, ಸ್ವಾಮಿರಾಮಾನುಜರ ಸನ್ನಿಧಿ ಶ್ರೀರಂಗಂರಂಗನಾಥನ ಪ್ರಸಾದ ಸೇರಿ ಹಲವು ದಿವ್ಯಕ್ಷೇತ್ರಗಳಿಂದ ಮಾಲೆ- ಮರ್ಯಾದೆ ಸಹ ಸಮರ್ಪಣೆಯಾಯಿತು. 10 ದಿನಗಳ ಕಾಲ ನಡೆದ ತಿರುನಕ್ಷತ್ರ ಮಹೋತ್ಸವದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಜೊತೆಗೆ ಧಾರ್ಮಿಕ ವಿಧಿ-ವಿದಾನಗಳನ್ನು ಸಹ ಅರ್ಚಕ ವಿದ್ವಾನ್ ಬಿ.ವಿಆನಂದಾಳ್ವಾರ್, ಆಗಪ್ರವೀಣ ವಿದ್ವಾನ್‌ ಭಾ.ವಂ. ರಾಮಪ್ರಿಯ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಇವರೊಡನೆ ಕೈಂಕರ್ಯ ಪರರು, ಸ್ಥಾನೀಕರು ನೇಮೀ ಸೇವೆಗಳನ್ನು ಅನೂಚಾನ ಸಂಪ್ರದಾಯದಂತೆ ನೆರವೇರಿಸಿದರು. ಪಾರುತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ ಮತ್ತು ಪರಿಚಾರಕ ಎಂ.ಎನ್ ಪಾರ್ಥಸಾರಥಿ ಉತ್ಸವಗಳು ಸಕಾಲಕ್ಕೆ ನಡೆಯಲು ಕಾಳಜಿವಹಿಸಿ ಶ್ರಮಿಸಿದ್ದರು. ಧಾರ್ಮಿಕ ದತ್ತಿ ಇಲಾಖೆ ಹಿರಿಯ ಅಧಿಕಾರಿ ಯತಿರಾಜ ಸಂಪತ್ ಕುಮಾರನ್ , ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ರಾಮಾನುಜ ಜಯಂತಿಯಲ್ಲಿ ಭಾಗಿಯಾಗಿದ್ದರು.

ತಿರುನಕ್ಷತ್ರದ ದಿನವಾದ ಭಾನುವಾರ ಬೆಳಗ್ಗೆ 8 ಗಂಟೆಗೆ ರಾಮಾನುಜಾಚಾರ್ಯರಿಗೆ ಪುಷ್ಪಮಂಟಪ ವಾಹನೋತ್ಸವ ಈಯಲ್ ಶಾತ್ತುಮೊರೆ ನಡೆಯಿತು. ಇಳೆಯಾಳ್ವಾರ್ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥ ತಂದರು.

10.30ಕ್ಕೆ ಆಚಾರ್ಯರಿಗೆ ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ ನೆರವೇರಿತು. ನಂತರ ಚೆಲುವನಾರಾಯಣಸ್ವಾಮಿ ಪಾದುಕಾ ಮರ್ಯಾದೆಯೊಂದಿಗೆ, 5 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಮಧ್ಯಾಹ್ನದ ಕಾರ್ಯಕ್ರಮ ಮುಕ್ತಾಯವಾಯಿತು.