ಸಾರಾಂಶ
ಹುಬ್ಬಳ್ಳಿ: ತಮ್ಮ ಸರಳ ಉಪದೇಶಗಳಿಂದ ಭಕ್ತರಿಗೆ ಸನ್ಮಾರ್ಗ ತೋರುವವನೇ ಗುರು. ಅಂಥವರಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಅಗ್ರಗಣ್ಯರು ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಜಗದ್ಗುರು ಶ್ರೀಸಿದ್ಧಾರೂಢರ 190ನೇ ಜಯಂತ್ಯುತ್ಸವ, ಜಗದ್ಗುರು ಶ್ರೀ ಗುರುನಾಥಾರೂಢರ 115ನೇ ಶತಮಾನೋತ್ಸವ, ಶಿವರಾತ್ರಿ ಮಹೋತ್ಸವ, ಜಾತ್ರೆ ಅಂಗವಾಗಿ ಆಯೋಜಿಸಲಾಗಿರುವ ವಿಶ್ವವೇದಾಂತ ಪರಿಷತ್‌ನಲ್ಲಿ ಅವರು ಮಾತನಾಡಿದರು. ನವನೀತ ನವರತ್ನಮಾಲೆ ಎಂಬ ಗ್ರಂಥ ಬಿಡುಗಡೆ ಮಾಡಿದ ಅವರು, ಗುರು ವಚನದಿಂದಧಿಕ ಸುಧೆಯುಂಟೆ ಎಂಬ ವಿಷಯ ಮಾತನಾಡುತ್ತಾ, ಸಿದ್ಧಾರೂಢರು ವೈಭವದಿಂದ ಬದುಕಲಿಲ್ಲ. ಜನಸಾಮಾನ್ಯರ ಹಾಗೆ ಸರಳವಾಗಿ ಜೀವಿಸಿದರು. ತಮ್ಮ ನಡೆ ನುಡಿಗಳಿಂದ ಅವರು ಇಂದಿಗೂ ಭಕ್ತವೃಂದಕ್ಕೆ ಆಶೀರ್ವದಿಸುತ್ತಿರುವುದು ಸಂತಸದ ವಿಷಯ ಎಂದರು.ಭಕ್ತರಿಗೆ ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆ, ಸಂದೇಹ, ಅನುಮಾನಗಳನ್ನು ಪರಿಹರಿಸಿ, ಅವರನ್ನು ಭಗವದ್ಭಕ್ತಿಯತ್ತ ಸೆಳೆದು, ಅವರನ್ನು ಮುಕ್ತಿ ಮಾರ್ಗದಡೆಗೆ ಕರೆದೊಯ್ಯುವುದೇ ಮಹಾತ್ಮರ ಉದ್ದೇಶವಾಗಿರುತ್ತದೆ ಎಂದರು.
ಇಂಚಲ ಸಾಧು ಸಂಸ್ಥಾನ ಮಠದ ಜಗದ್ಗುರು ಡಾ. ಶಿವಾನಂದ ಭಾರತಿ ಸ್ವಾಮೀಜಿ ಆರೂಢ ಭಾರತಿ ಕಥಾ ಭಕ್ತಿಗೀತೆಗಳ ಸಿಡಿಯನ್ನು ಬಿಡುಗಡೆ ಮಾಡಿದರು.ಇಂಚಲದ ಪೂರ್ಣಾನಂದ ಸ್ವಾಮೀಜಿ, ಅಭಿನವ ವೆಂಕಟೇಶ್ವರ ಸ್ವಾಮೀಜಿ, ಪಂಡರಪುರದ ಶಾಂತಾದೇವಿ ತಾಯಿ, ತುಂಗಳದ ಅನುಸೂಯಾದೇವಿ ತಾಯಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಟ್ರಸ್ಟ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ. ಧರ್ಮದರ್ಶಿಗಳಾದ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ವಿನಾಯಕ ಘೋಡಕೆ, ಚನ್ನವೀರ ಮುಂಗುರವಾಡಿ, ವಿ.ಡಿ. ಕಾಮರೆಡ್ಡಿ, ರಮೇಶ ಬೆಳಗಾವಿ, ವಸಂತ ಸಾಲಗಟ್ಟಿ, ಗೀತಾ ಕಲಬುರ್ಗಿ, ಮ್ಯಾನೇಜರ್ ಈರಣ್ಣ ತುಪ್ಪದ, ಮಾಜಿ ಚೇರಮನ್ ಮಹೇಂದ್ರ ಸಿಂಘಿ ಉಪಸ್ಥಿತರಿದ್ದರು. ಬೀದರಿನ ಗಣೇಶಾನಂದ ಮಹಾರಾಜರು ನಿರೂಪಿಸಿದರು.ಪ್ರಪಂಚವೆಲ್ಲ ಈಶ್ವರಮಯ: ಬ್ರಹ್ಮವೇ ಸತ್ಯ, ಉಳಿದಿದ್ದು ಮಿಥ್ಯಹುಬ್ಬಳ್ಳಿ:
ಈಶಾವಾಸ್ಯಮಿದಂ ಸರ್ವಂ ಎಂಬ ಉಪನಿಷತ್ತಿನ ವಾಕ್ಯ ಕುರಿತು ಶುಕ್ರವಾರ ವಿಶ್ವವೇದಾಂತ ಪರಿಷತ್ವೇ ದಿಕೆಯಲ್ಲಿ ಭಾಗವಹಿಸಿದ ಸಾಧು ಸಂತರು, ಮಠಾಧೀಶರು, ಮಾತೆಯರು ವ್ಯಾಪಕ ಚಿಂತನ ಮಂಥನ ನಡೆಸಿದರು. ಜಗತ್ತೆಲ್ಲವೂ ಈಶ್ವರಮಯ ಎಂಬ ಸತ್ಯ ಎಂಬುದನ್ನು ತಿಳಿದು, ನಾನೆಂಬ ಅಹಂಕಾರವನ್ನು ತ್ಯಜಿಸಬೇಕೆಂದು ನೆರೆದ ಭಕ್ತವೃಂದಕ್ಕೆ ಕರೆ ನೀಡಿದರು.ನಾನು, ಇದು ನನ್ನದು, ನನಗೆ ಸೇರಿದ್ದು ಎಂಬ ಪೊಳ್ಳು ಅನಿಸಿಕೆಯನ್ನು ತೊಡೆದು ಹಾಕಿ, ಎಲ್ಲದರಲ್ಲೂ ಭಗವಂತನೇ ಇದ್ದಾನೆ ಎಂಬ ಅರಿವನ್ನು ಪಡೆಯಬೇಕು ಎಂದರು.ಸಾಮಾನ್ಯ ಜನರು ದೋಷಪೂರಿತ ಕನ್ನಡಕ ಧರಿಸಿ ಜಗತ್ತನ್ನು ನೋಡುವುದರಿಂದಲೇ ಈಶ್ವರನು ಎಲ್ಲೆಲ್ಲೂ ಇದ್ದಾನೆ ಎಂಬುದು ಕಾಣುವುದಿಲ್ಲ, ಸಾಧು ಸಂತರು ಜನರಿಗೆ ಸತ್ಯದ ದರ್ಶನ ಮಾಡಿಸುತ್ತಾರೆ, ಹಾಗಾಗಿ ಸುಳ್ಳಿನ ಮಾರ್ಗವನ್ನು ಬಿಟ್ಟು, ಸತ್ಯದ ದಾರಿಯನ್ನು ಹಿಡಿಯಲು ಸತ್ಸಂಗಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಉಪದೇಶಿಸಿದರು.ಹುಬ್ಬಳ್ಳಿ ಜನರು ಧನ್ಯ
ತಮ್ಮ ಅನುಗ್ರಹದಿಂದ ಸದ್ಭಕ್ತರನ್ನು ಉದ್ಧರಿಸಿರುವ ಜಗದ್ಗುರು ಸಿದ್ಧಾರೂಢರ ಮಠ ಪಡೆದ ಹುಬ್ಬಳ್ಳಿಯ ಜನರೇ ಧನ್ಯರು ಎಂದು ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.ವಿಶ್ವವೇದಾಂತ ಪರಿಷತ್ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವೇದಾಂತ ಯುಕ್ತಿ ಪ್ರಕಾಶ ಎಂಬ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಶ್ರೀಮಠದಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದೆ. ಲಕ್ಷಾಂತರ ಜನರು ಹಗಲು ರಾತ್ರಿ ಪ್ರಸಾದ ಸೇವಿಸುತ್ತಾರೆ. ಇದು ಎಲ್ಲಿಯೂ ಇಲ್ಲ ಎಂದರು. ನಿತ್ಯ ದಾಸೋಹ ಕಾರ್ಯಕ್ರಮಕ್ಕೆ ಅವರು ಐದು ಲಕ್ಷ ರೂಗಳ ಕಾಣಿಕೆ ನೀಡಿದರು. ಶ್ರೀಮಠದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಎಂದರು. ಬಿವಿಬಿ ಮಹಾವಿದ್ಯಾಲಯ ಪ್ರಾಚಾರ್ಯ ಆಶೋಕ ಶೆಟ್ಟರ್ ಉಪಸ್ಥಿತರಿದ್ದರು.