ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

| Published : Feb 21 2025, 11:45 PM IST

ಸಾರಾಂಶ

ಹಕ್ಕುಪತ್ರ ವಿತರಣೆ ಸಂಬಂಧ ಸಹಾಯಕ ಆಯುಕ್ತರು, ಪಾಲಿಕೆ ಆಯುಕ್ತರು, ತಹಸೀಲ್ದಾರರು, ಸಹಾಯಕ ಕಾರ್ಯ ಪಾಲಕ ಅಭಿವೃದ್ಧಿ ಮಂಡಳಿ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಬಳ್ಳಾರಿ: ಇಲ್ಲಿನ ರಾಜೀವ್‌ ಗಾಂಧಿ ನಗರದ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಜರುಗಿತು.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 34ರ ರಾಜೀವ್ ಗಾಂಧಿ ನಗರದ ನಿವಾಸಿಗಳು ಸುಮಾರು 60 ವರ್ಷಗಳಿಂದ ವಾಸವಾಗಿದ್ದು, ಹಕ್ಕುಪತ್ರ ವಿತರಣೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹಕ್ಕುಪತ್ರ ವಿತರಣೆ ಸಂಬಂಧ ಸಹಾಯಕ ಆಯುಕ್ತರು, ಪಾಲಿಕೆ ಆಯುಕ್ತರು, ತಹಸೀಲ್ದಾರರು, ಸಹಾಯಕ ಕಾರ್ಯ ಪಾಲಕ ಅಭಿವೃದ್ಧಿ ಮಂಡಳಿ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ವರದಿಯನ್ವ 2023ರ ಮಾರ್ಚ್ 15 ರಂದು ಜಿಲ್ಲಾಧಿಕಾರಿಗಳು ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಉಪ ನಿರ್ದೇಶಕರು ಭೂ ದಾಖಲೆ ಆದೇಶದ ಮೇರೆಗೆ ಸಹಾಯಕ ನಿರ್ದೇಶಕರು ಭೂ ದಾಖಲೆ ಕಾರ್ಯಲಯದಿಂದ 2023ರಲ್ಲಿಯೇ ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳಿಯವರಿಗೆ ಖಾತೆ ಬದಲಾವಣೆ ಹಾಗೂ ನಕ್ಷೆಯೂ ಆಗಿದೆ. ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಆಸ್ತಿ ಘೊಷಣಾ ಪತ್ರ (PR CARD) ಸಹ ಆಗಿದೆ. ಇಷ್ಟಾಗಿಯೂ ಹಕ್ಕುಪತ್ರ ವಿತರಣೆ ಸಂಬಂಧ ಯಾವುದೇ ಕ್ರಮ ಈವರೆಗೆ ಕೈಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಚಿತ್ರನಟ ಚೇತನ್, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ಕಟ್ಟೆಸ್ವಾಮಿ, ಆಮ್‌ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ, ದಲಿತ ಸಂಘರ್ಷ ಸಮಿತಿಯ (ಮೂರ್ತಿ ಬಣ) ಜಿಲ್ಲಾಧ್ಯಕ್ಷ ಶ್ರೀನಿವಾಸ ಭಂಡಾರಿ, ಕರ್ನಾಟಕ ಏಕೀಕರಣ ಸಮಿತಿಯ ರಾಜ್ಯಾಧ್ಯಕ್ಷ ಪಿ.ಶೇಖರ್, ದಲಿತ ಸೇನೆಯ ಮುರಳಿ ಕೃಷ್ಣ, ಮಾನಪ್ಪ, ರತ್ನಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಹನುಮೇಶ್ ಸೇರಿದಂತೆ ರಾಜೀವ್‌ಗಾಂಧಿ ನಗರ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹ್ಮದ್‌ ಜುಭೇರ್ ಸ್ವೀಕರಿಸಿದರು.