ಗ್ರಾ.ಪಂ. ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಒಲವು: ಸ್ಪೀಕರ್‌ ಯು.ಟಿ.ಖಾದರ್‌

| Published : Feb 21 2025, 11:45 PM IST

ಗ್ರಾ.ಪಂ. ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಒಲವು: ಸ್ಪೀಕರ್‌ ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಮಂಗಳೂರು ವಿವಿಯಲ್ಲಿ 2 ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕೊಣಾಜೆ

ಕನಿಷ್ಠ 2 ವರ್ಷಕ್ಕೊಮ್ಮೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳಗಳು ನಡೆಯಬೇಕು. ಅದಕ್ಕಾಗಿ ಗ್ರಾ.ಪಂ.ಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಯೋಜನೆ ರೂಪಿಸಲು ಸರ್ಕಾರ ಒಲವು ಹೊಂದಿದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್ ಹೇಳಿದ್ದಾರೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಗ್ರಾಮ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಗೆ ಗ್ರಾಮ ಪಂಚಾಯ್ತಿಗಳು ಮುಂದಾಗಬೇಕು. ಇದರಿಂದ ಗ್ರಾಮ ಮಟ್ಟದಲ್ಲಿ ಇರುವ ಸಾಹಿತಿಗಳನ್ನು ಗುರುತಿಸುವ ಕೆಲಸ ಆಗುತ್ತದೆ ಎಂದರು.

ಸಾಹಿತ್ಯ ಕ್ಷೇತ್ರವನ್ನು ಪೋಷಕರು ಮಕ್ಕಳಿಗೂ ಪರಿಚಯಿಸಬೇಕು. ಇದನ್ನು ಇನ್ನಷ್ಟು ಮುಂದುವರಿಸಲು ಬೆಂಗಳೂರಿನ ವಿಧಾನಸೌಧದಲ್ಲೂ ಫೆ.27ರಿಂದ ಮಾರ್ಚ್‌ 3ರ ವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಪ್ರತಿನಿಧಿಯಾಗಿರುವ ರಾಜಕಾರಣಿಗಳಿಗೆ ಸಾಹಿತ್ಯ ಅತ್ಯಗತ್ಯವಾಗಿದೆ. ಪುಸ್ತಕ ಓದಿನಿಂದ ಜ್ಞಾನ ವೃದ್ಧಿಸಿಕೊಂಡರೆ, ಸಮಾಜಕ್ಕೂ ಪ್ರಯೋಜನವಾಗುತ್ತದೆ ಎಂದರು.

ಸಾಹಿತ್ಯ ಕಿಟಕಿ ಇದ್ದ ಹಾಗೆ, ಇದೇ ಕಿಟಕಿಯಿಂದಲೇ ಊರು ನೋಡಬೇಕು. ಆಧುನಿಕ ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿ ಇದ್ದರೂ ತುಳುನಾಡಿನ ಸಂಸ್ಕೃತಿಯನ್ನು ತುಳಿದು ಹೋಗಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ತುಳುನಾಡಿನ ಮಣ್ಣಿಗೆ ಹಿರಿಯ ಶಕ್ತಿ ಇದೆ ಎಂದು ಯು.ಟಿ.ಖಾದರ್‌ ಹೇಳಿದರು.

ಜಾಲ ತಾಣಗಳಿಂದ ಭೀತಿ:

ಸಮ್ಮೇಳನ ಉದ್ಘಾಟಿಸಿದ ಪ್ರಸಿದ್ಧ ಕವಿ ಬಿ.ಆರ್‌.ಲಕ್ಷ್ಮಣ ರಾವ್‌ ಮಾತನಾಡಿ, ರಾಜಕೀಯ, ಧಾರ್ಮಿಕಕ್ಕಿಂತಲೂ ಸಾಮಾಜಿಕ ಜಾಲತಾಣಗಳು ಅಪಾಯಕಾರಿಯಾಗಿದೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ವಾತಾವರಣ ಇಲ್ಲ. ಏನು ಮಾತನಾಡಿದರೂ ಜಾಲತಾಣಗಳು ಏನೋ ಬಣ್ಣ ಹಚ್ಚಿ ಪ್ರಚುರಪಡಿಸುತ್ತಿದ್ದು, ಭೀತಿಯ ವಾತಾವರಣ ಇದೆ ಎಂದರು.

ಕನ್ನಡ ಭಾಷೆಯು ಇಂಗ್ಲಿಷ್‌, ಹಿಂದಿಯ ದಬ್ಬಾಳಿಕೆಯಿಂದ ನಲುಗುತ್ತಿದೆ. ಈ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಪುಸ್ತಕೋದ್ಯಮಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿಲ್ಲ. ಹಿಂದೆ ತೆರೆದ ಅಂಚೆಯಲ್ಲಿ ಪುಸ್ತಕ ಕಳುಹಿಸಬಹುದಿತ್ತು. ಈಗ ಪುಸ್ತಕದಷ್ಟೇ ಬೆಲೆಯನ್ನು ಅಂಚೆಯಲ್ಲಿ ಕಳುಹಿಸಲು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಹಿತ್ಯ, ಕಲೆಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದರು.

ಪುಸ್ತಕ ಉದ್ಯಮವಾಗಬಾರದು:

ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಪುಸ್ತಕ ಮತ್ತು ಇತರ ಮಳಿಗೆ ಉದ್ಘಾಟಿಸಿ ಮಾತನಾಡಿ, ಪುಸ್ತಕ ಯಾವತ್ತೂ ಉದ್ಯಮ ಆಗಬಾರದು. ಪುಸ್ತಕ ಎಂದರೆ ಸರಸ್ವತಿ, ಅದು ನಮ್ಮ ಹಕ್ಕು, ನಮ್ಮ ಧರ್ಮ ಆಗಬೇಕು. ಬರಹಗಾರರ ಉದ್ದೇಶ ಉದ್ಯಮ ಆಗಬಾರದು. ಶಿಕ್ಷಕರಲ್ಲೂ ಸಾಹಿತ್ಯಾಸಕ್ತಿ ಮೂಡಬೇಕು ಎಂದರು.

ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ವಿವಿ ಆಡಳಿತಾಧಿಕಾರಿ ರಾಜು ಮೊಗವೀರ, ಕೇರಳ ಗಡಿನಾಡ ಕಸಾಪ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್‌ ತೊಟ್ಟೆತ್ತೋಡಿ, ಕಸಾಪ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಂ.ಕೆ.ಮಾಧವ, ಗೌರವ ಕಾರ್ಯದರ್ಶಿ, ವಿನಯ ಆಚಾರ್ಯ, ಗೌರವ ಕೋಶಾಧಿಕಾರಿ ಐತ್ತಪ್ಪ ನಾಯ್ಕ, ವಿವಿಧ ತಾಲೂಕುಗಳ ಅಧ್ಯಕ್ಷರು ಇದ್ದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್‌ ಆಶಯ ಮಾತನ್ನಾಡಿದರು. ಸಮ್ಮೇಳನ ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ವಂದಿಸಿದರು. ವೇಣುಗೋಪಾಲ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಕಟೀಲ್‌ ನಿರೂಪಿಸಿದರು. ---------------ವಿವಿಯಲ್ಲಿ ಮೊದಲ ಸಾಹಿತ್ಯ ಸಮ್ಮೇಳನ

ವಿಶ್ವವಿದ್ಯಾಲಯಗಳ ಅಂಗಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ಮಂಗಳೂರು ವಿವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಈ ಮಾತನ್ನು ಅಳಿಸಿ ಹಾಕಿದೆ. ಅಲ್ಲದೆ ಉಳ್ಳಾಲ ಪ್ರತ್ಯೇಕ ತಾಲೂಕು ಆಗಿ ರಚನೆಗೊಂಡ ಬಳಿಕ ನಡೆದ ಪ್ರಥಮ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಇದಾಗಿದೆ. ಸ್ವಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್‌ ಯು.ಟಿ.ಖಾದರ್‌ ಅವರೇ ಈ ಸಮ್ಮೇಳನದ ಮಾರ್ಗದರ್ಶಕರಾಗಿದ್ದುದು ಗಮನಾರ್ಹ.

---------------