ಹುಣಸಗಿಯಲ್ಲಿ ವೇತನ ಇಲ್ಲದೆ ಅತಿಥಿ ಶಿಕ್ಷಕರ ಪರದಾಟ

| Published : Feb 21 2025, 11:45 PM IST

ಸಾರಾಂಶ

Guest teachers protest without salary in Hunasagi

-ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ವೇತನ ಬಿಡುಗಡೆಗೆ ಅತಿಥಿ ಶಿಕ್ಷಕರ ಒತ್ತಾಯ

----

ಬಸವರಾಜ ಎಂ. ಕಟ್ಟಿಮನಿ

ಕನ್ನಡಪ್ರಭ ವಾರ್ತೆ ಹುಣಸಗಿ

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಹಲವು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಹೀಗಾಗಿ ಅತಿಥಿ ಶಿಕ್ಷಕರ ಗೋಳು ಯಾರೂ ಕೇಳುವವರಿಲ್ಲದಂತಾಗಿದೆ ಎಂದು ಅತಿಥಿ ಶಿಕ್ಷಕರು ಅಳಲನ್ನು ತೋಡಿಕೊಂಡಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸುರಪುರ ಮತ್ತು ಹುಣಸಗಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10,000 ಹಾಗೂ ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ 10,500 ಕೊಡುವುದಾಗಿ ಹೇಳಿ ಅಗತ್ಯವಿರುವ ಪ್ರಾಥಮಿಕ ಶಾಲೆಗಳಿಗೆ ಒಟ್ಟು 928 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ.

ಪ್ರೌಢಶಾಲೆಯ ಒಟ್ಟು 151 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಸಂಖ್ಯೆ 962 ಇದರಲ್ಲಿ 928 ಹಾಗೂ ಪ್ರೌಢ ಶಾಲೆಗೆ ಮಂಜೂರಾದ ಅತಿಥಿ ಶಿಕ್ಷಕರ ಸಂಖ್ಯೆ 246 ಇದರಲ್ಲಿ 151 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಜೂನ್ 2024 ರಿಂದ ಸೆಪ್ಟೆಂಬರ-2024, ಜನವರಿ-2025ರ 1 ತಿಂಗಳ ಮಾತ್ರ ಗೌರವ ಸಂಭಾವನೆ ಪಾವತಿಸಲಾಗಿದೆ. ಅಕ್ಟೋಬರ್-2024ರಿಂದ ಡಿಸೆಂಬರ್-2024ರ ವರೆಗೆ ಮತ್ತು ಫೆಬ್ರವರಿ 2025 ಹಾಗೂ ಮಾರ್ಚ್ 2025ರ ಒಟ್ಟು ಐದು ತಿಂಗಳು ವೇತನ ಬಾಕಿ ಉಳಿದಿದೆ.

ಪ್ರೌಢಶಾಲಾ ಅತಿಥಿ ಶಿಕ್ಷಕರ ಜೂನ್-2024 ರಿಂದ ಆಗಸ್ಟ್-2024 ರವರೆಗೆ ಗೌರವ ಸಂಭಾವನೆ ಸಂಬಂಧಪಟ್ಟ ಅತಿಥಿ ಶಿಕ್ಷಕರ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಸೆಪ್ಟೆಂಬರ್-2024 ರಿಂದ ಮಾರ್ಚ್-2025ರವರೆಗೆ ಗೌರವ ಸಂಭಾವನೆ ಮರು ಹಂಚಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಒಟ್ಟು 928 ಶಿಕ್ಷಕರಲ್ಲಿ 838 ಅತಿಥಿ ಶಿಕ್ಷಕರಿಗೆ ಜನೆವರಿ ತಿಂಗಳು ವೇತನ ಪಾವತಿ ಮಾಡಿದ್ದಾರೆ. ಇನ್ನುಳಿದ 5 ತಿಂಗಳು ವೇತನ ಬಾಕಿ ಇದೆ. ಇದರಲ್ಲಿ 90 ಜನ ಅತಿಥಿ ಶಿಕ್ಷಕರಿಗೆ ಅಕ್ಟೋಬರ್ ದಿಂದ ಒಟ್ಟು 6 ತಿಂಗಳು ವೇತನ ಪಾವತಿಯಾಗಬೇಕಾಗಿದೆ ಎಂದು ಅತಿಥಿ ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.

ಅತಿಥಿ ಶಿಕ್ಷಕರಿಗೆ ಪಾವತಿಸಬೇಕಾದ ವೇತನ ಪಾವತಿಸಿದರೆ, ಅವರಿಗೂ ಎಲ್ಲರಂತೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಕೆಲವೊಂದು ಅತಿಥಿ ಶಿಕ್ಷಕರು ಪಟ್ಟಣದಿಂದ ಹಳ್ಳಿಯಲ್ಲಿರುವ ಶಾಲೆಗಳಿಗೆ ಪ್ರತಿದಿನ ಹೋಗಬೇಕಾದರೆ ಸಾರಿಗೆ ವೆಚ್ಚಕ್ಕೂ ಹಣ ಭರಿಸಲಾಗದಷ್ಟು ತೊಂದರೆ ಅನುಭವಿಸುವಂತಾಗಿದೆ. ಸೇವೆಗೆ ತಕ್ಕ ಹಣ ಕೈಸೇರಿದ್ದರೆ ಖುಷಿಯಿಂದ ಜೀವನ ನಡೇಸುತ್ತೇವೆ ಎಂದು ಕೆಲ ಅತಿಥಿ ಶಿಕ್ಷಕರು ಇಲಾಖೆ ವಿಳಂಬ ಧೋರಣೆ ವಿರುದ್ಧ ಕಿಡಿ ಕಾರಿದರು.

ಏಕೋಪಾಧ್ಯಾಯ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದಿದ್ದಾಗ ಶಾಲೆಯ ವ್ಯವಸ್ಥೆ ಅಚ್ಚುಕಟ್ಟಾಗಿ ತೂಗಿಸುವ ನಮಗೆ, ಸಕಾಲಕ್ಕೆ ಮಾಸಿಕ ಗೌರವಧನ ಸಿಗದಿರುವುದು ಚಿಂತೆಗೀಡು ಮಾಡಿದೆ ಎಂದು ಅತಿಥಿ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅನುದಾನ ಬಿಡುಗಡೆ ವಿಳಂಬದಿಂದಾಗಿ ಗೌರವ ಸಂಭಾವನೆ ಸಕಾಲಕ್ಕೆ ದೊರಕದೆ ತೀವ್ರ ನೋವು ಅನುಭವಿಸುತ್ತಿದ್ದೇವೆ. ಪರಿಣಾಮ ಅತಿಥಿ ಶಿಕ್ಷಕರು ಆರ್ಥಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಕೈಯಲ್ಲಿ ಕಾಸಿಲ್ಲದೆ ಖರ್ಚು ನಿಭಾಯಿಸಲು ಸಾಲದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಅತಿಥಿ ಶಿಕ್ಷಕರ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಅತಿಥಿ ಶಿಕ್ಷಕರ ಒತ್ತಾಯವಾಗಿದೆ.

----

ಕೋಟ್ ..1 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ವೇತನ ಪಾವತಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶ ಬಂದ ತಕ್ಷಣ ಬಾಕಿ ಉಳಿದಿರುವ ಅತಿಥಿ ಶಿಕ್ಷಕರ ವೇತನ ಪಾವತಿಸಲಾಗುವುದು.

-ಸತೀಶ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುರಪುರ.

------

ಫೋಟೊ: ಅತಿಥಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿರುವ ಸಾಂದರ್ಭಿಕ ಚಿತ್ರ ಬಳಸಲು ಕೋರಿಕೆ.