ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸ ಕಲುಷಿತಗೊಳ್ಳಲು ಎಡಪಂಥೀಯ ಚಿಂತಕರೂ ಕಾರಣ ಇರಬಹುದು ಎಂದು ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಹಾಗೂ ಕಥೆಗಾರ ರಘುನಾಥ ಚ.ಹ.ಹಾಗೂ ಲೇಖಕಿ ರೂಪ ಹಾಸನ ಅವರಿಗೆ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಕರ್ನಾಟಕದಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ನೋಡುತ್ತ ಬಂದವರಿಗೆ ಸಮಾಜವಾದಿ ಚಿಂತನೆ ಮತ್ತು ಎಡಪಂಥೀಯ ಚಿಂತನೆ ಇವುಗಳ ನಡುವಿನ ಸಹಕಾರಕ್ಕಿಂತ ಸಂಘರ್ಷವನ್ನು ಬದಿಗೆ ಸರಿಸಿದ ದೊಡ್ಡದೊಡ್ಡ ಸಾಹಿತಿಗಳೆನಿಸಿಕೊಂಡವರು ಎಡಪಂಥೀಯ ಚಿಂತಕರು ಸ್ವಲ್ಪ ಸಮಾಜವಾದಿ ಚಿಂತನೆಯ ಕಡೆ ಇದ್ದರು. ಇದು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸವನ್ನು ಕಲುಷಿತಗೊಳಿಸಿತು ಎಂದರು.
ಕರ್ನಾಟಕದ ರಾಜಕೀಯ ಚಲನವಲನೆಗಳೇ ನವ್ಯ ಚಳವಳಿಯ ಅಪಾರ ಪ್ರಭಾವ ಇದ್ದ ದಿನಗಳಲ್ಲಿಯೂ ಕೂಡ ಒಂದು ವಿಚಿತ್ರ ಭೂಮಾಲಿಕರ ಪರವಾಗಿ ನಿಂತದ್ದನ್ನು ನೋಡಬಹುದು. ಈ ಅನಿವಾರ್ಯತೆಯೇ ದಲಿತ, ಬಂಡಾಯ ಚಳವಳಿ ಹುಟ್ಟಿಕೊಳ್ಳಲು ಕಾರಣ ಎಂದರು.ಕವಿಗಳಾದ ಸಿದ್ದಲಿಂಗಯ್ಯ, ಕೃಷ್ಣಯ್ಯ, ಬರಗೂರು ರಾಮಚಂದ್ರಪ್ಪ ಯಾವುದೇ ರಿಯಾಯಿತಿಯನ್ನು ಬಯಸದ ಅತ್ಯುತ್ತಮ ಪ್ರಾಧ್ಯಾಪಕರು, ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಜಾತಿನಿಷ್ಠವಲ್ಲದ, ಪ್ರಾಮಾಣಿಕವಾದ, ಮಾನವೀಯವಾದ ರಾಜಕೀಯ ತಿಳಿವಳಿಕೆಯಿಂದ ಒಂದು ದಿಟ್ಟ ನಡೆಯನ್ನು ವಿದ್ಯಾರ್ಥಿಗಳಿಗೆ ಕೊಟ್ಟವರು ಎಂದರು.
ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಪರಂಪರೆಗೆ ಒಂದು ಉತ್ತಮ ನಿದರ್ಶನವಾಗಿ ಸಣ್ಣಗುಡ್ಡಯ್ಯ ಇದ್ದರು. ಸಮಾಜವಾದಿ ಚಿಂತನೆಯನ್ನು ಮುಂದೆ ತರುತ್ತಿದ್ದಂತಹ ಸಾಹಿತ್ಯಕ್ಕೂ ದಲಿತ ಬಂಡಾಯ ಸಾಹಿತ್ಯಕ್ಕೂ ಇದ್ದಂತಹ ವ್ಯತ್ಯಾಸ ಏನು ಮತ್ತು ಭಿನ್ನಾಭಿಪ್ರಾಯಗಳ ಸ್ವರೂಪ ಏನು ಎಂಬುದನ್ನು ಕರ್ನಾಟಕದಲ್ಲಿ ಪ್ರಗತಿಪರ ಚಿಂತನೆ ಅನುಭವಿಸಿದ ಏಳುಬೀಳುಗಳಲ್ಲಿ ಕಾಣಬಹುದು.ತುಮಕೂರು ಜಿಲ್ಲೆಗೆ ಸೀಮಿತವಾದ ವಿಶ್ವವಿದ್ಯಾನಿಲಯ ಇದೆ. ಜಿಲ್ಲೆಯ ಬೌದ್ಧಿಕ ಮತ್ತು ಸೃಜನಶೀಲ ಪರಂಪರೆ ಇದ್ದು, ಇದರ ವೈವಿಧ್ಯ ಮತ್ತು ವೈರುಧ್ಯಗಳ ಅಧ್ಯಯನವನ್ನು ಇನ್ನಷ್ಟು ಆಳವಾಗಿ ಮಾಡಬೇಕಾಗಿದೆ. ಇಲ್ಲಿ ವಿ.ಚಿಕ್ಕವೀರಯ್ಯ, ಎಚ್.ಜಿ.ಸಣ್ಣಗುಡ್ಡಯ್ಯ, ಕೆ.ಜಿ.ನಾಗರಾಜಪ್ಪ, ಜಿ.ಎಸ್.ಸಿದ್ದಲಿಂಗಯ್ಯ, ಬರಗೂರು, ಕೆ.ಬಿ.ಸಿದ್ದಯ್ಯ, ಲಲಿತಾ ಸಿದ್ದಬಸವಯ್ಯ, ಕೆ.ಎಂ.ಶಂಕರಪ್ಪ, ಬೂದಾಳ ನಟರಾಜ್ ಹೀಗೆ ಹಲವು ಹೆಸರುಗಳಿವೆ. ಈ ಎಲ್ಲಾ ಹೆಸರು ಕೂಡ ಕೇವಲ ಹೆಸರುಗಳಾಗಿದ್ದರೆ ಗೌರವ ಡಾಕ್ಟರೇಟ್ ಕೊಟ್ಟು ಸಮಾಧಾನಪಡಿಸಬಹುದಿತ್ತು. ಇವರೆಲ್ಲರೂ ಬೇರೆ ಬೇರೆ ವಿಚಾರಧಾರೆಗಳನ್ನು ಹೊಂದಿದ್ದವರು. ಚಿಕ್ಕ ಜಿಲ್ಲೆಯಲ್ಲಿ ಇಷ್ಟೊಂದು ವೈವಿಧ್ಯತೆ ಇರುವುದು ಮುಖ್ಯ ಎನಿಸುತ್ತದೆ ಎಂದು ಹೇಳಿದರು.ಬಹುಮುಖಿ ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರ ಆಶಯ ನುಡಿಗಳನ್ನಾಡಿ ಪ್ರೊ.ಸಣ್ಣಗುಡ್ಡಯ್ಯ ಅವರು ಇದೇ ಕಲಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. ಅವರದ್ದು ಬಿಸಿಲು ಬೆಳದಿಂಗಳ ವ್ಯಕ್ತಿತ್ವ. ವಿಮರ್ಶೆಯ ವಿಷಯದಲ್ಲಿ ಅವರು ಬಿಸಿಲು, ಮನುಷ್ಯ ಸಂಬಂಧದಲ್ಲಿ ಬೆಳದಿಂಗಳು. ಸಣ್ಣಗುಡ್ಡಯ್ಯನವರು ಮನುಷ್ಯ ಸಂಬಂಧಗಳಿಗೆ ಬಹಳ ಬೆಲೆ ಕೊಡುತ್ತಿದ್ದರು. ವಿಮರ್ಶೆ ವಿಷಯಕ್ಕೆ ಬಂದಾಗ ಆ ಯಾವ ಗುಣಗಳು ಇರುತ್ತಿರಲಿಲ್ಲ. ಸಣ್ಣಗುಡ್ಡಯ್ಯನವರ ವ್ಯಕ್ತಿತ್ವ ಬಿಸಿಲು ಬೆಳದಿಂಗಳ ವ್ಯಕ್ತಿತ್ವವಾಗಿತ್ತು ಎಂದರು. ಕಥೆಗಾರ ರಘುನಾಥ್ ಚ.ಹ ಮತ್ತು ರೂಪ ಹಾಸನ ಅವರಿಗೆ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.