ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಗಳು ಗುರಿ ತಲುಪಲು ದಾರಿ ತೋರುವವರು ಗುರುಗಳು. ಅದಕ್ಕಾಗಿಯೇ ತಂದೆ-ತಾಯಿ ಬಳಿಕ ಗುರುವಿಗೆ ಬಹುದೊಡ್ಡ ಸ್ಥಾನವನ್ನು ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಎಚ್.ಬಿ.ಶುಭದಾಯಿನಿ ಹೇಳಿದರು.ಇಲ್ಲಿನ ತಾವರೆಗೆರೆಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಪಠ್ಯದಲ್ಲಿರುವುದನ್ನು ಬೋಧನೆ ಮಾಡುವುದಷ್ಟೇ ಶಿಕ್ಷಕರ ಕೆಲಸವಲ್ಲ. ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದೂ ಶಿಕ್ಷಕರಾದವರ ಕರ್ತವ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವುದು. ಉತ್ತಮ ಆದರ್ಶಗಳನ್ನು ಮೂಡಿಸುವುದು ಅವರ ಜವಾಬ್ದಾರಿಯಾಗಿದೆ ಎಂದರು.ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ, ಕಷ್ಟಪಟ್ಟು ಓದಿಸಿದ ತಂದೆ-ತಾಯಂದಿರಿಗೆ ಹೆಸರು ಬರುವ ರೀತಿ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಾಗ ಗುರುಗಳು ವಿದ್ಯೆ ಕಲಿಸಿದ್ದಕ್ಕೆ ಸಾರ್ಥಕಭಾವ ಮೂಡುತ್ತದೆ ಎಂದರು.
ಶಿಕ್ಷಕ ರಾಮಮೂರ್ತಿ ಮಾತನಾಡಿ, ಓದಿಗೆ ವಯಸ್ಸು ಮುಖ್ಯವಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿರುವವರು ತಪ್ಪು ಮಾಡಿದರೆ ಅದನ್ನು ಸರಿಪಡಿಸಬಹುದು. ಶಿಕ್ಷಕರಾದವರು ತಪ್ಪು ಮಾಡಿದರೆ ಇಡೀ ಸಮುದಾಯವೇ ತಪ್ಪು ದಾರಿಗೆ ನಡೆಯುತ್ತದೆ. ಶಿಕ್ಷಕರು ಸಮಾಜದಲ್ಲಿ ಶ್ರೇಷ್ಠ ಗೌರವ ಸ್ಥಾನ ಪಡೆದಿದ್ದಾರೆ. ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ಉತ್ತಮವಾಗಿ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉದಾತ್ತ ಗುರಿಯನ್ನಿಟ್ಟುಕೊಂಡು ಓದಿನಲ್ಲಿ ತಲ್ಲೀನರಾಗಬೇಕು ಎಂದು ನುಡಿದರು.ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಿದಾಗ ಶಿಕ್ಷಕ ವೃತ್ತಿಯ ಘನತೆ-ಗೌರವಗಳು ಹೆಚ್ಚಾಗುತ್ತವೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ನೋಡುವುದನ್ನು ಬಿಟ್ಟು ಪುಸ್ತಕ ಹಿಡಿದು ಓದುವುದರಿಂದ ಜ್ಞಾನಾರ್ಜನೆ ಬರುತ್ತದೆ. ಓದುವ ಸಮಯದಲ್ಲಿ ಮಕ್ಕಳು ಮೊಬೈಲ್, ಸಾಮಾಜಿಕ ಜಾಲ ತಾಣಗಳಿಂದ ದೂರ ಉಳಿಯಬೇಕು. ಉತ್ತಮವಾದ ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಉಮೇಶ್, ಶಿಕ್ಷಕರಾದ ಅರುಣಕುಮಾರಿ, ಕಾರ್ತಿಕಾ, ಶ್ರುತಿ, ಪ್ರೀತಿ, ರಶ್ಮಿ, ಜೀವಿತಾ, ಅಖಿಲಾ, ಚಂದ್ರಕಲಾ, ಪವಿತ್ರಾ, ಸ್ವಾಮಿ, ಮರ್ದಿನಿ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಕಾರ್ಯಕರ್ತರಾದ ನಾಗಮಣಿ, ಜ್ಯೋತಿ, ಸುವರ್ಣಾವತಿ, ರಾಧಾ, ಸರ್ವಮಂಗಳ, ಮಮತಾ, ಶಬರಿನ್ ತಾಜ್, ಗುಣ, ಅನುರಾಧಾ, ಜಯಲಕ್ಷ್ಮೀ, ಶಕುಂತಲಾ ಇತರರಿದ್ದರು.