ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಸಿಬಿ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೋರ್ವನನ್ನು ಅಪಹರಿಸಿ, ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಯಲಹಂಕ ನ್ಯೂಟೌನ್ ನಿವಾಸಿ ತಿರುಮಲ (28), ವಿದ್ಯಾರಣ್ಯಪುರ ನಿವಾಸಿ ಶಾಂತ್ ಕುಮಾರ್(44), ಯಲಹಂಕ ನಿವಾಸಿ ಪ್ರೇಮ್ ಸಾಯಿ (30), ಆರ್.ಟಿ ನಗರ ನಿವಾಸಿ ರಂಜಿತ್ ರಾವ್(31) ಮತ್ತು ಆರ್.ಟಿ ನಗರ ನಿವಾಸಿ ನಮೀತ್ (29) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೋವಾ ಕಾರು ಮತ್ತು 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಜೆ.ಪಿ ನಗರದ ನಿವಾಸಿ ಮಿಥುಲ್ ಎಂಬುವರನ್ನು ಅಪಹರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.ಜೂ.19 ರಂದು ನಗರದ ಸಿಟಿ ಇನ್ಸ್‌ಟಿಟ್ಯೂಟ್ ಬಳಿ ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳು ಜಿಮ್ ತರಬೇತುದಾರ ಮಿಥುಲ್ ಅವರಿಗೆ ತಾವು ಸಿಸಿಬಿ ಪೊಲೀಸರು ಎಂದು ಸುಳ್ಳು ಹೇಳಿದ್ದರು. ನಿನ್ನ ವಿರುದ್ಧ ಡ್ರಗ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದರು. ನಂತರ ಅಪಹರಣ ಮಾಡಿ ಹಲ್ಲೆ ನಡೆಸಿ 40,000 ರು. ಪಡೆದು ಬಿಟ್ಟು ಕಳುಹಿಸಿದ್ದರು. ಮರು ದಿನ ಕರೆ ಮಾಡಿ 5 ಲಕ್ಷ ರು. ಹಣ ನೀಡುವಂತೆ ಒತ್ತಾಯ ಮಾಡಿದ್ದರು.ಈ ಸಂಬಂಧ ಮಿಥುಲ್, ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ಮುಂದಿನ ತನಿಖೆಗಾಗಿ ಶಂಕರಪುರ ಪೊಲೀಸ್ ಠಾಣೆ ಪೊಲೀಸರು, ಸಿಸಿಬಿ ವರ್ಗಾಹಿಸಿದ್ದರು. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಉಳಿದ ಮೂವರಿಗೆ ಬಲೆ ಬೀಸಿದ್ದಾರೆ.
