ಸಾರಾಂಶ
ಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಡೆದಿರುವ ಮಳೆರಾಯನ ಆರ್ಭಟ ಗುರುವಾರವೂ ಮುಂದುವರೆದಿದೆ. ಕಣಕುಂಬಿಯಲ್ಲಿ 167 ಮಿ.ಮೀ, ಜಾಂಬೋಟಿಯಲ್ಲಿ 102 ಮಿ.ಮೀ, ಅಸೋಗಾ 56 ಮಿ.ಮೀ, ಗುಂಜಿ 78 ಮಿ.ಮೀ, ಲೋಂಡಾ 92 ಮಿ.ಮೀ, ಖಾನಾಪುರ ಪಟ್ಟಣ 75 ಮಿ.ಮೀ, ನಾಗರಗಾಳಿ 33 ಮಿ.ಮೀ, ಕಕ್ಕೇರಿ 31.4 ಮಿ.ಮೀ ಮತ್ತು ಬೀಡಿ ಭಾಗದಲ್ಲಿ 20 ಮಿ.ಮೀಗಳಷ್ಟು ಮಳೆ ಸುರಿದಿದೆ. ಇದುವರೆಗೂ ಮಳೆಯಿಂದಾಗಿ ತಾಲೂಕಿನಲ್ಲಿ ಯಾವುದೇ ಆಸ್ತಿಹಾನಿ ಅಥವಾ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಡೆದಿರುವ ಮಳೆರಾಯನ ಆರ್ಭಟ ಗುರುವಾರವೂ ಮುಂದುವರೆದಿದೆ. ಗುರುವಾರ ಕಣಕುಂಬಿಯಲ್ಲಿ 167 ಮಿ.ಮೀ, ಜಾಂಬೋಟಿಯಲ್ಲಿ 102 ಮಿ.ಮೀ, ಅಸೋಗಾ 56 ಮಿ.ಮೀ, ಗುಂಜಿ 78 ಮಿ.ಮೀ, ಲೋಂಡಾ 92 ಮಿ.ಮೀ, ಖಾನಾಪುರ ಪಟ್ಟಣ 75 ಮಿ.ಮೀ, ನಾಗರಗಾಳಿ 33 ಮಿ.ಮೀ, ಕಕ್ಕೇರಿ 31.4 ಮಿ.ಮೀ ಮತ್ತು ಬೀಡಿ ಭಾಗದಲ್ಲಿ 20 ಮಿ.ಮೀಗಳಷ್ಟು ಮಳೆ ಸುರಿದಿದೆ. ಇದುವರೆಗೂ ಮಳೆಯಿಂದಾಗಿ ತಾಲೂಕಿನಲ್ಲಿ ಯಾವುದೇ ಆಸ್ತಿಹಾನಿ ಅಥವಾ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.ತಾಲೂಕಿನ ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಭೀಮಗಡ ಮತ್ತು ಲೋಂಡಾ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಪ್ರಾರಂಭಗೊಂಡ ಮಳೆ ಗುರುವಾರದವರೆಗೆ ನಿರಂತರವಾಗಿ ಸುರಿಯುವ ಮೂಲಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸತತಧಾರೆಯ ಪರಿಣಾಮ ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, .ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಬೈಲ್, ಕುಂಬಾರ, ಕರೀಕಟ್ಟಿ, ತಟ್ಟಿ, ಕೋಟ್ನಿ ಮತ್ತಿತರ ಹಳ್ಳಗಳೂ ಸಹ ರಭಸದಿಂದ ಹರಿಯುತ್ತಿವೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಹಬ್ಬನಹಟ್ಟಿ ಗ್ರಾಮದ ಸ್ವಯಂಭೂ ಆಂಜನೇಯ ದೇವಾಲಯ ಸಂಪೂರ್ಣವಾಗಿ ಮಲಪ್ರಭೆಯಲ್ಲಿ ಜಲಾವೃತಗೊಂಡಿದೆ.ಸತತಧಾರೆಗೆ ತಾಲ್ಲೂಕಿನ ಎಂಟು ಗ್ರಾಮಗಳ ಸಂಪರ್ಕ ರಸ್ತೆಗಳ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಚಿಕಲೆ-ಪಾರವಾಡ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ಕಾಮಶಿನಕೊಪ್ಪ-ಯಡೋಗಾ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ದೇವಾಚಿಹಟ್ಟಿ-ಜಾಂಬೋಟಿ, ಅಸೋಗಾ-ಭೋಸಗಾಳಿ ಮತ್ತು ಅಮಟೆ-ಗೋಲ್ಯಾಳಿ ಗ್ರಾಮಗಳ ಗ್ರಾಮಗಳ ನಡುವಿನ ಸೇತುವೆ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ನೇರಸಾಗ್ರಾಮದ ಬಳಿ ಮಹದಾಯಿ ನದಿ ಮತ್ತು ಭಂಡೂರಿ ಹಳ್ಳದ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವ ಪರಿಣಾಮ ಗವ್ವಾಳಿ, ಪಾಸ್ತೊಳಿ ಮತ್ತು ಕೊಂಗಳಾ ಗ್ರಾಮಗಳಿಗೆ ಮುಖ್ಯವಾಹಿನಿಯಿಂದ ಸಂಪರ್ಕ ಕಡಿತಗೊಂಡಿದೆ. ಹೆಮ್ಮಡಗಾ ಗ್ರಾಮದಿಂದ ಭೀಮಗಡ ವನ್ಯಧಾಮ ವ್ಯಾಪ್ತಿಯ ದೇಗಾಂವ, ಮೆಂಡಿಲ್ ಮತ್ತಿತರ ಗ್ರಾಮಗಳಿಗೆ ಸಾಗುವ ರಸ್ತೆಗಳು ಜಲಾವೃತಗೊಂಡ ಕಾರಣ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ಮಲಪ್ರಭಾ ನದಿಯ ಸಂಪರ್ಕ ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವ ಕಾರಣ ನದಿತೀರದ ವಿವಿಧ ಗ್ರಾಮಗಳ ನಡುವಿನ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಇಡೀ ದಿನ ತಾಲೂಕಿನ ಹೆಮ್ಮಡಗಾ, ಶಿರೋಲಿ, ಗುಂಜಿ, ಹಲಸಿ, ನಾಗರಗಾಳಿ, ಇಟಗಿ, ಪಾರಿಶ್ವಾಡ, ಗಂದಿಗವಾಡ, ಬೀಡಿ, ಚಾಪಗಾಂವ, ಕೊಡಚವಾಡ, ಮುಗಳಿಹಾಳ, ದೇವಲತ್ತಿ, ನಂದಗಡ, ರಾಮಗುರವಾಡಿ, ಓಲಮನಿ, ಬೈಲೂರು, ತೋರಾಳಿ ಹಾಗೂ ಸುತ್ತಲಿನ ಭಾಗದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ. ಭೀಮಗಡ ಅರಣ್ಯದಲ್ಲಿ ಕಳೆದೊಂದು ವಾರದಿಂದ ಉತ್ತಮ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಮಹದಾಯಿ ನದಿ ಮತ್ತು ಅದನ್ನು ಸಂಗಮಿಸುವ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಕಣಕುಂಬಿ ಸೇರಿದಂತೆ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲೂ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ ಮಲಪ್ರಭಾ ನದಿಯಲ್ಲೂ ನೀರಿನ ಹರಿವು ಹೆಚ್ಚಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ರಸ್ತೆ, ಸೇತುವೆಗಳು ಜಲಾವೃತಗೊಂಡಿದ್ದರಿಂದ ಕಾನನದಂಚಿನ ಭಾಗದ ಗ್ರಾಮಗಳ ಜನರ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮಳೆಗೆ ವಿವಿಧೆಡೆ ಸಂಪರ್ಕ ರಸ್ತೆ ಮತ್ತು ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ ಮೂವತ್ತಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಲೋಂಡಾ, ಗುಂಜಿ, ನೀಲಾವಡೆ, ಶಿರೋಲಿ ಮತ್ತು ಜಾಂಬೋಟಿ ಭಾಗದ ಕಾನನದಂಚಿನ ಭಾಗದ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.