ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಚನ ಸಾಹಿತ್ಯವು ಜನಸಾಮಾನ್ಯರ ಅನುಭವದಿಂದ ಮೂಡಿಬಂದ ಸಮಾಜ ಸುಧಾರಣೆಯ ಮಹಾಕಾವ್ಯ. ಅಂತಹ ವಚನಗಳನ್ನು ಮನೆಮನೆ ಅಲೆದು ಸಂಗ್ರಹಿಸಿ, ನಶಿಸಿಹೋಗದಂತೆ ಕಾಪಾಡುವಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅನನ್ಯವಾದುದು ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಜನಸಾಮಾನ್ಯರ ಆಡುಭಾಷೆಯಲ್ಲಿ ಬರೆದ ವಚನಗಳನ್ನು ಒಟ್ಟುಗೂಡಿಸುವ ಕೆಲಸವಾಗದಿದ್ದರೆ ಆ ಶ್ರೇಷ್ಠ ಸಾಹಿತ್ಯವು ಕಾಲಗರ್ಭದಲ್ಲಿ ಕಣ್ಮರೆಯಾಗುತ್ತಿತ್ತು ಎಂದರು.
12ನೇ ಶತಮಾನದಲ್ಲಿ ವಚನಕಾರರು ತಮ್ಮ ಸ್ವ-ಅನುಭವದ ಮೂಲಕ ಮೂಢನಂಬಿಕೆಗಳನ್ನು ವಿರೋಧಿಸಿ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಗಾಗಿ ವಚನಗಳನ್ನು ರಚಿಸಿದರು. ತಾಳೆಪತ್ರಗಳಲ್ಲಿದ್ದ ಸುಮಾರು 250ಕ್ಕೂ ಹೆಚ್ಚು ವಚನಕಾರರ ವಚನಗಳನ್ನು ಮನೆಮನೆಗೆ ಅಲೆದು ಸಂಗ್ರಹಿಸಿ, ಸಂರಕ್ಷಿಸಿ, ಗ್ರಂಥ ರೂಪದಲ್ಲಿ ಹೊರತಂದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಆದ್ದರಿಂದಲೇ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.ಇಂದಿನ ಇಂಗ್ಲಿಷ್ ಮಾಧ್ಯಮದ ಹಾವಳಿಯ ನಡುವೆ ಕನ್ನಡ ಭಾಷೆ ಕಡೆಗಣಿಸಬಾರದು. ಬೇರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿ ಆದರೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ. ಕನ್ನಡದ ಅಸ್ಮಿತೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಯುವಜನತೆ ಸಂಕಲ್ಪ ಮಾಡಬೇಕು ಎಂದರು.
ಸರ್ಕಾರಿ ಕಲಾ ಕಾಲೇಜು ಕನ್ನಡ ಉಪನ್ಯಾಸಕ ಡಾ.ಜಿ.ಎನ್ ಯಶೋಧರ ಮಾತನಾಡಿ, ಯಾವ ವ್ಯಕ್ತಿ ಸಮಾಜಕ್ಕಾಗಿ ಏನಾದರೂ ಮಹತ್ವದ ಕೊಡುಗೆ ನೀಡಿ ಹೋಗಿರುತ್ತಾನೋ, ಆತ ಭೌತಿಕವಾಗಿ ನಮ್ಮನ್ನು ಅಗಲಿದರೂ ತನ್ನ ಸತ್ಕಾರ್ಯಗಳ ಮೂಲಕ ಸದಾ ಜನರ ನೆನಪಿನಲ್ಲಿ ಜೀವಂತವಾಗಿರುತ್ತಾನೆ. ಅಂತಹ ಸದಾ ಸ್ಮರಣೀಯ ವ್ಯಕ್ತಿತ್ವ ಡಾ.ಫ.ಗು.ಹಳಕಟ್ಟಿ ಅವರದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಡಾ.ಫ.ಗು.ಹಳಕಟ್ಟಿಯವರು ಬದುಕು, ಬರಹ ಹಾಗೂ ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಗಮನ ಸೆಳೆಯಿತು. ಸುಮಾರು 14ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಗೌರವ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಲೇಖಕ ಆನಂದ್ ಕುಮಾರ್, ಪ್ರಾಧ್ಯಾಪಕ ಡಾ.ಧನಕೋಟಿ ಇದ್ದರು. ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದ ಮಾರುತಿ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು.