ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ಅಕ್ರಮ ಖಾತೆ ಮೂಲಕ ಕ್ರಯಪತ್ರ, ಆರ್‌ಟಿಸಿ ಸೃಷ್ಟಿಸಿ ಖಾತೆ ಮಾಡಿಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಮಹಾಲೆ, ಸರ್ವೇ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ಸಿ. ನೇಶಾ ಸಾರಿಕ ಮಲ್ಲಿ ಬಂಧಿತ ಆರೋಪಿಗಳು. ಎಡಿಎಲ್‌ಆರ್ ಮಹಮದ್ ಹುಸೇನ್ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ ೬೧(೨), ೨೦೪, ೩೧೬ (೫), ೩೧೮ (೩), ೩೩೫, ೩೩೬ (೩), ೩೪೦ (೨), ೩೪೧, ೧೯೦ ಬಿಎನ್‌ಎಸ್-೨೦೨೩ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನ ಯಾದವ್, ಮಹದೇವಪುರ ಗ್ರಾಪಂ ಪಿಡಿಒ ಜಿ.ಆರ್.ನಾಗೇಂದ್ರ, ಸಹಾಯಕ ಭೂ ದಾಖಲೆಗಳ ನಿರ್ದೇಶಕ ಮಹಮದ್ ಹುಸೇನ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರುಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ನಿತಿನ್ ಪ್ರೇಮಾನಂದ ಮಹಾಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸೋನಾರಕೇರಿ ಗ್ರಾಮದವನು. ಎಡಿಎಲ್‌ಆರ್ ಮಹಮದ್ ಹುಸೇನ್ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರು. ಹುಸೇನ್ ಈ ಹಿಂದೆ ಕರ್ತವ್ಯನಿರ್ವಹಿಸಿದ ಸಕಲೇಶಪುರ, ಹುಣಸೂರಿನ ಎಡಿಎಲ್‌ಆರ್ ಕಚೇರಿಗಳಲ್ಲಿ ನಿತಿನ್ ಪ್ರೇಮಾನಂದ ಮಹಾಲೆ ಎಂಬ ಖಾಸಗಿ ವ್ಯಕ್ತಿಯನ್ನು ಹೊರಗುತ್ತಿಗೆ ನೌಕರನ ಸೋಗಿನಲ್ಲಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿರ್ವಹಿಸಿಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.
ಎಡಿಎಲ್‌ಆರ್ ಮನೆಯಲ್ಲಿ ₹೧.೪೦ ಲಕ್ಷ ವಶ:
ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದ ಏಳನೇ ಕ್ರಾಸ್‌ನಲ್ಲಿ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು ಆ ಮನೆಯಲ್ಲಿ ₹೧,೪೦,೨೦೦ ನಗದು ಹಣ ದೊರಕಿದ್ದು, ಹಣದ ಬಗ್ಗೆ ಸ್ಪಷ್ಟನೆ ನೀಡದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡಿದ್ದಾರೆ. ನಿತಿನ್ ಪ್ರೇಮಾನಂದ ಮಹಾಲೆ ಹೊಂದಿರುವ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರು. ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ.
ಶ್ರೀರಂಗಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಿತಿನ್ ಪ್ರೇಮಾನಂದ ಮಹಾಲೆ ಸರ್ಕಾರ ಅಥವಾ ಇಲಾಖೆಯಿಂದ ಅಧಿಕೃತವಾಗಿ ನೇಮಕವಾಗದಿದ್ದರೂ ಅನಧಿಕೃತವಾಗಿ ಡಾಟಾ ಎಂಟ್ರಿ ಆಪರೇಟರ್ ಆಗಿ ಆಕಾರ್‌ಬಂದ್ ದಾಖಲೆಗಳ ಡಿಜಿಟಲೀಕರಣ ಮಾಡುವ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ.ಅನಧಿಕೃತ ಡಿಜಿಟಲೀಕರಣ:
ಸರ್ವೇ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ಸಿ.ನೇಶಾಸಾರಿಕ ಮಲ್ಲಿ ಅವರು ತಾವು ಬಳಸುವ ಮೋಜಿಣಿ ತಂತ್ರಾಂಶದ ಬಳಕೆದಾರರ ಯೂಸರ್‌ನೇಮ್, ಪಾಸ್‌ವರ್ಡ್‌ಗಳನ್ನು ಹಾಗೂ ತಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ನಿತಿನ್ ಪ್ರೇಮಾನಂದ ಮಹಾಲೆ ಅವರಿಗೆ ನೀಡಿ ಅವರಿಂದ ಅನಧಿಕೃತವಾಗಿ ಆಕಾರ್‌ಬಂದ್‌ನ್ನು ಮೋಜಿಣಿ ತಂತ್ರಾಂಶದಲ್ಲಿ ಡಿಜಿಟಲೀಕರಣ ಮಾಡಿಸುತ್ತಿರುವುದು ಕಂಡುಬಂದಿದೆ. ಮಹಮದ್ ಹುಸೇನ್ ಸೇರಿದಂತೆ ಇವರೆಲ್ಲರೂ ಪ್ರತಿ ಮಾಹೆ ₹೧೫ ಸಾವಿರ ಹಣವನ್ನು ವೈಯಕ್ತಿಕವಾಗಿ ನಿತಿನ್ ಪ್ರೇಮಾನಂದ ಮಹಾಲೆಗೆ ನೀಡುತ್ತಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ರೆವಿನ್ಯೂ, ಸರ್ಕಾರಿ ಇಲಾಖೆಯ ವ್ಯವಹರಣೆಗೆ ಸಂಬಂಧಿಸಿದ ಸರ್ಕಾರಿ ದಾಖಲೆ, ನಮೂನೆಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಅಸಲಿ ದಾಖಲೆಗಳೆಂದು ಬಳಕೆ ಮಾಡುವ ಉದ್ದೇಶದಿಂದ ನಿತಿನ್ ಪ್ರೇಮಾನಂದ ಮಹಾಲೆ ಹಾಗೂ ಮಹಮದ್ ಹುಸೇನ್ ಅವರು ನಕಲಿ ಸೀಲುಗಳು, ನಕಲಿ ಸಹಿ, ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಶದಲ್ಲಿಟ್ಟುಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ.
ಸರ್ಕಾರಿ ನೌಕರನಂತೆ ಬಿಂಬಿಸಿಕೊಳ್ಳುತ್ತಿದ್ದ:ಮಹಾಲೆ ಸರ್ಕಾರಿ ಸೋಗಿನಲ್ಲಿ ಹುಣಸೂರು ಎಡಿಎಲ್‌ಆರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗ ಎಸ್.ಪ್ರಿಯಾ ಎಂಬುವರಿಗೆ ಅವಾಚ್ಯಶಬ್ಧಗಳಿಂದ ಮಾತನಾಡಿ ಹಣ ಕೇಳಿರುವ ಬಗ್ಗೆ ದೂರನ್ನು ಎಡಿಎಲ್‌ಆರ್ ಮಹಮದ್ ಹುಸೇನ್ ಅವರಿಗೆ ನೀಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಎಸ್.ಪ್ರಿಯಾ ನೀಡಿರುವ ದೂರಿನಲ್ಲಿ ನಿತಿನ್ ಪ್ರೇಮಾನಂದ ಮಹಾಲೆಯನ್ನು ಲೈಸೆನ್ಸ್ ಸರ್ವೇಯರ್ ಎಂದು ನಮೂದಿಸಿದ್ದು, ಸಾರ್ವಜನಿಕರಿಗೆ ಆ ವ್ಯಕ್ತಿಯನ್ನು ಸರ್ಕಾರಿ ನೌಕರ ಎಂಬಂತೆ ಬಿಂಬಿಸಿರುವುದು ಕಂಡುಬಂದಿದೆ.
ಪಾಂಡವಪುರ ಉಪವಿಭಾಗಾಧಿಕಾರಿ, ಶ್ರೀರಂಗಪಟ್ಟಣ ತಹಸೀಲ್ದಾರ್ ಮತ್ತು ಮಹದೇವಪುರ ಗ್ರಾಮ ಪಂಚಾಯಿತಿ ಕಚೇರಿಗಳ ಶೋಧನಾ ಕಾರ್ಯ ಮುಂದುವರೆದಿದೆ.ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನಿಲ್‌ಕುಮಾರ್, ಪೊಲೀಸ್ ನಿರೀಕ್ಷಕರಾದ ಎಂ.ರವಿಕುಮಾರ್, ಬಿ.ಪಿ.ಬ್ಯಾಟರಾಯಗೌಡ, ಆರ್.ಜಿ.ಲೇಪಾಕ್ಷಮೂರ್ತಿ ಇತರರು ಉಪ ಲೋಕಾಯುಕ್ತ ಬಿ.ವೀರಪ್ಪ ಆದೇಶದಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ನಾಲ್ಕು ಸ್ಥಳಗಳಲ್ಲಿ ಶೋಧನೆ ನಡೆಸಿದ್ದರು.