ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಹೊಸ ಸಾವಯವ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಯುವಕರು ಸಾವಯವ ಕೃಷಿಯ ಪಥದಲ್ಲಿ ಮುನ್ನಡೆಯಲು ಸಂಕಲ್ಪ ಮಾಡಿದ್ದಾರೆ. ರೈತರೂ ಇವರೊಟ್ಟಿಗೆ ಸೇರಿದರೆ ೨೦೨೯ಕ್ಕೆ ಜಿಲ್ಲೆಯನ್ನು ಸಂಪೂರ್ಣ ಸಾವಯವ ಕೃಷಿ ಜಿಲ್ಲೆಯಾಗಿ ಪರಿವರ್ತಿಸಬಹುದು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ರೈತರ ಶಾಲೆ ವತಿಯಿಂದ ಆಯೋಜಿಸಿದ್ದ ರೈತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕನ್ನಾಗಿ ಘೋಷಿಸಿದೆ. ಜಿಲ್ಲೆಯ ಏಳೂ ತಾಲೂಕುಗಳು ಸಾವಯವ ಕೃಷಿ ತಾಲೂಕುಗಳಾಗಿ ಬದಲಾಗಬೇಕು. ಇಡೀ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಮಾದರಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೃಷಿಯ ಬಗೆಗಿನ ರೈತರ ಆಲೋಚನೆಗಳು, ಯೋಜನೆಗಳು ಬದಲಾಗಬೇಕು. ಕೃಷಿಯಲ್ಲಿ ಒಳ್ಳೆಯ ಸಂಸ್ಕೃತಿ, ಹೊಸ ವಿಧಾನಗಳು, ಹೊಸ ಬದಲಾವಣೆಗೆ ಯುವಕರ ಪಡೆ ಸಿದ್ಧವಾಗಿದೆ. ಅವರಿಂದ ಸಾವಯವ ಕೃಷಿಯಲ್ಲಿ ಕ್ರಾಂತಿ ಸೃಷ್ಟಿಸುವ ಶಕ್ತಿ ಇದೆ. ಅದಕ್ಕೆ ಬಹಳಷ್ಟು ಅವಕಾಶಗಳೂ ಇವೆ. ಸಾಂಪ್ರದಾಯಿಕ ಬೆಳೆಗಳಾದ ಕಬ್ಬು, ಭತ್ತಕ್ಕಷ್ಟೇ ಸೀಮಿತರಾಗದೆ ಎಣ್ಣೆಕಾಳು, ತೋಟಗಾರಿಕೆ, ತರಕಾರಿಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯುವತ್ತ ರೈತರು ಆಕರ್ಷಿತರಾಗಬೇಕು ಎಂದು ಸಲಹೆ ನೀಡಿದರು.ಸ್ವಯಂ ಸಾವಯವ ಗೊಬ್ಬರ ಉತ್ಪಾದನೆ ಮಾಡಿಕೊಳ್ಳುವುದು ಹೇಗೆ, ಮಣ್ಣಿನ ಫಲವತ್ತತೆಯನ್ನು ರಕ್ಷಿಸಿಕೊಂಡು ಹೋಗುವ ಬಗ್ಗೆ ಅರಿವು ಮತ್ತು ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಅದನ್ನು ಮೊದಲು ರೈತರು ಅಳವಡಿಸಿಕೊಂಡು ಇತರರನ್ನೂ ಅನುಸರಿಸುವಂತೆ ಮಾಡಿದರೆ ಮುಂದಿನ ಮೂರು ವರ್ಷದಲ್ಲಿ ಸಾವಯವ ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲು ಸಾಧ್ಯವಿದೆ ಎಂದರು.
ಕೂಲಿಯಾಳುಗಳ ಕೊರತೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಮುಯ್ಯಾಳು ಸಂಸ್ಕೃತಿ, ಕಬ್ಬು ಕಡಿಯುವ ಸಂಸ್ಕೃತಿಯನ್ನು ಮತ್ತೆ ಹುಟ್ಟುಹಾಕಬೇಕು. ಶ್ರಮವನ್ನು ಪರಸ್ಪರ ದಾನ ಮಾಡಿಕೊಂಡು ಬದುಕುವುದನ್ನು ಕಲಿತಾಗ ಒಕ್ಕಲುತನ ಬೆಳವಣಿಗೆ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಖಚಿತವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ನ್ಯೂಟ್ರಿಕಾರ್ಪ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಮೋಹನ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಜಿ.ಅಜಯ್, ಕೆಂಪೇಗೌಡ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಸ್.ನವೀನ್‌ಕುಮಾರ್, ಗೌರವಾಧ್ಯಕ್ಷ ಎಂ.ಎನ್.ಚಂದ್ರಶೇಖರ್, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಸಮಾಜಸೇವಕ ಮುದ್ದನಘಟ್ಟ ಮಹಾಲಿಂಗೇಗೌಡ, ರೈತರ ಶಾಲೆಯ ಸತ್ಯಮೂರ್ತಿ, ಕಾರಸವಾಡಿ ಮಹದೇವು ಇತರರಿದ್ದರು.
-------ದಲ್ಲಾಳಿಗಳ ಅಪ್ಪ ಸರ್ಕಾರ: ಮಧುಚಂದನ್
ಕನ್ನಡಪ್ರಭ ವಾರ್ತೆ ಮಂಡ್ಯಕಬ್ಬು, ಭತ್ತ, ಗೋಧಿ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಅವರಿಗಾಗಿ ಬೆಳೆಯುತ್ತಿಲ್ಲ. ದಲ್ಲಾಳಿಗಳಿಗೂ ಅಲ್ಲ. ದಲ್ಲಾಳಿಗಳ ಅಪ್ಪನಾಗಿರುವ ಸರ್ಕಾರಕ್ಕೆ ಬೆಳೆಯುತ್ತಿದ್ದಾರೆ. ಅದರಿಂದ ಸರ್ಕಾರಕ್ಕೆ ಕೋಟ್ಯಂತರ ಆದಾಯ ದೊರಕುತ್ತಿದ್ದರೆ, ರೈತರಿಗೆ ಚಿಲ್ಲರೆ ಕಾಸಷ್ಟೇ ಸಿಗುತ್ತಿದೆ ಎಂದು ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧುಚಂದನ್ ಖಾರವಾಗಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ರೈತರ ಶಾಲೆ ವತಿಯಿಂದ ಆಯೋಜಿಸಿದ್ದ ರೈತೋತ್ಸವ ಕಾರ್ಯಕ್ರಮದಲ್ಲಿ ಬೆಳೆಗಳ ಮೌಲ್ಯವರ್ಧನೆ ಮತ್ತು ಯಶಸ್ವಿ ಮಾರುಕಟ್ಟೆ ತಂತ್ರ ಕುರಿತು ಮಾತನಾಡಿದರು.ರೈತರು ಒಂದು ಎಕರೆಯಲ್ಲಿ ಕಬ್ಬು ಬೆಳೆದರೆ ಕಾರ್ಖಾನೆಗಳು ₹೧ ಲಕ್ಷ ಸಂಪಾದಿಸಿದರೆ, ಸರ್ಕಾರಕ್ಕೆ ₹೪೦ ಲಕ್ಷ ಆದಾಯ ಹೋಗುತ್ತಿದೆ. ಕಬ್ಬಿನಿಂದ ತಯಾರಾಗುವ ಸ್ಪಿರಿಟ್‌ನಿಂದ ಸರ್ಕಾರ ಆದಾಯ ಗಳಿಸುತ್ತಿದೆ. ಈ ವರ್ಷ ಸರ್ಕಾರದ ಅಬಕಾರಿ ಆದಾಯ ₹೪೦ ಸಾವಿರ ಕೋಟಿಗಳಾಗಿದೆ. ಅಂದರೆ, ಸರ್ಕಾರದ ಬಜೆಟ್ ಗಾತ್ರದಲ್ಲಿ ೧/೬ ಭಾಗದಷ್ಟು ಆದಾಯವನ್ನು ಕಬ್ಬು ಬೆಳೆಗಾರರು ನೀಡುತ್ತಿದ್ದಾರೆ. ಆದರೆ, ರೈತರು ಟನ್ ಕಬ್ಬಿಗೆ ₹೩೫೦೦ ನೀಡುವಂತೆ ಬೀದಿಗಿಳಿಯುತ್ತಿದ್ದಾರೆ. ಇದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಅದೇ ರೀತಿ ಭತ್ತ, ಗೋಧಿ ಬೆಳೆಗಳಿಂದ ಒಂದು ಎಕರೆಗೆ ಕೇಂದ್ರ-ರಾಜ್ಯ ಸರ್ಕಾರಕ್ಕೆ ₹೧.೨೦ ಲಕ್ಷ ಆದಾಯ ಹೋಗುತ್ತಿದೆ. ರೈತರಿಗೆ ಸಿಗುತ್ತಿರುವುದು ಪುಡಿಗಾಸು ಮಾತ್ರ. ಅದಕ್ಕಾಗಿ ರೈತರ ಆಲೋಚನೆಗಳು ಬದಲಾಗಬೇಕು. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸುವ ಕಡೆ ಹೆಚ್ಚು ಆಸಕ್ತಿ ವಹಿಸುವಂತೆ ಸಲಹೆ ನೀಡಿದರು.ರಾಸಾಯನಿಕ ಕೃಷಿಯಿಂದ ಮೊದಲು ರೈತರು ಹೊರಗೆ ಬರಬೇಕು. ಮಂಡ್ಯ ಸಕ್ಕರೆ ನಾಡಿನ ಬದಲಾಗಿ ಸಾವಯವ ಮಂಡ್ಯ ಆಗಬೇಕು. ರೈತರ ಪಾಲಿನ ನಿಜವಾದ ದೇವರು ಭೂಮಿತಾಯಿ. ಅದಕ್ಕೆ ನಾವು ವಿಷ ಹಾಕುತ್ತಿದ್ದೇವೆ. ಅದು ನಿಲ್ಲಬೇಕು. ಪೋಷಕಾಂಶಗಳನ್ನು ಕೊಟ್ಟು ಮಣ್ಣಿಗೆ ಮರುಜೀವ ನೀಡಿದರೆ ಕೊನೆಯವರೆಗೂ ನಮ್ಮನ್ನು ಕಾಪಾಡುತ್ತದೆ ಎಂದರು.
ರೈತರು ಮೊದಲು ನಿಮಗೋಸ್ಕರ, ನಿಮ್ಮೂರಿಗೋಸ್ಕರ ಬೆಳೆ ಬೆಳೆಯಿರಿ. ಅಲ್ಲೇ ಮೌಲ್ಯವರ್ಧನೆ ಮಾಡಿ. ಅಲ್ಲೇ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಉತ್ಪನ್ನಗಳು ಗುಣಮಟ್ಟದಿಂದ ಕೂಡಿದ್ದರೆ ಮಾರುಕಟ್ಟೆ ವಿಸ್ತರಣೆ ಸುಲಭ ಸಾಧ್ಯವಾಗಲಿದೆ. ಈಗಾಗಲೇ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕನ್ನಾಗಿ ಘೋಷಿಸಲಾಗಿದೆ. ಅದೇ ರೀತಿ ಸಾವಯವ ಕೃಷಿ ಜನಾಂದೋಲನವಾಗಿ ರೂಪುಗೊಂಡು ಎಲ್ಲೆಡೆ ವ್ಯಾಪಸಲಿ ಎಂಬ ಆಶಯ ವ್ಯಕ್ತಪಡಿಸಿದರು.------------
ಮಣ್ಣಿನ ರಸಸಾರ ಹೆಚ್ಚಿಸುವುದು ಸುಲಭ: ಜಿ.ಪಿ.ಮೂರ್ತಿಕನ್ನಡಪ್ರಭ ವಾರ್ತೆ ಮಂಡ್ಯ
ರಸಸಾರವನ್ನು ಕಳೆದುಕೊಂಡಿರುವ ಮಣ್ಣಿಗೆ ಮತ್ತೆ ಅದನ್ನು ಸೇರಿಸುವುದು ಬಹಳ ಸುಲಭ. ಅದನ್ನು ರೈತರು ಅರಿತುಕೊಂಡರೆ ಮಣ್ಣಿಗೆ ಮರುಜೀವ ನೀಡಬಹುದು ಎಂದು ಸಾವಯವ ಕೃಷಿ ಸಲಹೆಗಾರ ಜಿ.ಪಿ.ಮೂರ್ತಿ ಹೇಳಿದರು.ರೈತೋತ್ಸವ ಕಾರ್ಯಕ್ರಮದಲ್ಲಿ ಸಾವಯವ ಕೃಷಿಗೆ ಮಣ್ಣಿನ ಗುಣಧರ್ಮ ಮತ್ತು ಸುಧಾರಣೆ ಕುರಿತು ಮಾತನಾಡಿ. ಮಣ್ಣಿನ ರಸಸಾರ ಶೇ.೫.೭ ರಿಂದ ಶೇ.೭.೫ರವರೆಗೆ ಇರಬೇಕು. ಈ ಪ್ರಮಾಣದ ರಸಸಾರವಿದ್ದರೆ ಸಾವಯವ ಕೃಷಿಗೆ ಅನುಕೂಲವಾಗಲಿದೆ. ಜಿಲ್ಲೆಯ ಮಣ್ಣಿನ ರಸಸಾರ ಶೇ.೭.೮೯ ಇದ್ದರೆ, ನಗುವನಹಳ್ಳಿ ಭಾಗದಲ್ಲಿ ಶೇ.೯ರಷ್ಟಿದೆ. ಇದರಿಂದ ನಮ್ಮ ಸುಂದರ ದೇಹಕ್ಕೆ ವಿಷಾಹಾರವನ್ನು ನೀಡುತ್ತಿದ್ದೇವೆ ಎಂದು ಎಚ್ಚರಿಸಿದರು.
ಮಣ್ಣಿನ ರಸಸಾರ ಹೆಚ್ಚಿಸಬೇಕೆಂದರೆ ಜಿಪ್ಸಂ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಅದು ಸಿಗದಿದ್ದ ಪಕ್ಷದಲ್ಲಿ ಒಂದು ಎಕರೆಗೆ ಎರಡು ಕೆಜಿ ಹುಣಸೆಹಣ್ಣನ್ನು ಬಿಸಿನೀರಿನಲ್ಲಿ ಬೇಯಿಸಿ ಅದರೊಂದಿಗೆ ಎರಡು ಕೆಜಿ ಬೆಲ್ಲವನ್ನು ಸೇರಿಸಿ ಏಳು ದಿನಗಳ ಕಾಲ ಇಟ್ಟು ಎಂಟನೇ ದಿನ ಭೂಮಿಗೆ ನೀಡಿದರೆ ಮಣ್ಣಿನ ರಸಸಾರ ಹೆಚ್ಚುತ್ತದೆ ಎಂದು ರೈತರಿಗೆ ವಿವರಿಸಿದರು.೭೦ ವರ್ಷಗಳ ಹಿಂದೆ ದೇಶದಲ್ಲಿ ೨೦ ಕೋಟಿ ಜನರಿದ್ದರೆ ೩೦ ಕೋಟಿ ಜಾನುವಾರುಗಳಿದ್ದವು. ಪ್ರಸ್ತುತ ೧೨೦ ಕೋಟಿ ಜನಸಂಖ್ಯೆ ಇದ್ದು ೨೦ ಕೋಟಿ ಜಾನುವಾರುಗಳೂ ಇಲ್ಲ. ಭಾರತದ ಒಟ್ಟು ಭತ್ತದ ತಳಿಗಳು ೧.೫೦ ಲಕ್ಷ ಇದ್ದರೆ, ಉಳಿದಿರುವ ಭಾರತದ ೨೦ ಸಾವಿರ ತಳಿಗಳೂ ಫಿಲಿಫೈನ್ಸ್ ದೇಶದಲ್ಲಿವೆ. ನಮ್ಮ ದೇಶದಲ್ಲಿರುವುದೆಲ್ಲಾ ಕೇವಲ ಹೈಬ್ರೀಡ್ ತಳಿಗಳು. ದೇಸೀಯ ತಳಿಗಳು, ದೇಸಿಯ ಹಸುಗಳನ್ನು ಮರೆತಿದ್ದರಿಂದಲೇ ರೋಗಗಳು ಹೆಚ್ಚಾಗಲು ಕಾರಣವಾಯಿತು ಎಂದರು.
--------ಭುಜವಿಲ್ಲದ ಹಸು ಹಸುವಲ್ಲ: ಅಕ್ಷಯ್ ಆಳ್ವ
ಭುಜವಿಲ್ಲದ ಹಸು ಹಸುವಲ್ಲ. ಅಂತಹ ಹಸುಗಳು ನೀಡುವ ಹಾಲು, ತುಪ್ಪ, ಬೆಣ್ಣೆಯಲ್ಲಿ ಯಾವುದೇ ಸತ್ವ ಇರುವುದಿಲ್ಲ. ದೇಸೀಯ ತಳಿ ಹಸುಗಳ ಉತ್ಪನ್ನಗಳೇ ಶ್ರೇಷ್ಠ ಎಂದು ಮಲೆನಾಡ ಗಿಡ್ಡ ಸಂವರ್ಧನ ಹಾಗೂ ಸಂರಕ್ಷಣಾ ಅಭಿಯಾನದ ಅಧ್ಯಕ್ಷ ಅಕ್ಷಯ್ ಆಳ್ವ ತಿಳಿಸಿದರು.ದೇಸೀಯ ಹಸುಗಳ ಸಾಕಾಣೆಯನ್ನು ಪ್ರೋತ್ಸಾಹಿಸಲು, ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಮಲೆನಾಡ ಗಿಡ್ಡ ತಳಿಯ ಹಸುಗಳನ್ನು ರೈತರಿಗೆ ನೀಡಲಾಗುತ್ತಿದೆ. ಒಂದು ಗಂಡು ಮತ್ತೊಂದು ಹೆಣ್ಣು ಹಸುವನ್ನು ನೀಡಲಾಗುತ್ತಿದೆ. ಹುಟ್ಟಿದ ಕರು ಗಂಡು ಎಂದ ಕೂಡಲೇ ಅದನ್ನು ಕಸಾಯಿಖಾನೆಗೆ ಸಾಗಿಸುವುದು ರೂಢಿಯಾಗಿದೆ. ಆದರೆ, ಅದರಿಂದ ಸಿಗುವ ತೊಪ್ಪೆ, ಗಂಜಲವನ್ನು ಜೀವಾಮೃತವಾಗಿ ಭೂಮಿಗೆ ಉಣಿಸಿದರೆ ಮರು ಜೀವ ಪಡೆದುಕೊಳ್ಳುತ್ತದೆ ಎಂಬ ಸತ್ಯವನ್ನು ರೈತರು ಮರೆತಿದ್ದಾರೆ ಎಂದರು.
ಹಾಲಿಗಾಗಷ್ಟೇ ದೇಸೀಯ ಹಸುಗಳನ್ನು ಸಾಕದೆ ಅವುಗಳಿಂದ ಸಿಗುವ ಗೊಬ್ಬರ, ಗಂಜಲಕ್ಕಾಗಿ ಹಸುಗಳನ್ನು ಸಾಕಿ. ಅವುಗಳಿಂದ ಸಿಗಬಹುದಾದ ಹಾಲು, ತುಪ್ಪ, ಬೆಣ್ಣೆಯಲ್ಲಿ ಹೆಚ್ಚು ಸತ್ವ ಮತ್ತು ಶಕ್ತಿ ಇದೆ ಎಂದು ತಿಳಿಸಿದರು.