ಸಾರಾಂಶ
ಹಳಿಯಾಳ: ರಾಜ್ಯ ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ. 6ರಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ ಅವರ ಮುಂದಾಳತ್ವದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಚಳವಳಿಗೆ ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘ ಸಂಪೂರ್ಣ ಬೆಂಬಲ ಘೋಷಿಸಿದೆ.ಪ್ರಕಟಣೆ ಹೊರಡಿಸಿರುವ ಹಳಿಯಾಳ ತಾಲೂಕ ಕಬ್ಬು ಬೆಳೆಗಾರರ ಸಂಘವು, ಫೆ. 16ರಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಬೇಕು ಹಾಗೂ ಕಳೆದ ಸಾಲಿನ ರೈತರ ಕಬ್ಬಿನ ಬಾಕಿ ₹150 ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಿಂದ ರೈತರ ಖಾತೆಗೆ ಜಮಾಪಡಿಸಬೇಕು. ಹಾಗೂ ಹೊಸ ನಿಯಮಾವಳಿಯ ಪ್ರಕಾರ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾಪಡಿಸಬೇಕು ಮತ್ತು ಮಾಧ್ಯಮಿಕ ಸಾಲದ ಬಡ್ಡಿ ಮನ್ನಾ ಕೇವಲ ಕಟ್ಟ ಬಾಕಿದಾರರಿಗೆ ಮಾಡಲಾಗುತ್ತಿದೆ. ಈ ಬಡ್ಡಿ ಮನ್ನಾ ಯೋಜನೆಯ ಲಾಭವನ್ನು ಪ್ರಾಮಾಣಿಕವಾಗಿ ಸಾಲ ತುಂಬಿದ ರೈತರಿಗೂ ಅನ್ವಯಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಫೆ. 6ಕ್ಕೆ ಚಳವಳಿ ನಡೆಯಲಿದೆ.ಈ ಚಳವಳಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಬ್ಬು ಬೆಳೆಗಾರರು ಫೆ. 5ರಂದು ಸಂಜೆ 6 ಗಂಟೆಗೆ ಪಕ್ಕದ ಅಳ್ನಾವರದ ರೈಲ್ವೆ ಸ್ಟೇಷನಿಗೆ ಬಂದು, ರೈಲ್ವೆ ಮುಖಾಂತರ ಬೆಂಗಳೂರಿಗೆ ತೆರಳಬೇಕು. ಕಬ್ಬು ಬೆಳೆಗಾರರ ಪರವಾಗಿ ನಡೆಯಲಿರುವ ಈ ಚಳವಳಿಯಲ್ಲಿ ತಾಲೂಕಿನ ಕಬ್ಬು ಬೆಳೆಗಾರರು ಬಹುಸಂಖ್ಯೆಯಲ್ಲಿ ಸೇರಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಜಿಲ್ಲಾಧ್ಯಕ್ಷ ಕುಮಾರ ಬೋಬಾಟಿ ಹಾಗೂ ಸಂಘದ ಪ್ರಮುಖರಾದ ನಾಗೇಂದ್ರ ಜಿವೋಜಿ, ಮಲ್ಲಾರಿ ಘಾಡಿ, ಸುರೇಶ ಶಿವಣ್ಣನವರ, ರಾಮದಾಸ ಬೆಳಗಾಂಕರ, ಸಾತೋರಿ ಘೋಡಿಮನಿ ಮನವಿ ಮಾಡಿದ್ದಾರೆ.