ಸಾರಾಂಶ
ಕೃಷ್ಣ ಎನ್. ಲಮಾಣಿ
ಹಂಪಿ: ಹಂಪಿ ಉತ್ಸವದಲ್ಲಿ ಸಂಗೀತದ ಸುಧೆ ಹರಿಸಿದ ಖ್ಯಾತ ಗಾಯಕ ವೀಪಿ ಎಂದೇ ಖ್ಯಾತಿ ಹೊಂದಿರುವ ವಿಜಯ್ ಪ್ರಕಾಶ, ಪ್ರೇಕ್ಷಕರ ಮನಸೂರೆಗೊಂಡರು.ರಾತ್ರಿ 1 ಗಂಟೆ 17 ನಿಮಿಷ 11 ಸೆಂಕೆಂಡ್‌ಗೆ ಕೊರೆಯುವ ಚಳಿಯಲ್ಲೇ ಹಂಪಿ ಉತ್ಸವದ ಗಾಯತ್ರಿಪೀಠ ವೇದಿಕೆ ಏರುತ್ತಿದ್ದಂತೆಯೇ ಜೈ ಹೋ,, ಜೈ ಹೋ ಹಾಡಿನ ಮೂಲಕ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಗಮನ ಸೆಳೆದರು.
ನೀನೇ ರಾಜಕುಮಾರ..: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತಿ, ಮತ್ತೆ ಹೇಳುತ್ತೈತಿ ನೀನೇ ರಾಜಕುಮಾರ ಹಾಡನ್ನು ಹಾಡಿದ ಅವರು, ಪುನೀತ್ ರಾಜಕುಮಾರ ಅವರನ್ನು ಸ್ಮರಿಸಿದರು.ನಿರೂಪಕಿ ಅನುಶ್ರೀ "ಯಾರೇ ಕೈಬಿಟ್ರೂ ಹೊಸಪೇಟೆ ಅಭಿಮಾನಿಗಳು ಕೈ ಬಿಡುವುದಿಲ್ಲ " ಎಂದು ಸ್ವತಃ ಪುನೀತ್ ರಾಜಕುಮಾರ ಅವರೇ ಹೇಳಿದ್ದಾರೆ ಎಂದು ಹೇಳುತ್ತಿದ್ದಂತೆಯೇ ಕರತಾಡನ ಮೊಳಗಿತು.
ಸಿಂಗಾರ ಸಿರಿಯೇ..: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ "ಸಿಂಗಾರ ಸಿರಿಯೇ ಅಂಗಾಲಿನಲ್ಲಿ ಬಂಗಾರ... " ಹಾಡು ಹೇಳುತ್ತಿದ್ದಂತೆಯೇ ಪ್ರೇಕ್ಷಕರು ತಲೆದೂಗಿದರು.ವಿಜಯಪ್ರಕಾಶ್ ಅವರು ಚೌಕ ಚಿತ್ರದ ಅಲ್ಲಾಡ್ಸ್, ಅಲ್ಲಾಡ್ಸ್, ಅಲ್ಲಾಡ್ಸ್.. ಜೀವನ ಟಾನಿಕ್ ಬಾಟಲಿ, ಕುಡಿಯೋಕ್ ಮುಂಚೆ ಅಲ್ಲಾಡ್ಸ್... ಹಾಡು ಹಾಡುತ್ತಿದ್ದಂತೆಯೇ ಯುವಸಮೂಹ ಹುಚ್ಚೆದ್ದು, ಕುಣಿದು ಕುಪ್ಪಳಿಸಿದರು.
ವಿಜಯ ಪ್ರಕಾಶ ರಾಬರ್ಟ್ ಚಿತ್ರದ ಬ್ರದರ್ ಫ್ರಮ್ ಅನದರ್ ಮದರ್ ಹಾಡು ಹಾಡಿದರು. ಈ ಹಾಡು ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ದಿತು.ಓಂ.. ಓಂ ಶಿವೋಮ್... ಹಾಡನ್ನು ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಹಾಡಿದರು. ಶಿವನ ಸುಕ್ಷೇತ್ರ ಹಂಪಿಯಲ್ಲಿ ಈ ಹಾಡು ಹಾಡಲೇಬೇಕು ಎಂದು ವಿಜಯ ಪ್ರಕಾಶ ಹೇಳುತ್ತಿದ್ದಂತೆ; ಸೇರಿದ್ದ ಜನಸ್ತೋಮ ಕೂಡ ಅಧ್ಯಾತ್ಮದಲ್ಲಿ ಮುಳುಗಿತು.
ವರನಟ ಡಾ. ರಾಜಕುಮಾರ ಅಭಿನಯದ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.. ಹಾಡನ್ನು ಹಾಡಿದರು. ಈ ಹಾಡನ್ನು ವಿಜಯ ಪ್ರಕಾಶ, ಅನುರಾಧಾ ಭಟ್, ದಿವ್ಯಾ ಸೇರಿ ಹಾಡಿದರು.ವಿಜಯ ಪ್ರಕಾಶ ಅವರು ಜೈ ಹೋ, ಜೈ ಹೋ... ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ನಾನು ಕೋ ಕೋ ಕೋಳಿಗೆ ರಂಗಾ: ಗಾಯಕಿ ಸಾಹೇಬಾ ಚಿತ್ರದ ದಿವ್ಯಾ "ನಾನು ಕೋ ಕೋ ಕೋಳಿಕೇ ರಂಗಾ " ಹಾಡನ್ನು ಹಾಡುತ್ತಿದ್ದಂತೆಯೇ ಪಡ್ಡೆ ಹುಡುಗರ ಗ್ಯಾಂಗ್ ಕುಣಿದು ಕುಪ್ಪಳಿಸಿತು. ಲಾಸ್ಟ್ ಬೆಂಚ್‌ನ ಹುಡುಗರೇ ನನಗೇ ಭಾರೀ ಇಷ್ಟ,, ನನ್ನ ಜತೆ ಹೆಜ್ಜೆ ಹಾಕಿ, ಹ್ಯಾಪಿ ಹಂಪಿ ಎಂದು ದಿವ್ಯಾ ಹಾಡು ಹಾಡುತ್ತಾ ವೇದಿಕೆಯಲ್ಲಿ ಹೆಜ್ಜೆ ಹಾಕಿದರು.ಬಳಿಕ ಗಜಪತಿ ಗರ್ವಭಂಗದ ಜಟಕಾ ಕುದುರೆ ಹತ್ತಿ ಪ್ಯಾಟೇಗ್ ಹೋಗೋಮಾ.. ಹಾಡನ್ನೂ ಹಾಡಿದ ದಿವ್ಯಾ ಯುವಕರ ಮನಗೆದ್ದರು.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ ಅಭಿನಯದ ಯಾವನೋ ಇವನು ಗಿಲ್ಲಕೋ, ಏಳೇಳು ಬೆಟ್ಟ ದಾಟಿಕೊಂಡು ಬಂದ ಗಿಲ್ಲಕೋ,, ಶಿವ ಗಿಲ್ಲಕೋ.. " ಹಾಡನ್ನು ತನ್ನ ಕಂಚಿನ ಕಂಠ ಸಿರಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.ಗಾಯಕಿ ಅನುರಾಧಾ ಭಟ್ ಚೌಕ ಚಿತ್ರದ ಅಪ್ಪ ಐ ಲವ್ ಯೂ ಅಪ್ಪಾ ಹಾಡನ್ನು ಹಾಡಿ, ನೆರೆದಿದ್ದ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಣ್ಣು ಹೊಡಿಯಾಕ... ಮೊನ್ನೇ ಕಲೇತಾನಿ.. ಎಂದು ಹಾಡುತ್ತಾ ಕಲಾರಸಿಕರ ಮನಸೂರೆಗೊಂಡರು.