ನಿಲ್ದಾಣವನ್ನು ಗಮನಿಸಿದ ಪ್ರತಿ ಪ್ರಯಾಣಿಕರು ಪುಸ್ತಕ ಗೂಡಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುತ್ತಿದ್ದಾರೆ.

ಕೊಟ್ಟೂರು: ಪಟ್ಟಣಕ್ಕೆ ಕೂಗಳತೆಯ ದೂರದಲ್ಲಿರುವ ಹ್ಯಾಳ್ಯಾ ಬಸ್‌ ನಿಲ್ದಾಣದಲ್ಲಿ ಅಲ್ಲಿನ ಗ್ರಾಪಂ ಆಡಳಿತ ಆರಂಭಿಸಿರುವ ವ್ಯವಸ್ಥಿತ "ಪುಸ್ತಕಗೂಡು " ಎಲ್ಲರ ಗಮನ ಸೆಳೆದಿದೆ. ಅಧಿಕಾರಿಗಳ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.ಹ್ಯಾಳ್ಯಾ ಗ್ರಾಪಂ ಆಡಳಿತ 2024ರಲ್ಲಿ ಪುಸ್ತಕಗೂಡು ಆರಂಭಿಸಲು ₹30 ಸಾವಿರ ವೆಚ್ಚ ಮಾಡಿ 900 ಪುಸ್ತಕಗಳನ್ನು ಬಸ್‌ ನಿಲ್ದಾಣದಲ್ಲಿ ವ್ಯವಸ್ಥಿತ ಕಪಾಟುಗಳನ್ನು ಮಾಡಿ ಜೋಡಿಸಿಟ್ಟಿದೆ. ನಿಲ್ದಾಣವನ್ನು ಗಮನಿಸಿದ ಪ್ರತಿ ಪ್ರಯಾಣಿಕರು ಪುಸ್ತಕ ಗೂಡಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುತ್ತಿದ್ದಾರೆ. ಜನರಲ್ಲಿ ಓದುವ ಕುತೂಹಲ ಹೆಚ್ಚಿಸಲೆಂದೇ ನಿಲ್ದಾಣದಲ್ಲಿ ಆಸನ, ಪ್ಯಾನ್, ಇತರೆ ವ್ಯವಸ್ಥೆ ಕಲ್ಪಿಸಿಲಾಗಿದೆ. ಇದರ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಓದುವುದನ್ನು ಬಿಟ್ಟು ಬೇರೇನೂ ಹರಟೆ ಮಾಡದಂತೆ ಎಚ್ಚರಿಸುವ ಕಾರ್ಯವನ್ನು ಮಾಡಿದೆ.

ಈ ಪುಸ್ತಕಗೂಡಿನಲ್ಲಿ ರಾಷ್ಟ್ರಕವಿ ಕುವೆಂಪು, ವಿ.ಕೃ. ಗೋಕಾಕ್, ದ.ರಾ. ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ್ ಕಂಬಾರ್, ಕೊಟ್ಟೂರಿನ ಕುಂ.ವಿ. ಮತ್ತಿತರ ಸಾಹಿತಿಗಗಳ ಕಥೆ, ನಾಟಕ, ಕಾದಂಬರಿ, ಕಾವ್ಯ ಮತ್ತಿತರರ ಪುಸ್ತಕಗಳಿವೆ.

ಆಕರ್ಷಿಸುವ ಬರಹ:

ಪುಸ್ತಕಗಳನ್ನು ಓದಿ ಮತ್ತೆ ಕಪಾಟಿನಲ್ಲಿ ಅವುಗಳನ್ನು ವ್ಯವಸ್ಥಿತವಾಗಿ ಅದೇ ಜಾಗದಲ್ಲಿ ಇಡುವ ಮೂಲಕ ಓದಿನ ಶಿಸ್ತನ್ನು ಪಾಲಿಸುತ್ತಿದ್ದಾರೆ. ಪುಸ್ತಕಗೂಡಿನ ಗೂಡೆಗಳ ಮೇಲೆ ಸೋಮಾರಿತನಕ್ಕೆ ಜಾಗವಿಲ್ಲ, ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ, ಓದುವ ಹವ್ಯಾಸ ಬೆಳೆಸಿಕೊಂಡರೆ ಸೋಮಾರಿತನಕ್ಕೆ ಜಾಗವೇ ಇಲ್ಲ ಎಂಬ ಮತ್ತು ಇತರ ಬರಹಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತಿವೆ. ಇಂತಹ ಪುಸ್ತಕ ಗೂಡನ್ನು ಆರಂಭಿಸುವ ಮೂಲಕ ಇಲ್ಲನ ಗ್ರಾಪಂ ಆಡಳಿತ ಉಳಿದ ಎಲ್ಲ ಪಂಚಾಯಿತಿಗಳಿಗೆ ಮಾದರಿಯಾಗಿದೆ. ಕಡಿಮೆಯಾಗುತ್ತಿರುವ ಓದಿನ ಆಲಸ್ಯ ದೂರ ಮಾಡಿ ಪ್ರತಿಯೊಬ್ಬರನ್ನು ಪುಸ್ತಕಗಳನ್ನು ಓದುವತ್ತ ಆಕರ್ಷಿಸುತ್ತಿದೆ.

ಹ್ಯಾಳ್ಯಾ ಗ್ರಾಪಂನಿಂದ ಪುಸ್ತಕಗೂಡಿನ ವ್ಯಸಸ್ಥೆಗೆ ₹70 ಸಾವಿರ ಕ್ರಿಯಾ ಯೋಜನೆಯನ್ನು ಗ್ರಾಪಂ ಆಡಳಿತ ರೂಪಿಸಿದೆ. ಆಡಳಿತದ ಸಾರ್ಥಕತೆ ಪರಿಪೂರ್ಣವಾಗಲು ಹೆಚ್ಚಿನ ಓದುಗರು ಇದರತ್ತ ವಾಲಬೇಕು. ಜೊತೆಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ. -ಸಿ.ಎಚ್.ಎಂ. ಗಂಗಾಧರ, ಪಿಡಿಒ ಹ್ಯಾಳ್ಯಾ ಗ್ರಾಪಂ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ರಾಜೀವಗಾಂದಿ ಫೆಲೋಶಿಪ್, ಗ್ರಾಪಂ ನಿಧಿಯಿಂದ ಈ ಪುಸ್ತಕಗೂಡನ್ನು ಆರಂಭಿಸಲಾಗಿದೆ. ಇದಕ್ಕೆ ಮತ್ತಷ್ಟು ಪೂರಕ ಸೌಲಭ್ಯಗಳನ್ನು ಒದಗಿಸಲು ಪುಸ್ತಕಗೂಡಿಗೆ ಭೇಟಿ ನೀಡಿ ವೀಕ್ಷಿಸಿರುವೆ. ಕೆ.ತಿಮ್ಮಪ್ಪ, ಜಿಪಂ ಉಪ ಕಾರ್ಯದರ್ಶಿ.