ಸಂಸಾರದಲ್ಲಿ ಎಲ್ಲರೂ ಸುಖವನ್ನು ಬಯಸುತ್ತಾರೆ. ಆದರೆ ಧರ್ಮದಿಂದ ಸುಖ ಹಾಗೂ ಅಧರ್ಮದಿಂದ ದುಃಖ ಪ್ರಾಪ್ತವಾಗುತ್ತದೆ. ಹಾಗಾಗಿ ಎಲ್ಲರೂ ಧರ್ಮದ ಕಾರ್ಯ ಮಾಡಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.

ಹಾವೇರಿ: ಸಂಸಾರದಲ್ಲಿ ಎಲ್ಲರೂ ಸುಖವನ್ನು ಬಯಸುತ್ತಾರೆ. ಆದರೆ ಧರ್ಮದಿಂದ ಸುಖ ಹಾಗೂ ಅಧರ್ಮದಿಂದ ದುಃಖ ಪ್ರಾಪ್ತವಾಗುತ್ತದೆ. ಹಾಗಾಗಿ ಎಲ್ಲರೂ ಧರ್ಮದ ಕಾರ್ಯ ಮಾಡಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಐದನೇ ದಿನವಾದ ಮಂಗಳವಾರ ಜರುಗಿದ ಎಸ್.ಡಿ.ಎಂ. ವೈಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಕರ್ಮನಿರ್ಜರ ಭಾವದಿಂದ ಧರ್ಮದ ಕಾರ್ಯ ಮಾಡಬೇಕು. ಎಲ್ಲದಕ್ಕೂ ಮೊದಲು ಧರ್ಮದ ಮರ್ಮ ಹಾಗೂ ಧರ್ಮ ಮೂಲ ಧ್ಯೇಯ ತಿಳಿದುಕೊಳ್ಳಬೇಕು. ಎಲ್ಲ ಜೀವಿಗಳಿಗೆ ಸಿದ್ಧರಾಗುವ ಶಕ್ತಿ ಇದೆ. ಸಂಸಾರದ ಮೋಹದ ಗಂಟನ್ನು ಬಿಚ್ಚಿ ಸಿದ್ಧರನ್ನು ಆರಾಧಿಸಿದರೆ ಸಿದ್ಧರಾಗಲು ಸಾಧ್ಯ. ಸಂಸಾರದಲ್ಲಿನ ಪ್ರತಿಯೊಬ್ಬರೂ ಸಿದ್ಧರಾಗುವ ಮಾರ್ಗ ಅನುಕರಣೆ ಮಾಡಬಹುದು. ಸಿದ್ಧಚಕ್ರ ಆರಾಧನೆ ಶ್ರೇಷ್ಠ ಆರಾಧನೆಯಾಗಿದೆ ಎಂದು ಹೇಳಿದರು.ಉದ್ಘಾಟನೆ ನೆರವೇರಿಸಿದ ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾಲಯದ ಬಿಒಜಿ ಸದಸ್ಯರು ಮತ್ತು ಎ.ಎಲ್.ಸಿ. ನಿರ್ದೇಶಕರಾದ ಪದ್ಮಲತಾ ನಿರಂಜನಕುಮಾರ ಮಾತನಾಡಿ, ಈ ಆರಾಧನೆ ವಿಶೇಷವಾಗಿದೆ. ಮುನಿಗಳ ವಾಣಿ ನಮ್ಮನ್ನು ಅಜ್ಞಾನದಿಂದ ಜ್ಞಾನದಕಡೆ ಕೊಂಡೊಯುತ್ತದೆ. ಸಿದ್ಧರು ಯಾವಾಗಲೂ ಸಿದ್ಧರಾಗಿರುತ್ತಾರೆ. ಹಾಗಾಗಿ ಸಿದ್ಧಲೋಕಕ್ಕೆ ಹೋಗಲು ಎಲ್ಲರೂ ಅಂತರಂಗದಿಂದ ಭಕ್ತಿಮಾಡಬೇಕು ಎಂದರು.ಹಾವೇರಿ ಮಹಾವೀರ ಅಲ್ಪಸಂಖ್ಯಾತ ಕ್ರೆಡಿಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಮಹಾವೀರ ಕಳಸೂರ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಾಜಿ ಹಾಗೂ ಜಯಕುಮಾರ ಭಯ್ಯಾಜಿ, ಜಿನೇಂದ್ರ ಬಂಗ, ಸಾಧನಾ ದೀದಿ, ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕಾರ್ಯದರ್ಶಿ ಎಸ್.ಎ.ವಜ್ರಕುಮಾರ, ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ಹುಬ್ಬಳ್ಳಿ ಜೈನ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ, ಅಶೋಕ ಬೋಗಾರ, ಶಿವರಾಜ ಕಡೂರ, ಅಶೋಕ ಬೋಗಾರ, ರಾಜೇಂದ್ರ ಕಡಬಿ, ಎಚ್.ಪಿ.ಸುಮತಿಕುಮಾರ, ಬದ್ರಬಾಹೂ ಲಕ್ಷ್ಮಾಪೂರ, ಅಣ್ಣಪ್ಪ ರಾಯ್ಕರ, ಕೀರ್ತಿ ಜೈನ, ಅನ್ನಾಸಾಹೇಬ ಕಾಳೆ ಇತರರು ಉಪಸ್ಥಿತರಿದ್ದರು. ಮಂಜುನಾಥ ಉಪಾಧ್ಯೆ ಸ್ವಾಗತಿಸಿದರು. ಕುಮುದಾ ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ಎಸ್.ಡಿ.ಎಂ. ಬಳಗದಿಂದ ಅಷ್ಠ ಪ್ರಾತಿಹಾರ್ಯಗಳು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಜಿನಭಗವಂತರ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪ್ಪವೃಷ್ಟಿ, ಬೃಹತ್ ಶಾಂತಿಧಾರೆ, ನಿತ್ಯಪೂಜೆ, ದೇವಶಾಸ್ತ್ರ ಗುರುಪೂಜೆ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.