ಹಾವೇರಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿಗೆ ಇತ್ತೀಚಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆದಿದ್ದು, ಒಟ್ಟು 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ವಶದಲ್ಲಿದ್ದ ಪಿಎಲ್‌ಡಿ ಬ್ಯಾಂಕಿನ ಆಡಳಿತವನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ.
ಹಾವೇರಿ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿಗೆ ಇತ್ತೀಚಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆದಿದ್ದು, ಒಟ್ಟು 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ವಶದಲ್ಲಿದ್ದ ಪಿಎಲ್‌ಡಿ ಬ್ಯಾಂಕಿನ ಆಡಳಿತವನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ. ನಗರದ ಶ್ರೀಕೃಷ್ಣ ಮಂದಿರದಲ್ಲಿ ಮಂಗಳವಾರ ಮತಎಣಿಕೆ ಪ್ರಕ್ರಿಯೆ ನಡೆಯಿತು. ಒಟ್ಟು 14 ಸ್ಥಾನಗಳಿಗೆ ನ.30ರಂದು ಚುನಾವಣೆ ಘೋಷಣೆಯಾಗಿತ್ತು. ನಾಮಪತ್ರ ಪರಿಶೀಲನೆ ವೇಳೆ ಬಸಾಪೂರ ಸಾಲಗಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಮಹಾದೇವಪ್ಪ ಭಜಂತ್ರಿ ಮತ್ತು ಗುತ್ತಲ ಬಿನ್ ಸಾಲಗಾರ ಕ್ಷೇತ್ರಕ್ಕೆ ಪರಮಪ್ಪ ಶಿವಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದರು. ನಂತರ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದರೆ, 7 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದರು.ಹಾವೇರಿ ಬಿನ್‌ಸಾಲಗಾರ ಸ್ಥಾನಕ್ಕೆ ಉಳಿವೆಪ್ಪ ಹಲಗಣ್ಣನವರ, ಗುತ್ತಲದ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಪರಮೇಶಗೌಡ ಪಾಟೀಲ, ಹಾವೇರಿಯ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಕಿರಣ ಉರ್ಫ್ ಚನ್ನಬಸಪ್ಪ ಕೊಳ್ಳಿ, ಕುರುಬಗೊಂಡದ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಉಮೇಶ ಹೆಡಿಯಾಲ, ಕನವಳ್ಳಿ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಬಸವರಾಜ ಬಾಲಕ್ಕನವರ, ಹೊಸರಿತ್ತಿ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಗುರುನಾಥಯ್ಯ ಮಳ್ಳೂರಮಠ(ಕಮತರ), ದೇವಿಹೊಸೂರ ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಗುಡ್ಡನಗೌಡ ಮುದಿಗೌಡ್ರ, ಕರ್ಜಗಿ ಸಾಲಗಾರರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಶೇಖಪ್ಪ ಕಳ್ಳೀಮನಿ, ಕಬ್ಬೂರ ಸಾಲಗಾರರ ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರಕ್ಕೆ ಶೇದಿಯಪ್ಪ ಕಾಶಂಬಿ, ಅಗಡಿ ಸಾಲಗಾರರ ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರಕ್ಕೆ ಮಂಜಯ್ಯ ಹಿರೇಮಠ, ಬೆಳವಿಗಿ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರಕ್ಕೆ ಚಂಪಕ್ಕ ಭರಮರಡ್ಡೇರ ಹಾಗೂ ನೆಗಳೂರ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಅನ್ನಪೂರ್ಣ ಹಳ್ಳಾಕಾರ ಗೆಲುವು ಸಾಧಿಸಿದ್ದಾರೆ.ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಮುಖಂಡರಾದ ಎಂ.ಎಂ. ಮೈದೂರ, ಎಂ.ಎಂ. ಹಿರೇಮಠ, ಸಿ.ಬಿ. ಕುರವತ್ತಿಗೌಡರ, ಎಂ.ಎ. ಗಾಜೀಗೌಡರ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡರ, ಪಾರ್ವತೆಮ್ಮ ಹಲಗಣ್ಣನವರ, ಸಂಜಯಗಾಂಧೀ ಸಂಜೀವಣ್ಣವರ, ಇತರರು ಇದ್ದರು. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಹಾಗೂ ಪಿಎಲ್‌ಡಿ ಬ್ಯಾಂಕ್‌ನ ಆಡಳಿತಾಧಿಕಾರಿ ವಿಕ್ರಮ ಕುಲಕರ್ಣಿ, ಪ್ರಕಾಶ ಹಿರಗೂಳಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಎಂ. ಭಜಂತ್ರಿ, ಹಾಗೂ ಇತರೆ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.