ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನೂರು ವರ್ಷಗಳ ಹಿಂದೆಯೇ ದೇಶದ ಮೊಟ್ಟ ಮೊದಲ ದೇಶಪ್ರೇಮಿಗಳ ಸಂಘಟನೆ ಹಿಂದೂಸ್ತಾನಿ ಸೇವಾದಳ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಯುವ ಸಮೂಹವನ್ನು ಸಜ್ಜುಗೊಳಿಸಿದ ನಾ.ಸು.ಹರ್ಡೀಕರ್ ಜಯಂತಿಯು ರಾಷ್ಟ್ರೀಯ ಆಚರಣೆಯಾಗಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಪ್ರತಿಪಾದಿಸಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದ ಸೇವಾದಳ ಕಚೇರಿಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ನಾ.ಸು.ಹರ್ಡೀಕರ್ 136ನೇ ಜಯಂತಿ ಕಾರ್ಯಕ್ರಮದಲ್ಲಿ ಹರ್ಡೀಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಮಾತನಾಡಿದರು.ದೇಶದ ಮೊದಲ ಸಮರಶೀಲ ಶಿಸ್ತುಬದ್ಧ ಸಂಘಟನೆಯನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ್ದರೂ ನಾ.ಸು.ಹರ್ಡೀಕರ್ ಇತ್ತೀಚಿನ ವರ್ಷಗಳಲ್ಲಿ ಕೇವಲ ಕರ್ನಾಟಕಕ್ಕೆ ಸೀಮಿತರಾಗುತ್ತಿದ್ದಾರೆ. ಆದ್ದರಿಂದ ಇವರ ಜಯಂತಿ ರಾಷ್ಟ್ರೀಯ ಆಚರಣೆಯಾಗುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಭಾರತೀಯರಲ್ಲಿ ಸೌಹಾರ್ದತೆ, ಸಮಾನತೆ ಪರಸ್ಪರ ಸೇವಾ ಮನೋಭಾವನೆ ಮೂಡಿಸುವಲ್ಲಿ ಸಫಲವಾಗಿದ್ದ ಹರ್ಡೀಕರ್ ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಳ ಈಗ ಭಾರತ ಸೇವಾದಳವಾಗಿ ಮಾರ್ಪಟ್ಟು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳಲ್ಲಿ ಶಿಸ್ತು ದೇಶಪ್ರೇಮ ಮೂಡಿಸಲು ಶ್ರಮಿಸುತ್ತಿದೆ ಎಂದರು.ಸೇವಾದಳ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಪಹಲ್ಗಾಮ್ ಹತ್ಯಾಕಾಂಡದ ನಂತರ ಯುದ್ಧದ ಕಾರ್ಮೋಡ ಕವಿಯುತ್ತಿದ್ದು, ಸಂಕಷ್ಟದ ಸಂದರ್ಭಗಳಲ್ಲಿ ಸೇವಾದಳ ಕಾರ್ಯಕರ್ತರು ದೇಶಕ್ಕಾಗಿ ಸೇವೆ ಸಲ್ಲಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಜ್ಜಾಗಿರಬೇಕೆಂದು ಸಲಹೆ ನೀಡಿದರು.ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಶಾಲಾ ಮಕ್ಕಳಲ್ಲಿ ನೈತಿಕ ಶಿಕ್ಷಣ ಕಡಿಮೆಯಾಗುತ್ತಿದ್ದು, ಸೇವಾದಳ ಚಟುವಟಿಕೆಗಳನ್ನು ಕಡ್ಡಾಯವಾಗಿ ನಡೆಸುವ ಮೂಲಕ ಮಕ್ಕಳನ್ನು ಸರಿದಾರಿಗೆ ತರಬೇಕಿದೆ ಎಂದರು.ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಇತ್ತೀಚಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕ್ಷೀಣಿಸಲು ಶಾಲಾ ಮಕ್ಕಳಲ್ಲಿ ಶಿಸ್ತು ಕಡಿಮೆಯಾಗಿರುವುದೇ ಕಾರಣವಾಗಿದ್ದು, ಸೇವಾದಳ ಚಟುವಟಿಕೆಗಳನ್ನು ಹೆಚ್ಚಿಸಲು ಶಿಕ್ಷಕರು, ಪೋಷಕರು ಗಮನಹರಿಸಬೇಕಿದೆ ಎಂದರು.ಹಿರಿಯ ಸದಸ್ಯ ಬಹಾದ್ದೂರ್ ಸಾಬ್ ಮಾತನಾಡಿ, ಭಾರತ ಸೇವಾದಳ ಚಟುವಟಿಕೆಗಳನ್ನು ಜಿಲ್ಲಾದ್ಯಂತ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.ಶ್ರೀನಿವಾಸಪುರ ಜಿಲ್ಲಾ ಸಮಿತಿ ಸದಸ್ಯ ಆರ್.ರವಿಕುಮಾರ್ ಮಾತನಾಡಿ, ಕಳೆದ 25 ವರ್ಷಗಳಿಂದಲೂ ತಾವು ಸೇವಾದಳ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸೇವಾದಳ ಶಿಸ್ತು ತಮ್ಮ ಮಗಳು ಇತ್ತೀಚಿನ ಯುಪಿಎಸ್ಸಿ ಸಾಧಕಿಯಾಗಿ ಹೊರಹೊಮ್ಮಲು ಕಾರಣವಾಗಿದೆ ಎಂದರು.ಭಾರತ ಸೇವಾದಳ ಹಿರಿಯ ಸದಸ್ಯರಾದ ವಿ.ಪಿ.ಸೋಮಶೇಖರ್, ಕೆ.ಜಯದೇವ್, ಬಣಕನಹಳ್ಳಿ ನಟರಾಜ್, ಚಾಮುಂಡೇಶ್ವರಿ ದೇವಿ, ತಾಲೂಕು ಸಮಿತಿ ಪದಾಧಿಕಾರಿ ಮುನಿವೆಂಕಟ ಯಾದವ್, ನಿವೃತ್ತ ಎಎಸ್‌ಐ ನಾಗರಾಜ್, ಅಶೋಕ್, ಫಲ್ಗುಣ ಇದ್ದರು.