ಹಾಸಣಗಿಯ ಪಂ. ಗಣಪತಿ ಭಟ್ಟರಿಗೆ ತಾನಸೇನ್ ಪ್ರಶಸ್ತಿ

| Published : Dec 14 2023, 01:30 AM IST

ಹಾಸಣಗಿಯ ಪಂ. ಗಣಪತಿ ಭಟ್ಟರಿಗೆ ತಾನಸೇನ್ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ, ಲಾಭಿ ನಡೆಸಿಲ್ಲ. ನಿರೀಕ್ಷೆಯೂ ಇರಲಿಲ್ಲ. ಅಲ್ಲಿನ ಸರ್ಕಾರವೇ ತಜ್ಞರ ಸಮಿತಿ ಮೂಲಕ ಕಲಾವಿದರನ್ನು ಗುರುತಿಸಿ ನೀಡುವ ಪ್ರಶಸ್ತಿ ಎನ್ನುವ ದೃಷ್ಟಿಯಿಂದ ಈ ಪ್ರಶಸ್ತಿಗೆ ಅಷ್ಟು ಗೌರವ ಇದೆ.

ಯಲ್ಲಾಪುರ:

ತಾಲೂಕಿನ ಹಾಸಣಗಿಯ ಹಿರಿಯ ಸಂಗೀತ ವಿದ್ವಾಂಸ ಪಂ. ಗಣಪತಿ ಭಟ್ಟ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಅಪಾರ ಸಾಧನೆಗಾಗಿ ಪ್ರತಿಷ್ಠಿತ ತಾನಸೇನ್‌ ಪ್ರಶಸ್ತಿ ಲಭಿಸಿದೆ.

ಮಧ್ಯಪ್ರದೇಶ ಸರ್ಕಾರ ಪ್ರತಿ ವರ್ಷ ಸಂಗೀತ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿ ನೀಡುತ್ತಿದ್ದು, 2022ನೇ ಸಾಲಿಗೆ ಪಂ. ಗಣಪತಿ ಭಟ್ಟ ಹಾಸಣಗಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

ತಾನ್ಸೇನ್ ಸಮಾಧಿ ಎದುರಿಗೆ ೫ ದಿನ ಸಂಗೀತ ಉತ್ಸವ ನಡೆಯಲಿದ್ದು, ಡಿ. ೨೪ರಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಪ್ರಶಸ್ತಿ ಪ್ರದಾನ ಮಾಡುವರು. ಈ ಕಾರ್ಯಕ್ರಮವನ್ನು ಮಧ್ಯಪ್ರದೇಶ ಸಂಸ್ಕೃತಿ ಸಚಿವಾಲಯ ಹಮ್ಮಿಕೊಂಡಿದ್ದು ೫ ದಿನ ನಡೆಯುವ ಈ ಪ್ರತಿಷ್ಠಿತ ಸಂಗೀತ ಸಮ್ಮೇಳನದಲ್ಲಿ ದೇಶ-ವಿದೇಶದ ಸಂಗೀತ ದಿಗ್ಗಜರು ಭಾಗವಹಿಸುತ್ತಾರೆ. ಈ ವೇದಿಕೆಯಲ್ಲಿ ಗಣಪತಿ ಭಟ್ಟರು ಪ್ರಶಸ್ತಿ ಸ್ವೀಕರಿಸಿ, ನಂತರ ತಮ್ಮ ಗಾಯನ ನಡೆಸಿಕೊಡಲಿದ್ದಾರೆ. ಇದೇ ವೇದಿಕೆಯಲ್ಲಿ ೩ನೇ ಅವಧಿಗೆ ಇವರ ಗಾಯನಕ್ಕೆ ಅವಕಾಶ ಸಿಕ್ಕಿರುವುದು ಕರ್ನಾಟಕಕ್ಕೇ ಹೆಮ್ಮೆಯಾಗಿದೆ.ಪಂ. ಗಣಪತಿ ಭಟ್ಟ ಧಾರವಾಡದ ಪಂ. ಬಸವರಾಜ ರಾಜಗುರುಗಳ ಶಿಷ್ಯರಾಗಿ, ಕಿರಾಣ-ಗ್ವಾಲಿಯರ್ ಘರಾಣಾ ಪರಂಪರೆಗೆ ಸೇರಿದ ದೊಡ್ಡ ಗಾಯಕರಾಗಿ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಖ್ಯಾತ ಸಂಗೀತಗಾರ ಸಿ.ಆರ್. ದಾಸ್ ಅವರಲ್ಲೂ ಅಧ್ಯಯನ ನಡೆಸಿದ್ದಾರೆ. ೧೯೮೮ರಲ್ಲಿ ಆಕಾಶವಾಣಿ ಎ.ಗ್ರೇಡ್ ಕಲಾವಿದರಾಗಿ ಸಂಗೀತ ನೃತ್ಯ ಅಕಾಡೆಮಿ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್‌ ಗುರುಕುಲ ಟ್ರಸ್ಟ್ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪಂ.ಗಣಪತಿ ಭಟ್ಟ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚೀಕೇರಿಯ ಹಾಸಣಗಿಯವರಾಗಿದ್ದು, ಅನೇಕ ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿ ಶಿಕ್ಷಣ ನೀಡಿ, ಹಲವು ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿದ ಪಂ.ಗಣಪತಿ ಭಟ್ಟ, ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ, ಲಾಭಿ ನಡೆಸಿಲ್ಲ. ನಿರೀಕ್ಷೆಯೂ ಇರಲಿಲ್ಲ. ಅಲ್ಲಿನ ಸರ್ಕಾರವೇ ತಜ್ಞರ ಸಮಿತಿ ಮೂಲಕ ಕಲಾವಿದರನ್ನು ಗುರುತಿಸಿ ನೀಡುವ ಪ್ರಶಸ್ತಿ ಎನ್ನುವ ದೃಷ್ಟಿಯಿಂದ ಈ ಪ್ರಶಸ್ತಿಗೆ ಅಷ್ಟು ಗೌರವ ಇದೆ. ಅದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು.