ಸಾರಾಂಶ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗಲೇ ಕೌಟುಂಬಿಕ ದೌರ್ಜನ್ಯ ಪ್ರಕರಣದ ಎದುರುದಾರನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹರಿಹರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಹರಿಹರ: ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗಲೇ ಕೌಟುಂಬಿಕ ದೌರ್ಜನ್ಯ ಪ್ರಕರಣದ ಎದುರುದಾರನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹರಿಹರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಮಲೇಬೆನ್ನೂರು ಗ್ರಾಮದ ಫಾಜಿಲ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಗರದ 2ನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಇವರ ಪತ್ನಿಗೆ ತಿಂಗಳಿಗೊಮ್ಮೆ ಜೀವನಾಂಶ ಕೊಡಲು ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು.ಹಲವು ತಿಂಗಳಿಂದ ಜೀವನಾಂಶದ ಬಾಕಿಯನ್ನು ಫಾಜಿಲ್ ಪಾವತಿ ಮಾಡಿರಲಿಲ್ಲ. ಜೀವನಾಂಶ ಪಾವತಿ ಮಾಡದಿರುವ ಬಗ್ಗೆ ಈತನ ಪತ್ನಿ ಕಡೆಯ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು. ಬಾಕಿ ಪಾವತಿ ಮಾಡದ ತನಗೆ ನ್ಯಾಯಾಲಯ ಶಿಕ್ಷೆ ನೀಡಬಹುದೆಂಬ ಅತಂಕದಲ್ಲಿ ಫಾಜಿಲ್ ವಿಷ ಸೇವಿಸಿದ್ದಾನೆ ಎನ್ನಲಾಗಿದೆ.
ತಕ್ಷಣ ನ್ಯಾಯಾಲಯದ ಹಾಲ್‍ನಲ್ಲಿದ್ದ ವಕೀಲರು, ಸಿಬ್ಬಂದಿ, ಪೋಲಿಸರು ಆತನನ್ನು ಹೊರಕ್ಕೆ ಕರೆತಂದು ವಾಂತಿ ಮಾಡಿಸಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆ ಆಸ್ಪತ್ರೆಗೆ ಕಳಿಸಿದೆ.ಫಾಜಿಲ್ ಈಗ ಅಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- - - (-ಸಾಂದರ್ಭಿಕ ಚಿತ್ರ)