ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ರಾಜ್ಯದಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ಗೆ ಏಳು ಸ್ಥಾನಗಳು ದಕ್ಕಲಿವೆ. ಇದರಲ್ಲಿ ಒಂದು ಸ್ಥಾನವನ್ನಾದರೂ ಹುಬ್ಬಳ್ಳಿ-ಧಾರವಾಡಕ್ಕೆ ನೀಡಬೇಕೆಂಬ ಬೇಡಿಕೆ ಇಟ್ಟುಕೊಂಡು ಜಿಲ್ಲೆಯ ಮುಖಂಡರು ಭಾರೀ ಪ್ರಮಾಣದಲ್ಲಿ ಲಾಬಿಗಿಳಿದಿದ್ದಾರೆ. ಹಲವು ಮುಖಂಡರು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ.ವಿಧಾನ ಪರಿಷತ್‌ಗೆ ಪ್ರಾದೇಶಿಕತೆ ಹಾಗೂ ಜಾತಿಯ ಲೆಕ್ಕಾಚಾರದ ಮೇಲೆ ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಅದರಂತೆ ಇಲ್ಲೂ ಜಾತಿಯ ಲೆಕ್ಕಾಚಾರದಲ್ಲೇ ಲಾಬಿಗಿಳಿದಿದ್ದಾರೆ.
ಅಲ್ಪಸಂಖ್ಯಾತರ ಕೋಟಾದಲ್ಲಿ ಉತ್ತರ ಕರ್ನಾಟಕಕ್ಕೊಂದು ನೀಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಮಾಜಿ ಸಚಿವ, ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಾಜಿ ಅಧ್ಯಕ್ಷ ಯೂಸೂಫ್ ಸವಣೂರ, ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದಾರೆ. ಅಲ್ಪಸಂಖ್ಯಾತರ ಕೋಟಾದಲ್ಲೇ ಈ ಸಲ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಿ ಎಂದು ರಾಬರ್ಟ್ ದದ್ದಾಪುರಿ ಕೂಡ ಪೈಪೋಟಿಗಿಳಿದಿದ್ದಾರೆಇನ್ನು ಲಿಂಗಾಯತರ ಕೋಟಾದಲ್ಲಿ ಗ್ರಾಮೀಣ ಸಮಿತಿ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಶರಣಪ್ಪ ಕೊಟಗಿ, ರಾಜಶೇಖರ ಮೆಣಸಿನಕಾಯಿ, ಲಕ್ಷ್ಮಿ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದಾರೆ. ಇನ್ನು ಎಸ್ಸಿ ಕೋಟಾದಲ್ಲಿ ಎಫ್.ಎಚ್. ಜಕ್ಕಪ್ಪನವರ, ಶಾಸಕ ಪ್ರಸಾದ ಅಬ್ಬಯ ಸಹೋದರ ಧರ್ಮರಾಜ ಹಾಗೂ ಮೋಹನ ಹಿರೇಮನಿ ಸೇರಿದಂತೆ ಹಲವರು ಲಾಬಿಗೀಳಿದಿದ್ದಾರೆ. ಮಹಿಳಾ ಕೋಟಾದಲ್ಲಿ ಶಾಂತವ್ವ ಗುಜ್ಜಲ, ತಾರಾದೇವಿ ವಾಲಿ, ದೇವಕಿ ಯೋಗಾನಂದ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ.
ಶೆಟ್ಟರ್ ಸ್ಥಾನಕ್ಕಾದರೂ ನೇಮಿಸಿ:ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿತ್ತು. ಅವರು ಮರಳಿ ಬಿಜೆಪಿಗೆ ತೆರಳಿದ ಪರಿಣಾಮ ಆ ಸ್ಥಾನಕ್ಕೆ ಇದೀಗ ಖಾಲಿಯಾಗಿದೆ. ಈಗ ವಿಧಾನಸಭೆಯಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಾದರೂ ಒಂದು ಸ್ಥಾನವನ್ನು ಧಾರವಾಡ ಲಿಂಗಾಯತ ಮುಖಂಡರೊಬ್ಬರಿಗೆ ಕೊಡಿ ಅಥವಾ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕಾದರೂ ಲಿಂಗಾಯತರೊಬ್ಬರನ್ನು ನಾಮನಿರ್ದೇಶನ ಮಾಡಿ ಎಂಬ ಬೇಡಿಕೆ ಲಿಂಗಾಯತ ಮುಖಂಡರದ್ದು.
ತರಾಟೆ ತೆಗೆದುಕೊಂಡು ಕೆಪಿಸಿಸಿ:ಈ ನಡುವೆ ಎಂಎಲ್ಸಿ ಸ್ಥಾನ ಕೇಳಲು ಬಂದಿರುವ ಮುಖಂಡರಿಗೆ ಲೋಕಸಭೆ ಚುನಾವಣೆಯಲ್ಲಿ ಯಾರ್‍ಯಾರು ಎಷ್ಟೆಷ್ಟು ಕೆಲಸ ಮಾಡಿದ್ದೀರಿ ಎಂದೆಲ್ಲ ಮಾಹಿತಿಯನ್ನು ಅವರಿಂದಲೇ ಪಡೆದಿದ್ದಾರೆ. ಜತೆಗೆ ಕೆಲಸ ಮಾಡದ, ಮಿಲಾಪಿ ಆದ ಕೆಲ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸುಳ್ಳು ಹೇಳಬೇಡಿ. ನಿಮ್ಮೆಲ್ಲ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇವೆ. ಅದ್ಹೇಗೆ ನಿಮಗೆ ಎಂಎಲ್‌ಸಿ ಸ್ಥಾನ ನೀಡಬೇಕು ಎಂದು ತರಾಟೆ ಕೂಡ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಎಂ.ಎಲ್‌ಸಿ ಸ್ಥಾನಕ್ಕಾಗಿ ಜಿಲ್ಲೆಯಿಂದ ಭಾರೀ ಪ್ರಮಾಣದಲ್ಲಿ ಲಾಬಿ ನಡೆಯುತ್ತಿರುವುದಂತೂ ಸತ್ಯ.