ಮಹಾಬಲೇಶ್ವರ ದೇವಾಲಯದ ಗರ್ಭಗುಡಿಯಲ್ಲೂ ನೀರು
ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದೆ. ಕೆಲವೆಡೆ ಭಾರಿ ಮಳೆಯಾಗಿದೆ. ಕುಮಟಾದಲ್ಲಿ ರಾಜ್ಯ ಹೆದ್ದಾರಿ ಮೇಲೆ ನೀರು ನುಗ್ಗಿ ಸಂಚಾರಕ್ಕೆ ಕೆಲಸಮಯ ವ್ಯತ್ಯಯ ಉಂಟಾಗಿದ್ದರೆ, ಗೋಕರ್ಣ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಯಲ್ಲೂ ನೀರು ತುಂಬಿತ್ತು.
ಭಾನುವಾರ ಮುಂಜಾನೆಯಿಂದಲೆ ಕರಾವಳಿಯಾದ್ಯಂತ ಮಳೆ ಶುರುವಾಯಿತು. ಭಟ್ಕಳ, ಹೊನ್ನಾವರ ಹಾಗೂ ಕುಮಟಾದಲ್ಲಿ ತೀವ್ರ ಮಳೆಯಾದರೆ, ಅಂಕೋಲಾ ಹಾಗೂ ಕಾರವಾರದಲ್ಲಿ ಆಗಾಗ ಭಾರಿ ಮಳೆ ಬಂತು. ಉಳಿದಂತೆ ಸಾಧಾರಣ ಮಳೆ ಇತ್ತು.ಗೋಕರ್ಣದಲ್ಲಿ ಭಾರಿ ಮಳೆಯಾಗಿದ್ದರಿಂದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ನೀರು ನೆಲೆಸುವಂತಾಯಿತು. ಮಹಾಬಲೇಶ್ವರ ದೇವಾಲಯದಿಂದ ಸೋಮಸೂತ್ರಕ್ಕೆ ನೀರು ಸೇರುತ್ತದೆ. ಆದರೆ ಸೋಮಸೂತ್ರದಲ್ಲಿ ನೀರು ತುಂಬಿದ್ದರಿಂದ ಗರ್ಭಗುಡಿಯ ನೀರು ಹೊರಕ್ಕೆ ಹೋಗದಂತಾಯಿತು. ಆನಂತರ ಪಂಪ್ ಮೂಲಕ ಗರ್ಭಗುಡಿಯಲ್ಲಿನ ನೀರನ್ನು ಖಾಲಿ ಮಾಡಲಾಯಿತು. ಅಷ್ಟರ ತನಕ ಭಕ್ತರು ಹೊರಗಡೆಯಿಂದಲೆ ದರ್ಶನ ಪಡೆಯುವಂತಾಯಿತು.
ಇನ್ನು ಮಹಾಗಣಪತಿ ದೇವಾಲಯದ ಮುಂಭಾಗದ ರಸ್ತೆ, ಮೇಲಿನಕೇರಿ ರಸ್ತೆ ಮತ್ತಿತರ ರಸ್ತೆಗಳು ಜಲಾವೃತಗೊಂಡಿತ್ತು.
ಕುಮಟಾ ಹಾಗೂ ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಲಗಳ್ಳಿ ಬಳಿ ನೀರು ತುಂಬಿ ಸಂಚಾರಕ್ಕೆ ಕೆಲಕಾಲ ವ್ಯತ್ಯಯ ಉಂಟಾಯಿತು.
ಹೊನ್ನಾವರದಲ್ಲೂ ಭಾರಿ ಮಳೆ ಸುರಿದಿದ್ದರಿಂದ ಹಳ್ಳಕೊಳ್ಳಗಳು ಮೈದುಂಬಿಕೊಂಡವು. ಹೊನ್ನಾವರದ ಸಾಲ್ಕೋಡ ಗ್ರಾಮದಲ್ಲಿ ಅತಿ ಹೆಚ್ಚು ಅಂದರೆ 128 ಮಿಮೀ ಮಳೆಯಾಗಿದೆ.ಮಧ್ಯಾಹ್ನದ ನಂತರ ಮಳೆ ಇಳಿಮುಖವಾಗುತ್ತಿದ್ದಂತೆ ಎಲ್ಲೆಡೆ ತುಂಬಿದ್ದ ನೀರು ಖಾಲಿಯಾಗಿ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಹಳಿಯಾಳ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ, ಮುಂಡಗೋಡ, ಯಲ್ಲಾಪುರಗಳಲ್ಲಿ ಸಾಧಾರಣ ಮಳೆಯಾಗಿದೆ.ಈ ಬಾರಿ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರು ಭಾನುವಾರ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಸಮಾಧಾನ ಪಡುವಂತಾಗಿದೆ.