ಕುಮಟಾ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆ ೩೬೦೦ ಮಿಮಿಗಿಂತ ಶೇ. ೩೫ ಮಳೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ೪೮೦೦ ಮಿಮಿ ಮಳೆಯಾಗಿತ್ತು. ನವೆಂಬರ್‌ನಲ್ಲೂ ಮಳೆ ಮುಂದುವರಿದಿದ್ದರಿಂದ ಅಂದಾಜು ೧೬ ಹೆಕ್ಟೇರ್‌ನಷ್ಟು ಬತ್ತ ಬೆಳೆಯೂ ನಷ್ಟವಾಗಿದೆ. ಹಿಂಗಾರು ಬಿತ್ತನೆಗೂ ಸಮಸ್ಯೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಅವರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಕುಮಟಾ: ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆ ೩೬೦೦ ಮಿಮಿಗಿಂತ ಶೇ. ೩೫ ಮಳೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ೪೮೦೦ ಮಿಮಿ ಮಳೆಯಾಗಿತ್ತು. ನವೆಂಬರ್‌ನಲ್ಲೂ ಮಳೆ ಮುಂದುವರಿದಿದ್ದರಿಂದ ಅಂದಾಜು ೧೬ ಹೆಕ್ಟೇರ್‌ನಷ್ಟು ಬತ್ತ ಬೆಳೆಯೂ ನಷ್ಟವಾಗಿದೆ. ಹಿಂಗಾರು ಬಿತ್ತನೆಗೂ ಸಮಸ್ಯೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.

ತಾಪಂ ಸಭಾಭವನದಲ್ಲಿ ಮಾಸಿಕ ಸಾಮಾನ್ಯ ಸಭೆಯಲ್ಲಿ ಇಲಾಖಾ ಪ್ರಗತಿ ಮಂಡಿಸಿದ ಅವರು, ಶೇಂಗಾ, ಉದ್ದು, ಹೆಸರು ಮುಂತಾದವನ್ನು ರೈತರು ಬಿತ್ತನೆ ಮಾಡಿದ್ದು, ಇಲಾಖೆಯಿಂದ ೪೪ ಕ್ವಿಂಟಲ್‌ನಷ್ಟು ಶೇಂಗಾ ಬೀಜ ವಿತರಿಸಿದ್ದೇವೆ ಎಂದರು. ಕಗ್ಗ ಬತ್ತವು ಇಲ್ಲಿನ ವಿಶಿಷ್ಟ ತಳಿಯಾಗಿದ್ದು, ರೈತರು ಬೀಜವನ್ನು ಇಲಾಖೆಗೆ ನೀಡಿದರೆ ಮಾತ್ರ ಪುನಃ ಅದನ್ನು ಸಂಸ್ಕರಿಸಿ, ಮರಳಿ ಬೀಜವಾಗಿ ರೈತರಿಗೆ ವಿತರಿಸಲು ಸಾಧ್ಯವಿದೆ ಎಂದರು.

ಬಿಇಒ ಉದಯ ನಾಯ್ಕ, ಖಾಸಗಿ, ಅನುದಾನಿತ ಶಾಲೆಗಳು ಈಗಾಗಲೇ ಮುಂದಿನ ವರ್ಷಕ್ಕೆ ಪ್ರವೇಶಾತಿ ಆರಂಭಿಸಿರುವುದರಿಂದ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಡಿಸೆಂಬರ್‌ನಲ್ಲೇ ಪ್ರವೇಶಾತಿ ಆರಂಭಿಸಿದ್ದೇವೆ ಎಂದರು.

ಅಕ್ಷರದಾಸೋಹ ಅಧಿಕಾರಿ ವಿನಾಯಕ ವೈದ್ಯ ಮಾತನಾಡಿ, ಸರ್ಕಾರಿ ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳನ್ನೂ ಅಕ್ಷರ ದಾಸೋಹದ ವ್ಯಾಪ್ತಿಯಲ್ಲಿ ತರಲಾಗಿದ್ದು, ಡಿಸೆಂಬರ್‌ನಿಂದಲೇ ಅವರಿಗೆ ಬಿಸಿಯೂಟ ಹಾಗೂ ಇತರ ಪೌಷ್ಟಿಕ ಆಹಾರ ವಿತರಣೆ ಶುರುವಾಗಿದೆ. ಮಕ್ಕಳ ಸಂಖ್ಯೆಗೆ ತಕ್ಕಂತೆ ಅಡುಗೆ ಸಿಬ್ಬಂದಿಯನ್ನು ಹೆಚ್ಚುವರಿ ನಿಯೋಜನೆಗೂ ಅವಕಾಶವಿದ್ದು, ಪರಿಶೀಲಿಸಲಾಗುತ್ತಿದೆ. ತಾಲೂಕಿನಲ್ಲಿರುವ ಒಟ್ಟೂ ೪೪೫ ಅಡುಗೆ ಸಿಬ್ಬಂದಿಗೆ ಸದ್ಯವೇ ಅಡುಗೆ ಸ್ಪರ್ಧೆ ಹಾಗೂ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.

ತಾಲೂಕಾಸ್ಪತ್ರೆಯಲ್ಲಿ ಎಸ್‌ಟಿಪಿ ಕಾಮಗಾರಿ ನಡೆಯುತ್ತಿದ್ದು ಹಾಲಿ ಇರುವ ಶೌಚದ ಸೆಪ್ಟಿಕ್ ಟ್ಯಾಂಕ್ ಖಾಲಿ ಮಾಡುವ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆಸ್ಪತ್ರೆಯ ಸಹಾಯಕ ಅಧಿಕಾರಿ ಸಭೆಗೆ ತಿಳಿಸಿದರು.

ಪ್ರತಿಕ್ರಿಯಿಸಿದ ತಾಪಂ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ, ಕುಮಟಾ ಪುರಸಭೆ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿ ಸಕಿಂಗ್ ಯಂತ್ರವೆರಡನ್ನೂ ಏಕಕಾಲಕ್ಕೆ ಬಳಸಿ ಪರಸ್ಪರ ಸಮನ್ವಯತೆಯೊಂದಿಗೆ ಎಸ್‌ಟಿಪಿ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ತಾಲೂಕಿನಲ್ಲಿ ೨೦೨೩-೨೪ನೇ ಸಾಲಿಗಾಗಿ ಅಳಕೋಡ ಹಾಗೂ ಮೂರೂರಿನ ಮಡಕಿಬೈಲ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಕಳೆದ ಹಲವಾರು ಸಭೆಗಳಂತೆಯೇ ಈ ಸಭೆಯಲ್ಲೂ ಹೆಸ್ಕಾಂಗೆ ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್ ಬಿಲ್ ಬಾಕಿ ವಿಚಾರ ಮತ್ತೆ ಪ್ರಸ್ತಾಪವಾಯಿತು. ಹೆಸ್ಕಾ ಎಇಇ ರಾಜೇಶ ಮಡಿವಾಳ ವಿವರಿಸಿ, ಒಟ್ಟೂ ₹೬೨.೭೩ ಲಕ್ಷ ಬಾಕಿ ಇದೆ ಎಂದರು. ಪಂಚಾಯಿತಿಗಳಲ್ಲಿ ತೆರಿಗೆ ಅಭಿಯಾನದ ಮೂಲಕವಾದರೂ ವಿದ್ಯುತ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ತಿಳಿಸಿದರು.

ಕುಮಟಾ ಕೈಗಾರಿಕಾ ವಸಾಹತಿಗೆ ೧೧೦ ಕೆವಿ ಗ್ರಿಡ್‌ನಿಂದ ನೇರ ವಿದ್ಯುತ್ ಸಂಪರ್ಕ, ಮೂರೂರು ಕಲ್ಲಬ್ಬೆಗೂ ನೇರ ಸಂಪರ್ಕ, ಜತೆಗೆ ಎತ್ತಿನಬೈಲದಲ್ಲಿ ೩೩ ಕೆವಿ ಕೇಂದ್ರ ಸ್ಥಾಪಿಸಿ ಸುತ್ತಮುತ್ತಲ ದೂರಗಾಮಿ ಗ್ರಾಮಗಳಿಗೂ ನೇರ ವಿದ್ಯುತ್ ಸಂಪರ್ಕ ನೀಡುವ ಮೂಲಕ ಅನಗತ್ಯ ವಿದ್ಯುತ್ ನಿಲುಗಡೆಯ ಸಮಸ್ಯೆಯಿಂದ ಗ್ರಾಹಕರು ಮುಕ್ತಿ ಪಡೆಯಲಿದ್ದಾರೆ ಎಂದು ಹೆಸ್ಕಾಂ ಎಇಇ ತಿಳಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಇಒ ರಾಜೇಂದ್ರ ಭಟ್ ಇದ್ದರು. ನಾಗರಾಜ ಶೆಟ್ಟಿ ನಿರ್ವಹಿಸಿದರು.

ಕುಮಟಾ ತೆಂಗಿನಕಾಯಿಗೆ ಜಿಐ ಟ್ಯಾಗ್ ನಿರೀಕ್ಷೆ: ಜಿಐ ಟ್ಯಾಗ್ ಕುರಿತು ಗಮನಸೆಳೆದ ತೋಟಗಾರಿಕೆ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ್, ತಾಲೂಕಿನ ವನ್ನಳ್ಳಿ, ಹಂದಿಗೋಣ ಮುಂತಾದ ಕಡೆಗಳಲ್ಲಿ ಬೆಳೆಯಲಾಗುವ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್ ಪಡೆಯುವುದು ಕಷ್ಟಸಾಧ್ಯವಿದೆ. ಆದರೆ ಕುಮಟಾ ತೆಂಗಿನಕಾಯಿಗೆ ಜಿಐ ಟ್ಯಾಗ್ ಶತಪ್ರತಿಶತ ನಿರೀಕ್ಷೆಯಿದೆ ಎಂದರು. ತೋಟಗಾರಿಕೆ ಬೆಳೆಗಳಲ್ಲಿ ವಿಶೇಷ ಹೆಸರಾದ ಕುಮಟಾದ ತೆಂಗಿನಕಾಯಿ ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ಆದರೆ ತೆಂಗು ಬೆಳೆಗಾರರ ಸಂಘಟನೆಯ ಮೂಲಕ ನಿಗದಿತ ನಿಯಮಗಳನ್ನು ಅನ್ವಯಿಸಿ ಕುಮಟಾ ತೆಂಗಿನ ವಿಶಿಷ್ಟತೆಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನ ಯಶಸ್ವಿಯಾಗಬಹುದಾಗಿದೆ. ಆದರೆ ಜಿಐ ಟ್ಯಾಗ್ ಪಡೆಯುವುದಕ್ಕೆ ಕನಿಷ್ಠ ೧೦೦ ಎಕರೆಯಷ್ಟಾದರೂ ಸಿಹಿ ಈರುಳ್ಳಿ ಬೆಳೆಯಬೇಕು, ಇಲ್ಲಿ ಅಷ್ಟೊಂದು ಇಲ್ಲ, ಸಿಹಿ ಈರುಳ್ಳಿ ಬೆಳೆಗಾರರ ಸಂಘಟನೆಯೂ ಈ ಕಾರ್ಯಕ್ಕೆ ಮುಂದೆ ಬರಬೇಕಾಗುತ್ತದೆ. ಇಂಥ ಹಲವು ಕಾರಣಗಳಿಗಾಗಿ ಸಿಹಿ ಈರುಳ್ಳಿ ಜಿಐ ಟ್ಯಾಗ್ ಪಡೆಯುವುದು ಕಷ್ಟಸಾಧ್ಯ ಎಂದರು.