ಹೆಬ್ಬಾಳ್ಕರಗೆ ನಿಂದನೆ ಪ್ರಕರಣ: ವರದಿ ನೀಡಿದ ಬಳಿಕ ತೀರ್ಮಾನ: ಬಸವರಾಜ ಹೊರಟ್ಟಿ

| Published : Jan 29 2025, 01:33 AM IST

ಹೆಬ್ಬಾಳ್ಕರಗೆ ನಿಂದನೆ ಪ್ರಕರಣ: ವರದಿ ನೀಡಿದ ಬಳಿಕ ತೀರ್ಮಾನ: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ ಸಿ.ಟಿ. ರವಿಯವರೂ ಪ್ರತಿ ದೂರು ನೀಡಿದ್ದಾರೆ.

ಶಿರಸಿ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಕರಣವನ್ನು ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ಅವರು ವಿಡಿಯೋ ಸೇರಿದಂತೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಪರಿಷತ್ ಉಪಸಭಾಪತಿ ಅಧ್ಯಕ್ಷರಾಗಿರುವ ಸದನದ ನೀತಿ ನಿರೂಪಣಾ ಸಮಿತಿಗೆ ಪ್ರಕರಣವನ್ನು ವಹಿಸಲಾಗಿದೆ. ಅದರಲ್ಲಿ ಸಿ.ಟಿ. ರವಿಯೂ ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯವರು ಸದನದ ಆಡಿಯೋ, ವಿಡಿಯೋ ಪರಿಶೀಲನೆ ಮಾಡಲಿದ್ದಾರೆ. ಮಾಧ್ಯಮದವರೂ ವಿಡಿಯೋ ನೀಡಿದ್ದಾರೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರದಲ್ಲಿ ಪ್ರಕರಣದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ ಸಿ.ಟಿ. ರವಿಯವರೂ ಪ್ರತಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಸಮಿತಿಗೆ ಸತ್ಯಾಸತ್ಯತೆ ಪರಿಶೀಲನೆಗೆ ತಿಳಿಸಲಾಗಿದೆ. ಅಲ್ಲಿನ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದ ಅವರು, ಸಭಾಪತಿಗಳು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಂತೆ. ಅವರು ಪಕ್ಷಪಾತ ಮಾಡಬಾರದು. ಸಿ.ಟಿ. ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ಬಿಹಾರದ ಶಾಸಕ ಸಭೆಯಲ್ಲೂ ಶ್ಲಾಘಿಸಲಾಗಿದೆ. ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ನಿರ್ಧಾರ ತಪ್ಪು ಎಂದರೂ ಅದು ಅವರ ಅಭಿಪ್ರಾಯ ಎಂದರು. ಕಾಂಗ್ರೆಸ್‌ನವರು ಸಭಾಪತಿ ಸ್ಥಾನದಿಂದ ಹೊರಟ್ಟಿ ಅವರನ್ನು ಇಳಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಭಾಪತಿ ಎನ್ನುವುದು ಕಾಯಂ ಕುರ್ಚಿಯಲ್ಲ. ಮೂರು ಬಾರಿ ಸಭಾಪತಿಯಾಗಿದ್ದೇನೆ. ಈಗ ನಾಲ್ಕು ವರ್ಷಗಳಿಂದ ಸಭಾಪತಿಯಾಗಿದ್ದೇನೆ. ಸರ್ಕಾರಗಳು ಬದಲಾದಾಗ ಸಭಾಪತಿಗಳನ್ನು ಇಳಿಸುವುದು ಕೆಟ್ಟ ಸಂಪ್ರದಾಯ. ಅದು ನಮ್ಮ ರಾಜ್ಯದಲ್ಲಿ ರೂಢಿಯಲ್ಲಿದೆ. ಆದರೆ ಇಲ್ಲಿಯವರೆಗೆ ನನ್ನ ಮೇಲೆ ಯಾವ ಪಕ್ಷದಿಂದಲೂ ಒಂದೇ ಒಂದು ಆರೋಪವೂ ಬಂದಿಲ್ಲ ಎಂದರು.

ಸಭಾಪತಿಯಾಗಿ ಯಾವ ಪಕ್ಷದ ಪರವಾಗಿಯೂ ಇಲ್ಲ. ನಿಷ್ಪಕ್ಷಪಾತವಾಗಿ ಕಾರ್ಯ ಮಾಡುತ್ತಿದ್ದೇನೆ. ಯಾರಿಂದಲೂ ಒಂದೇ ಒಂದು ದೂರು ಇಲ್ಲ. ಸಭಾಪತಿಯಾಗಿ ಆಯ್ಕೆ ಆದ ತಕ್ಷಣ ನನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅಂದೇ ರಾಜೀನಾಮೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.ಸಭಾಪತಿ, ಸಭಾಧ್ಯಕ್ಷ ಎಂಬವು ಸಾಂವಿಧಾನಿಕ ಹುದ್ದೆಗಳು. ಸರ್ಕಾರ ಬದಲಾದ ತಕ್ಷಣ ಬದಲಾಯಿಸುವುದು, ಅವಿಶ್ವಾಸ ಮಾಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ನನ್ನನ್ನು ಬದಲಾಯಿಸುತ್ತಾರೆ ಎಂಬ ವರದಿಗಳನ್ನೂ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಭಾಪತಿ ಪಕ್ಷಾತೀತವಾಗಿ ಇರಬೇಕು. ನಾನೂ ಸಭಾಪತಿಯಾಗಿ ಹಾಗೇ ಇದ್ದೇನೆ. ವೈಯಕ್ತಿಕ ಯಾರೆ ಏನೇ ಹೇಳಿದರೂ ನಾನು ಮಾತನಾಡುವುದಿಲ್ಲ ಎಂದರು.