ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಸೈನಿಕ ಧ್ವಜ ದಿನಾಚರಣೆಯನ್ನು ಪ್ರತಿ ವರ್ಷ ಕೈಗೊಳ್ಳಲಾಗುತ್ತಿದ್ದು, ಧ್ವಜ ವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೆರವಾಗೋಣ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಶಿವಮೊಗ್ಗ: ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಸೈನಿಕ ಧ್ವಜ ದಿನಾಚರಣೆಯನ್ನು ಪ್ರತಿ ವರ್ಷ ಕೈಗೊಳ್ಳಲಾಗುತ್ತಿದ್ದು, ಧ್ವಜ ವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೆರವಾಗೋಣ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಧ್ವಜ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, 1949ರಿಂದ ಪ್ರತಿ ವರ್ಷ ಸೈನಿಕ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಧ್ವಜ ದಿನಾಚರಣೆ ಅಂಗವಾಗಿ ಸಂಗ್ರಹವಾಗುವ ವಂತಿಗೆ ಹಣವನ್ನು ನಿವೃತ್ತ ಸೈನಿಕರ ಕುಟುಂಬ, ಅವರ ಅವಲಂಬಿತರ ಕಲ್ಯಾಣಕ್ಕಾಗಿ ಹಾಗೂ ಯುದ್ದದಲ್ಲಿ ಅಂಗವಿಕಲತೆಗೆ ಒಳಗಾದ ಸೈನಿಕರ ನೆರವಿಗಾಗಿ ಬಳಕೆ ಮಾಡಿಕೊಳ್ಳಲಾಗುವುದು. ಆದ್ದರಿಂದ ಎಲ್ಲ ಅಧಿಕಾರಿಗಳು, ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದ ಅವರು ಶಿವಮೊಗ್ಗ ಜಿಲ್ಲೆ ಧ್ವಜ ವಂತಿಗೆ ಸಂಗ್ರಹದಲ್ಲಿ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿ ಮಾದರಿಯಾಗಲಿ ಎಂದರು.ಪುರೋಹಿತರಾದ ನಾಗರಾಜ್ ಎಂಬುವವರು ಧ್ವಜ ದಿನಾಚರಣೆ ಅಂಗವಾಗಿ 25000 ರು.ಗಳ ವಂತಿಗೆಯನ್ನು ನೀಡಿದ್ದು ಅವರನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಗೌರವಿಸಿ, ನಾಗರಾಜ್‌ರವರು ಎಲ್ಲರಿಗೂ ಪ್ರೇರಣೆ ಎಂದರು.
ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ(ಪ್ರ)ರಾದ ಡಾ.ಸಿ.ಎ.ಹಿರೇಮಠ ಮಾತನಾಡಿ, ಈ ಬಾರಿ ಧ್ವಜ ವಂತಿಗೆಯ ಸಂಗ್ರಹದಲ್ಲಿ ಉತ್ತಮವಾಗಿ ಗುರಿ ಸಾಧನೆ ಮಾಡಲಾಗಿದೆ. ಧ್ವಜ ದಿನದ ಅಂಗವಾಗಿ ಸಂಗ್ರಹವಾಗುವ ವಂತಿಗೆ ಹಣದಿಂದ ನಿವೃತ್ತ ಸೈನಿಕರು, ಅವರ ಅವಲಂಬಿತರಿಗೆ ಅನುಕೂಲ ಮಾಡಿಕೊಡಲಾಗುವುದು. ವಂತಿಗೆ ಹಣ ಹೆಚ್ಚಾದರೆ ಹೆಚ್ಚಿನ ಅನುಕೂಲ ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು, ಸಾರ್ವಜನಿಕ ಸಹಕಾರ ಸಿಕ್ಕರೆ ಒಳ್ಳೆಯದು ಎಂದರು.ಈ ಸಂದರ್ಭದಲ್ಲಿ ಜಿಲ್ಲೆಯ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರ ಅವಲಂಬಿತರು, ಎನ್‌ಸಿಸಿ ಅಧಿಕಾರಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.