ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಾರ್ಚ್ ತಿಂಗಳ ಮಧ್ಯಭಾಗ ಕಳೆಯುತ್ತಾ ಬಂದರೂ ಮಳೆಯಾಗದಿರುವುದರಿಂದ ಬೆಳೆಗಾರರು ಹನಿ ಮತ್ತು ತುಂತುರು ನೀರಾವರಿಗಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುವಂತಾಗಿದೆ.ಮುಂದಿನ ಹಂಗಾಮು ಉತ್ತಮವಾಗಿ ಮೂಡಿಬರಬೇಕಾದರೆ ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ತಿಂಗಳಿನಲ್ಲಿ ಮುಂಗಾರು ಮಳೆಯಾಗುವ ಅಗತ್ಯವಿದೆ. ಆದರೆ, ಸಕ್ರಾಂತಿ ಹಬ್ಬದ ಮುನ್ನಾ ದಿನ ತಾಲೂಕಿನ ಹಲವೆಡೆ ಮಳೆ ಸುರಿದಿದ್ದನ್ನು ಬಿಟ್ಟರೆ ಇದುವರೆಗೆ ಮಳೆಯಾಗಿಲ್ಲ. ಪರಿಣಾಮ ಕಾಫಿ ಬೆಳೆಗಾರರು ಹನಿನೀರಾವರಿ ಮೊರೆ ಹೋಗಿದ್ದಾರೆ. ನೀರಿನಾಶ್ರಯವಿಲ್ಲದ ಬೆಳೆಗಾರರು ಆಕಾಶದೆಡೆಗೆ ಮುಖ ಮಾಡಿ ಮಳೆಯ ಆಗಮನಕ್ಕಾಗಿ ಕಾದಿದ್ದಾರೆ. ಬಾಣಲೆಯಿಂದ ಬೆಂಕಿಗೆ:
ಜನವರಿ ಮಧ್ಯಭಾಗದಲ್ಲಿ ಸುರಿದ ಮಳೆ ಹೊರತುಪಡಿಸಿ ಇದುವರೆಗೆ ಮಳೆಯಾಗಿಲ್ಲ. ತಾಲೂಕಿನಲ್ಲಿ ಹಲವು ಬಾರಿ ಮೋಡ ಮುಸುಕಿದ ವಾತಾವಾರಣ ನಿರ್ಮಾಣವಾದರೂ ಹನಿಮಳೆ ಭೂಮಿಗೆ ಬೀಳದಾಗಿದೆ. ಜನವರಿ ಮಧ್ಯಭಾಗದಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಜನವರಿ ೨೦ರಿಂದ ೨೫ರವರಗೆ ಹೂವು ಮೂಡಿತ್ತು. ಸದ್ಯ ಈ ಹೂವು ಉಳಿಸಿಕೊಳ್ಳಬೇಕಾದರೆ ಫೆಬ್ರವರಿ ಮೊದಲ ವಾರ ಅಥಾವ ಎರಡನೇ ವಾರದಲ್ಲಿ ಮತ್ತೊಮ್ಮೆ ಮಳೆಯಾಗಬೇಕಿತ್ತು. ಆದರೆ, ಮೊದಲ ಮಳೆ ಸುರಿದ ಎರಡು ತಿಂಗಳು ಸಮೀಪಿಸುತ್ತ ಬಂದರೂ ಎರಡನೇ ಬಾರಿ ಮಳೆಯಾಗದಿರುವುದರಿಂದ ಈಗಾಗಲೇ ಬೆಳೆಗಾರರು ಎರಡರಿಂದ ಮೂರು ಸುತ್ತಿನ ಹನಿನೀರಾವರಿ ಮಾಡುವಂತೆ ಮಾಡಿದೆ. ಒಮ್ಮೆ ಹನಿನೀರಾವರಿ ಮಾಡಬೇಕಾದರೆ ಬೆಳೆಗಾರರಿಗೆ ಲಕ್ಷಾಂತರ ರು. ಗಳ ಡೀಸೆಲ್, ವಿದ್ಯುತ್, ಮಾನವ ಶ್ರಮ ಖರ್ಚಾಗುತ್ತಿದೆ. ಇದು ಎರಡರಿಂದ ಮೂರನೇ ಬಾರಿ ಹನಿ ನೀರಾವರಿ ಮಾಡುತ್ತಿರುವುದರಿಂದ ವೆಚ್ಚದ ಪ್ರಮಾಣ ಲೆಕ್ಕಕ್ಕೆ ಸಿಗದಂತಾಗಿದೆ.ಈ ಮಧ್ಯೆ ಕೆಲವೊಂದು ಬೆಳೆಗಾರರಿಗೆ ಈಗಾಗಲೇ ನೀರಿನ ಮೂಲಗಳು ಬರಿದಾಗುತ್ತಿದ್ದು ಮುಂದಿನ ಮಳೆಗಾಲದವರೆಗೆ ಗಿಡಗಳನ್ನು ಹಾಗೂ ಫಸಲನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತೆ ಆರಂಭವಾಗಿದೆ. ಹವಮಾನ ಇಲಾಖೆಯ ಪ್ರಕಾರ ಮಾರ್ಚ್ ೧೫ ಹಾಗೂ ೧೬ರಂದು ಮಳೆಯಾಗುವ ಸೂಚನೆ ನೀಡಿದೆ. ಆದರೆ ಹವಾಮಾನ ಇಲಾಖೆಯ ಇಂತಹ ಹಲವು ಭವಿಷ್ಯಗಳು ಸುಳ್ಳಾಗಿದ್ದು ಬೆಳೆಗಾರರಿಗೆ ಈ ಇಲಾಖೆಯ ವರದಿಯ ಮೇಲೆ ನಂಬಿಕೆಯೆ ಇಲ್ಲದಾಗಿದೆ. ಕನಿಷ್ಠ ಒಮ್ಮೆ ಒಂದು ಅಂಗುಲದಷ್ಟು ಮಳೆಯಾದರೆ ಹನಿನೀರಾವರಿಗಾಗಿ ಮಾಡುತ್ತಿರುವ ಅಷ್ಟು ಹಣ ಹಾಗೂ ಶ್ರಮ ಉಳಿತಾಯವಾಗಲಿದೆ ಎಂಬ ಆಶಾಭಾವನ ಬೆಳೆಗಾರರದ್ದು. ಕಡಿಮೆಯಾಗಿದೆ ನೀರಿನ ಹರಿವು:
ಸದ್ಯ ಮಲೆನಾಡಿನಲ್ಲಿ ಬೇಸಿಗೆಯ ಧಗೆ ಆರಂಭದಲ್ಲೆ ಹೆಚ್ಚಿದ್ದು ಇನ್ನೂ ಏಪ್ರೀಲ್ ತಿಂಗಳ ಬಿಸಿಲನ್ನು ನೆನೆದುಕೊಂಡರೆ ದಿಗಿಲಾಗುತ್ತಿದ್ದಾರೆ ಮಲೆನಾಡಿಗರು. ಇಂತಹ ಬಿಸಿಲು ಧಗೆಯಲ್ಲಿ ಕಾಫಿ ಗಿಡ ಹಾಗೂ ಫಸಲನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಸಾಕಷ್ಟು ಬೆಳೆಗಾರರು ಸ್ವಂತ ಜಲ ಮೂಲ, ಸಾರ್ವಜನಿಕ ಜಲಮೂಲ ಎನ್ನದೆ ತೋಟಗಳಿಗೆ ನೀರನ್ನು ಎತ್ತುತ್ತಿದ್ದಾರೆ. ಪರಿಣಾಮ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಇದೇ ಪ್ರಮಾಣದಲ್ಲಿ ನದಿಗಳಿಂದ ನೀರನ್ನೆತ್ತಿದ್ದರೆ ಏಪ್ರೀಲ್ ತಿಂಗಳಿನಲ್ಲಿ ಹಕ್ಕಿಪಕ್ಷಿಗಳಿಗೂ ಕುಡಿಯಲು ನೀರಿನ ಅಭಾವ ಸೃಷ್ಟಿಯಾಗಲಿದೆ ಎಂಬ ಆತಂಕ ಜನರಿಂದ ಕೇಳಿಬರುತ್ತಿದೆ. ತಾಲೂಕಿನಲ್ಲಿ ನಲ್ವತ್ತು ಕಿ.ಮೀ. ದೂರದವರೆಗೆ ಹೇಮಾವತಿ ಹರಿಯುತ್ತಿದ್ದು ಚಿಕ್ಕಮಗಳೂರು ಹಾಗೂ ಕೂಡಗು ಜಿಲ್ಲೆಗಳನ್ನು ಈ ನದಿ ಸಂಪರ್ಕಿಸುತ್ತದೆ. ಇಷ್ಟು ದೂರು ಹರಿಯುವ ನದಿಯಿಂದ ಭಾರಿ ಪ್ರಮಾಣದಲ್ಲಿ ನೀರನ್ನೆತ್ತುತ್ತಿದ್ದು ಅಂದಾಜು ೫೦೦ಕ್ಕೂ ಅಧಿಕ ಮೋಟಾರ್‌ಗಳಿಂದ ಕಾಫಿ ತೋಟಗಳಿಗೆ ನೀರು ಹರಿಸುತ್ತಿದ್ದಾರೆ. ಪರಿಣಾಮ ಈ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಲಾರಂಭಿಸಿದೆ. ಮತ್ತೊಂದು ಮುಖ್ಯ ನದಿ ಎತ್ತಿನಹೊಳೆ ಸಹ ಬರಿದಾಗುವ ಹಂತಕ್ಕೆ ತಲುಪಿದ್ದು ಈಗಾಗಲೇ ಈ ನದಿಯ ಹಲವೆಡೆ ನೀರಿನ ಹರಿವು ನಿಲುಗಡೆಯಾಗಿದೆ. ಇನ್ನೂ ಪಾಲಹಳ್ಳಿ, ಐಗೂರು ಹೊಳೆಗಳ ಹರಿವು ಕ್ರಮೇಣ ಕ್ಷಣಿಸಲಾರಂಬಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯ
ಸಾರ್ವಜನಿಕ ಜಲ ಮೂಲಗಳಿಗೆ ಮೋಟರ್‌ಗಳಿಂದ ನೀರು ಹರಿಸುವುದನ್ನು ತಡೆಯುವುದು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಹಾಗೂ ಕಂದಾಯ ನೀರಿಕ್ಷಕರ ಕೆಲಸ. ಆದರೆ, ಈ ವಿಚಾರ ಬಹುತೇಕ ಈ ಅಧಿಕಾರಿಗಳಿಗೆ ತಿಳಿದೆ ಇಲ್ಲ ಎಂಬುದು ಆಶ್ಚರ್ಯಕರ. ಅಧಿಕಾರಿಗಳ ಎದುರೆ ಕೆರೆ, ಹೊಳೆಗಳಿಂದ ಮೋಟರ್‌ಗಳಲ್ಲಿ ನೀರು ಮೇಲೆತ್ತುತ್ತಿದ್ದರೂ ಮಾತನಾಡದ ಈ ಅಧಿಕಾರಿಗಳ ನಡೆ ಬೆಳೆಗಾರರಿಗೆ ಮತ್ತಷ್ಟು ಪ್ರೇರಣೆ ನೀಡುತ್ತಿದೆ. ಹಿಂದೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಲವು ಬಾರಿ ದಾಳಿ ಮಾಡಿ ಸಾರ್ವಜನಿಕ ಜಲಮೂಲಗಳಿಗೆ ಇಟ್ಟಿದ್ದ ಮೋಟಾರ್‌ಗಳನ್ನು ಜಪ್ತಿ ಮಾಡಿದ ಹಲವು ಘಟನೆಗಳು ನಡೆದಿವೆ. ಆದರೆ, ಪ್ರಸಕ್ತ ಇರುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಅರಿವೆ ಇಲ್ಲದಾಗಿದೆ.ಭಾರಿ ವಹಿವಾಟು
ಮಳೆಯಾಗದಿರುವುದು ಎಂಜಿನಿಯರಿಂಗ್ ಶಾಪ್‌ಗಳಿಗೆ ಹಾಗೂ ಮೆಕ್ಯಾನಿಕ್‌ಗಳಿಗೆ ಬೀಡುವಿಲ್ಲದ ದುಡಿಮೆ ನೀಡಿದ್ದು ಪ್ರಸಕ್ತ ವರ್ಷ ೫ರಿಂದ ೮೦ ಎಚ್‌ಪಿಯ ಸುಮಾರು 780 ಮೋಟರ್‌ಗಳು ವ್ಯಾಪಾರವಾಗಿದ್ದು ಈ ಮೂಲಕ 25 ಕೋಟಿಗೂ ಅಧಿಕ ವಹಿವಾಟು ಎಂಜಿನಿಯರಿಂಗ್ ಶಾಪ್‌ಗಳಲ್ಲಿ ನಡೆದಿದ್ದರೆ, ಮೋಟರ್ ರಿಪೇರಿ, ಜಟ್ ದುರಸ್ತಿ, ವಿದ್ಯುತ್ ಉಪಕರಣಗಳ ದುರಸ್ತಿ ಹೆಸರಿನಲ್ಲಿ ಮೆಕ್ಯಾನಿಕ್‌ಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಸಿದೆ.------------------------------------------------------*ಹೇಳಿಕೆ 1
ಜನವರಿ ತಿಂಗಳ ನಂತರ ತಾಲೂಕಿನಲ್ಲಿ ಮಳೆಯಾಗದಿರುವುದರಿಂದ ಬೆಳೆಗಾರರು ಹನಿ ನೀರಾವರಿಗಾಗಿ ಕೋಟ್ಯಾಂತರ ರುಪಾಯಿ ವಿನಿಯೋಗಿಸುವಂತಾಗಿದೆ. ಪ್ರಸಕ್ತ ಸ್ಥಿತಿಯಲ್ಲಿ ಒಂದೆರಡು ಅಂಗುಲ ಮಳೆಯಾಗುವ ಅಗತ್ಯವಿದೆ. ಇದರಿಂದ ಡೀಸೆಲ್, ವಿದ್ಯುತ್ ಹಾಗೂ ಮಾನವ ಶ್ರಮ ಉಳಿಯಲಿದೆ.- ಧರ್ಮರಾಜ್, ಹೊಂಕರವಳ್ಳಿ ಪ್ರಗತಿಪರ ರೈತ (15ಎಚ್ಎಸ್ಎನ್15ಎ)
*ಹೇಳಿಕೆ2ಹೇಮಾವತಿ ನದಿಯೊಂದಕ್ಕೆ ಸುಮಾರು ೫೦೦ಕ್ಕೂ ಅಧಿಕ ಮೋಟರ್‌ಗಳನ್ನಿಟ್ಟು ನೀರನ್ನೆತ್ತಿದ್ದು ಇದು ಇನ್ನೊಂದು ತಿಂಗಳು ಹೀಗೆ ಮುಂದುವರಿದರೆ ನದಿ ಹರಿವು ನಿಲುಗಡೆಯಾಗುವುದರಲ್ಲಿ ಯಾವುದೆ ಅನುಮಾನವಿಲ್ಲಉಮೇಶ್, ಅಧ್ಯಕ್ಷರು. ಶ್ರೀರಾಮಸೇನೆ. ಸಕಲೇಶಪುರ.೧೪ ಎಸ್‌ಕೆಪಿಪಿ ೧ ಹನಿನೀರಾವರಿಯಲ್ಲಿ ತೊಡಗಿರುವ ಬೆಳೆಗಾರರು.