ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿಶ್ವ ವಿಖ್ಯಾತ ಐತಿಹಾಸಿಕ ಪ್ರವಾಸಿ ತಾಣವಾದ ತಾಲೂಕಿನ ನಂದಿಬೆಟ್ಟದಲ್ಲಿ ಇದೀಗ ಹೊಸ ಆತಂಕವೊಂದು ಮನೆ ಮಾಡಿದೆ. ಈ ಗಿರಿಧಾಮದ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಕರಡಿಗಳ ಹಿಂಡು ಪ್ರತ್ಯಕ್ಷವಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ತೀವ್ರ ಭೀತಿಗೊಳಗಾಗಿದ್ದಾರೆ. ಕರಡಿಗಳ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ನಂದಿಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು, ಪ್ರೇಮಿಗಳು ಬರುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಶನಿವಾರ , ಭಾನುವಾರ ಮತ್ತು ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ. ಆದರೆ ಇದೀಗ ಗಿರಿಧಾಮದಲ್ಲಿ ಕರಡಿಗಳ ಹಿಂಡು ಕಾಣಿಸಿಕೊಳ್ಳುವುದರ ಮೂಲಕ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.
ರಾತ್ರಿಯಾದರೆ ಸಾಕು, ಕಾಡಿನಿಂದ ಹೊರಬರುವ ಕರಡಿಗಳ ಹಿಂಡು ಗಿರಿಧಾಮದಲ್ಲಿರುವ ಮನೆ, ಹೋಟೆಲ್ ಹಾಗೂ ರೆಸಾರ್ಟ್‌ಗಳ ಬಳಿ ಸುಳಿದಾಡುತ್ತಿವೆ. ಕಾರಹಳ್ಳಿ ಕ್ರಾಸ್ ಬಳಿ ರೆಸಾರ್ಟ್ವೊಂದರ ತಂತಿ ಮುಳ್ಳಿನ ಕಾಂಪೌಂಡ್‌ಗಳನ್ನು ಜಿಗಿದು ಆವರಣದವರೆಗೆ ಕರಡಿ ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇನ್ನು ನಂದಿಗಿರಿಧಾಮದ ಆಸುಪಾಸಿನಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆಯು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಮನವಿ ಮಾಡಿದೆ.
ಆತಂಕಕ್ಕೆ ಒಳಗಾಗಬೇಡಿ:
ಕರಡಿಗಳು ಪ್ರತ್ಯಕ್ಷವಾದರೆ ತಕ್ಷಣ ಗಾಬರಿಗೊಂಡು ಓಡಬೇಡಿ. ಪ್ರಚೋದಿಸಬೇಡಿ, ಕರಡಿಗಳನ್ನು ಕಂಡು ಅವುಗಳ ಮೇಲೆ ಕಲ್ಲು ಎಸೆಯುವುದು ಅಥವಾ ಓಡಿಸಲು ಬೆಂಕಿ ಹಚ್ಚುವಂತಹ ಸಾಹಸಕ್ಕೆ ಕೈ ಹಾಕಬೇಡಿ. ವನ್ಯಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ನೀವು ಯಾವುದೇ ಹಾನಿ ಮಾಡದೆ ಶಾಂತವಾಗಿ ನಿಂತರೆ, ಕರಡಿಗಳು ತಾನಾಗಿಯೇ ಮರಳಿ ಕಾಡಿನತ್ತ ಹೆಜ್ಜೆ ಇಡುತ್ತವೆ. ವನ್ಯಜೀವಿಗಳಿಗೆ ತೊಂದರೆ ನೀಡದೆ ಸಹಕರಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಆದರೆ ರಾತ್ರಿ ವೇಳೆಯಲ್ಲಿ ಕರಡಿಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.ಸಿಕೆಬಿ-1 ಮತ್ತು 2 ಕಾರಹಳ್ಳಿ ಕ್ರಾಸ್ ಬಳಿ ರೆಸಾರ್ಟ್ವೊಂದರ ಆವರಣದಲ್ಲಿ ಕರಡಿ ಬಂದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು