ಅಗಲಿದ ಮಾಜಿ ಸಂಸದ ಎಚ್.ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಗಲಿದ ಹಿರಿಯ ಮುತ್ಸದ್ದಿ, ಮಾಜಿ ಸಂಸದ ಎಚ್.ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಪುಷ್ಪಗುಚ್ಚವಿರಿಸಿ ಅಂತಿಮ ಮನನ ಸಲ್ಲಿಸಿದರು.

ಹನುಮಂತಪ್ಪ ಅವರ ಪಾರ್ಥಿವ ಶರೀರವ ಮಧ್ಯಾಹ್ನ ಅವರ ನಿವಾಸದಿಂದ ತಂದು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಮೊದಲು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತಾದರೂ ಸಿಎಂ ಆಗಮನದ ಹಿನ್ನಲೆ ಸೂಕ್ತ ಬಂದೋ ಬಸ್ತ್ ಕಾರಣಕ್ಕೆ ಪೊಲೀಸ್ ಇಲಾಖೆ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿತು. ಜನರು ಸರತಿಯಲ್ಲಿ ನಿಂತ ಅಂತಿಮ ದರ್ಶನ ಪಡೆದರು.

ಪುಷ್ಪಗುಚ್ಚವಿರಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಚಿತ್ರದುರ್ಗ ಸದಾ ಬರಪೀಡಿತ ಒಣಭೂವಿಗೆ ನೀರುಣಿಸಬೇಕೆಂಬ ಹಂಬಲದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಹೋರಾಡಿದ ನೀರಾವರಿ ಹೋರಾಟಗಾರ, ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.

ಚಿತ್ರದುರ್ಗ ಜಿಲ್ಲೆಯ ಏಳಿಗೆಗೆ ಹನುಮಂತಪ್ಪ ಅವರ ಕೊಡುಗೆ ಅಪಾರ. ಜಿಲ್ಲೆಯ ಹಲವು ಪ್ರಮುಖ ಕೃಷಿ ಯೋಜನೆಗಳಿಗೆ, ಭದ್ರಾ ಮೇಲ್ದಂಡೆಯಂತಹ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ರೈತರ ಹಿತದೃಷ್ಟಿಯ ಹೋರಾಟಗಳಿಗೆ ಅವರು ಪ್ರಮುಖ ಶಕ್ತಿಯಾಗಿದ್ದರು. ಸಂಸತ್ತಿನಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಸದಾ ಧ್ವನಿ ಎತ್ತುತ್ತಾ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಭಗೀರಥ ಅವರು ಎಂದು ಗುಣಗಾನ ಮಾಡಿದರು.

ಎಚ್.ಹನುಮಂತಪ್ಪ ಅವರು ರೈಲ್ವೆ ಕಮಿಷನ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆ ನಂತರ ರಾಜ್ಯಸಭಾ ಸದಸ್ಯರಾಗಿ ಅತ್ಯಂತ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಿದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರಿಗೂ ಅತ್ಯಂತ ಆಪ್ತರಾಗಿದ್ದುಕೊಂಡು, ರಾಷ್ಟ್ರಮಟ್ಟದಲ್ಲಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಅಪಾರ ಜನಸೇವೆ ಮಾಡಿದ್ದಾರೆ ಎಂದರು.

ಹನುಮಂತಪ್ಪ ಅವರು ಅತ್ಯಂತ ಸರಳ ಸಜ್ಜನಿಕೆಯ ಜೀವನ ನಡೆಸಿದವರು. ಎಸ್.ನಿಜಲಿಂಗಪ್ಪ ಅವರ ತತ್ವ ಆದರ್ಶಗಳನ್ನು ಮತ್ತು ತಮ್ಮದೇ ಆದ ವೈಚಾರಿಕ ನಿಲುವುಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು. ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವಲ್ಲಿ ಹಾಗೂ ಪಕ್ಷದ ಸ್ವಂತ ಕಚೇರಿ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ದೊಡ್ಡದಿದೆ. ಯಾರನ್ನೂ ವೈಯಕ್ತಿಕವಾಗಿ ಹಳಿಯದ ಅವರು, ಸದಾ ಪಕ್ಷದ ಕಾರ್ಯಕರ್ತರ ಏಳಿಗೆಗೆ ಚಿಂತಿಸುತ್ತಿದ್ದರು. ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಎಲ್ಲಾ ಸಕಲ ಗೌರವಗಳನ್ನು ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾವು ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಿದ್ದೇವೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪೊಲೀಸ್ ಇಲಾಖೆ ವತಿಯಿಂದ ಮೃತರ ಗೌರವಾರ್ಥ ಮೂರು ಸುತ್ತಿನ ಕುಶಾಲತೋಪು ಸಿಡಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಎರಡು ನಿಮಿಷದ ಮೌನಾಚರಣೆ ಆಚರಿಸಲಾಯಿತು. ಎಚ್.ಹನುಮಂತಪ್ಪ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಲಾದ ರಾಷ್ಟ್ರಧ್ವಜವನ್ನು ಪುತ್ರ ಜಿ.ಎಚ್.ಮೋಹನ್ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಜೋಗಿಮಟ್ಟಿಯ ಮುಕ್ತಿಧಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಂಸದ ಗೋವಿಂದ ಕಾರಜೋಳ, ಚಳ್ಳಕೆರೆ ಶಾಸಕ ಟಿ.ರಘಮೂರ್ತಿ, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮುರುಘಾಮಠದ ಬಸವಕುಮಾರ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವೆ ಸ್ವಾಮೀಜಿ, ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ, ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜ್ಯ ದ್ರಾಕ್ಷಾ ಮಂಡಳಿ ಅಧ್ಯಕ್ಷ ಡಾ.ಯೋಗಿಶ್ ಬಾಬು, ಮಾಜಿ ಸಚಿವ ಹಾಗೂ ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಖ್ಯಾತ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್, ಮಾಯಕೊಂಡ ಶಾಸಕ ಬಸಂತಪ್ಪ, ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್, ಕಂಠೀರವ ಸ್ಟೋಡಿಯೋ ಅಧ್ಯಕ್ಷ ಮೆಹಬೂಬ್ ಪಾಷ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಡಾ.ಆಕಾಶ್, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಜನಪತ್ರಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಎಚ್.ಹನುಮಂತಪ್ಪ ಅವರ ಅಂತಿಮ ದರ್ಶನ ಪಡೆದರು.