ಬಸವನಬಾಗೇವಾಡಿಯಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಆರಂಭಿಸುವಂತೆ ಆಗ್ರಹಿಸಿ 188 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಕಚೇರಿ ಸ್ಥಾಪನೆಯಾಗಿದೆ. ಕಚೇರಿ ಆರಂಭವಾಗಿ 13 ವರ್ಷ ಗತಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜಬ್ದಾರಿಯಿಂದ ರೈತರಿಗೆ ಸಿಗಬೇಕಾದ ಮೂಲ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

೧೮೮ ದಿನಗಳ ಹೋರಾಟದ ಫಲವಾಗಿ ಪಟ್ಟಣದಲ್ಲಿ ಅಖಂಡ ಬಸವನಬಾಗೇವಾಡಿ ವಿದ್ಯುತ್ ವಿಭಾಗೀಯ ಕಚೇರಿ ಸ್ಥಾಪನೆಗೆ 2012 ಡಿ.12 ರಂದು ಆದೇಶ ಸಿಕ್ಕಿತು. ಇದರಿಂದಾಗಿ 297 ಗ್ರಾಮಗಳ ಜನರು ವಿಜಯಪುರಕ್ಕೆ ಹೋಗಿ ಬರುವುದು ತಪ್ಪಿದೆ. ಆದರೆ ಇಂದಿಗೆ ಈ ಕಚೇರಿಯು ಹದಿಮೂರು ವರ್ಷದ ಹಿಂದೆ ಆದೇಶದೊಂದಿಗೆ ಆರಂಭವಾಗಿ ಹದಿನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದರೂ ಜನರಿಗೆ ಈ ಕಚೇರಿಯ ಸೌಲಭ್ಯಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಎಂದು ರೈತಪರ, ಜನಪರ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಶುಕ್ರವಾರ ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿದ ಅವರು, ಪಟ್ಟಣದಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಇಲ್ಲದ ಪರಿಣಾಮವಾಗಿ ಜನರು ಜಿಲ್ಲಾ ಕೇಂದ್ರ ವಿಜಯಪುರಕ್ಕೆ ತಮ್ಮ ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿಯಿತ್ತು. ಅಲ್ಲದೇ ದೂರದ ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕಿನ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಜನರು ವಿದ್ಯುತ್ ಕೆಲಸಗಳಿಗಾಗಿ ವಿಜಯಪುರದಲ್ಲಿರುವ ವಿಭಾಗೀಯ ಕಚೇರಿಗೆ ಹೋಗುವ ಪರಿಸ್ಥಿತಿಯಿತ್ತು. ಜನರ ಅಲೆದಾಡುವುದನ್ನು ಮನಗಂಡು ಅವರ ಕೆಲಸಗಳು ಸುಲಭವಾಗಿ ಬೇಗನೇ ಆಗುವ ಉದ್ದೇಶದಿಂದ ಬಸವನಬಾಗೇವಾಡಿಯಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಆರಂಭಿಸುವಂತೆ ಆಗ್ರಹಿಸಿ 188 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಇಲಾಖೆಯು ಕಚೇರಿ ಸ್ಥಾಪನೆಗೆ ಆದೇಶ ನೀಡಿತು. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನು ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಕಚೇರಿ ಆರಂಭವಾಗಿ ಹದಿಮೂರು ವರ್ಷ ಗತಿಸಿದರೂ ಇಂಧನ ಇಲಾಖೆಯ ಸಚಿವರು, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜಬ್ದಾರಿಯಿಂದ ರೈತರಿಗೆ ಸಿಗಬೇಕಾದ ಮೂಲ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಅಕ್ರಮ-ಸಕ್ರಮ ಯೋಜನೆಯಲ್ಲಿ ಹಣ ತುಂಬಿದರೂ ಇದುವರೆಗೂ ಸರಿಯಾಗಿ ಮೂಲಭೂತ ಸೌಲಭ್ಯ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಇದರಿಂದಾಗಿ ಇಲಾಖೆಗೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಹಲವಾರು ಅಧಿಕಾರಿಗಳು ಸ್ಥಾನಿಕ ಸ್ಥಳದಲ್ಲಿ ಇರದೇ ಬೇರೆಡೆಯಿಂದ ಬಂದು ಹೋಗುವುದರಿಂದಾಗಿ ರೈತರಿಗೆ, ಜನರಿಗೆ ಬಹಳ ಅನಾನೂಕೂಲತೆಯಾಗುತ್ತಿದೆ. ಇಲಾಖೆಯ ಸಿಬ್ಬಂದಿ ಸಹ ರೈತರಿಗೆ, ಜನರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಅವರ ಕೆಲಸಗಳು ನೆನೆಗುದಿಗೆ ಬೀಳುತ್ತಿವೆ. ಈಚೆಗೆ ಬಂದ ಹಿರಿಯ ಅಧಿಕಾರಿಗಳು ಕುರ್ಚಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಕೂಡಲೇ ಇಂಧನ ಸಚಿವರು, ಮೇಲಾಧಿಕಾರಿಗಳು, ಸ್ಥಳೀಯ ಶಾಸಕರು ಇದರ ಕಡೆಗೆ ಗಮನ ಹರಿಸಬೇಕಿದೆ. ಅಲ್ಲದೇ ಹೋರಾಟದ ಫಲವಾಗಿ ನಿಡಗುಂದಿ, ತಾಳಿಕೋಟಿಗೆ ಎರಡು ಉಪವಿಭಾಗ ಕಚೇರಿ, ಏಳು ಶಾಖಾ ಕಚೇರಿಗಳಾದ ಮನಗೂಳಿ, ಕೊಲ್ಹಾರ,ಇಂಗಳೇಶ್ವರ, ಹುಲ್ಲೂರ, ತಂಗಡಗಿ, ಮಡಿಕೇಶ್ವರ, ತಾಳಿಕೋಟಿ ಗ್ರಾಮೀಣ ಮಂಜೂರಾಗಿದ್ದವು ಎಂದರು.