ಕೆಲವು ಆಡಳಿತಾತ್ಮಕ ಹಾಗೂ ಕಾನೂನು ಸಂಬಂಧಿತ ವಿಚಾರಗಳ ಹಿನ್ನೆಲೆ ಜಿಲ್ಲಾಧಿಕಾರಿ ನ್ಯಾಯಾಲಯವು ಎ. ಆರ್. ಅಶೋಕ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಶೋಕ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಡೀಸಿ ಕೋರ್ಟ್ ನೀಡಿದ್ದ ಅನರ್ಹತೆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಮುಂದಿನ ವಿಚಾರಣೆವರೆಗೆ ಹಳೆಯ ಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ. ಇದರಿಂದ ಎ.ಆರ್. ಅಶೋಕ್ ಅವರು ಪುರಸಭಾ ಸದಸ್ಯರಾಗಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ದೊರೆತಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಪುರಸಭೆ ಸದಸ್ಯ ಎ. ಆರ್. ಅಶೋಕ್ ಅವರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಅವರು ಪುರಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.ಕೆಲವು ಆಡಳಿತಾತ್ಮಕ ಹಾಗೂ ಕಾನೂನು ಸಂಬಂಧಿತ ವಿಚಾರಗಳ ಹಿನ್ನೆಲೆ ಜಿಲ್ಲಾಧಿಕಾರಿ ನ್ಯಾಯಾಲಯವು ಎ. ಆರ್. ಅಶೋಕ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಶೋಕ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಡೀಸಿ ಕೋರ್ಟ್ ನೀಡಿದ್ದ ಅನರ್ಹತೆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಮುಂದಿನ ವಿಚಾರಣೆವರೆಗೆ ಹಳೆಯ ಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ. ಇದರಿಂದ ಎ.ಆರ್. ಅಶೋಕ್ ಅವರು ಪುರಸಭಾ ಸದಸ್ಯರಾಗಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ದೊರೆತಿದೆ.
ಹೈಕೋರ್ಟ್ ಆದೇಶ ಹೊರಬಿದ್ದ ಬಳಿಕ ಅಶೋಕ್ ಬೆಂಬಲಿಗರಲ್ಲಿ ಸಂತಸ ಮನೆಮಾಡಿತ್ತು. ಪುರಸಭೆ ನಿಕಟಪೂರ್ವ ಅಧ್ಯಕ್ಷ ಎ ಆರ್ ಅಶೋಕ್ ಪತ್ರಕರ್ತರೊಂದಿಗೆ ಮಾತನಾಡಿ, ತಮ್ಮ ವಿರುದ್ಧ ಡೀಸಿ ಕೋರ್ಟ್‌ನಲ್ಲಿ ಸದಸ್ಯತ್ವ ರದ್ದುಪಡಿಸಲಾಗಿತ್ತು. ಆದರೆ ಇದೀಗ ಘನ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ, ಪುರಸಭಾ ಸದಸ್ಯತ್ವವನ್ನು ಮುಂದುವರಿಸಬಹುದು ಎಂದು ಆದೇಶ ನೀಡಿದೆ. ಹೈಕೋರ್ಟ್ ಆದೇಶವನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ್ದು, ಮೇ 11ರಂದು ನಡೆಯಲಿರುವ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದರು.ತಮ್ಮ ವಿರುದ್ಧ ಕೆಲವರು ಪಿತೂರಿ ಮಾಡಿ ಸದಸ್ಯತ್ವ ತಪ್ಪಿಸಲು ಯತ್ನಿಸಿದರು. ಒಂದು ವರ್ಷದ ಕಾಲ ತೊಂದರೆ ನೀಡಿ ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದರು. ಎಲ್ಲಿ ಹೋದರೂ, ಬಂದರೂ ತೊಂದರೆ ಕೊಟ್ಟರು. ಆದರೆ ಶ್ರೀ ಚನ್ನಕೇಶವ ಸ್ವಾಮಿಯ ಕೃಪೆಯಿಂದ ಇವತ್ತು ಮತ್ತೆ ಜಯಶೀಲನಾಗಿ ಪುರಸಭಾ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜನರ ಪರವಾಗಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗುವುದಲ್ಲದೆ, ನನಗೆ ಬಂದಿರುವ ಹೈಕೋರ್ಟ್ ಆದೇಶವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದರು.ಈ ವೇಳೆ ಶಿವರಾಮ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ತಂದು ತೇಜೋವಧೆ ಮಾಡಿದರು. ನನ್ನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿಸಿದರು. ಬಸವೇಶ್ವರ ವೃತ್ತದಲ್ಲಿ ಮೈಕ್ ಹಿಡಿದು ನನ್ನನ್ನು ಭ್ರಷ್ಟ ಎಂದು ಕರೆದರು. ನಾನು ಯಾವತ್ತೂ ಶಾಸಕನ ಜೊತೆ ಸೇರಿಕೊಂಡಿಲ್ಲ. ಶಾಸಕರು ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಶ್ಲಾಘನೆ ಮಾಡಿದ್ದರು ಅಷ್ಟೇ ಎಂದು ಹೇಳಿದರು.
ಒಂದು ವರ್ಷ ಕಾಲ ಹಗಲು, ರಾತ್ರಿ ಕೋರ್ಟ್ ಕಚೇರಿಗಳ ಸುತ್ತಲೇ ತಿರುಗುವ ಪರಿಸ್ಥಿತಿ ನಿರ್ಮಾಣ ಮಾಡಿದರು. 80ನೇ ವಯಸ್ಸಿನಲ್ಲಿ ಜನರಿಗೆ ಈ ರೀತಿಯ ತೊಂದರೆ ಕೊಡೋದು ಸರಿಯೇ? ಇನ್ನೊಬ್ಬರ ಮೇಲೆ ಕೇಸ್ ಹಾಕು, ಜೈಲಿಗೆ ಕಳುಹಿಸು ಅನ್ನೋದು ರಾಜಕಾರಣ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಕ್ರಮ್ ಅವರನ್ನು ಅಧ್ಯಕ್ಷರನ್ನಾಗಿ ಮಾಡ್ತೀವಿ ಎಂದು ಹಿಂದೆಯೇ ಹೇಳಿದ್ದೇವೆ. ಶಿವರಾಮಣ್ಣವರ ಅವಶ್ಯಕತೆ ಇಲ್ಲದೇನೇ ಅಕ್ರಮ್ ಅಧ್ಯಕ್ಷರಾಗುತ್ತಾರೆ. ಮುಂದಿನ ಸೋಮವಾರ ಅವರಿಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ಅವರಿಗಾಗಿ ನಾನು ಹಾಕಿದ್ದ ಕೇಸನ್ನೂ ವಾಪಸ್ ಪಡೆದಿದ್ದೇನೆ. ನಮ್ಮ ಸ್ನೇಹಿತ ಅಕ್ರಮ್ ಅಧ್ಯಕ್ಷರಾಗಬೇಕು ಅನ್ನೋದೇ ನಮ್ಮ ಉದ್ದೇಶ. ನನ್ನ ಐದು ವರ್ಷದ ಅವಧಿಯವರೆಗೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ನಂತರ ಯಾವ ದಾರಿ ಸರಿಯೆಂದು ವಾರ್ಡ್‌ನ ಸ್ನೇಹಿತರು, ಬೆಂಬಲಿಗರು ಏನು ಹೇಳ್ತಾರೋ ಅದನ್ನು ಗಮನಿಸಿ ನಿರ್ಧಾರ ಮಾಡುತ್ತೇನೆ. ನಾಲ್ಕೈದು ತಿಂಗಳ ನಂತರ ಅದರ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.