ರಾಮನಗರ: ಫಲವತ್ತಾದ ಕೃಷಿ ಭೂಮಿಯಲ್ಲಿ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ಶಿಪ್)ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದುಗೊಳಿಸುವಂತೆ ಒತ್ತಾಯಿಸಿ ಮೇ 10ರಂದು ಭಾನುವಾರ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ತಿಳಿಸಿದರು
ರಾಮನಗರ: ಫಲವತ್ತಾದ ಕೃಷಿ ಭೂಮಿಯಲ್ಲಿ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ಶಿಪ್)ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದುಗೊಳಿಸುವಂತೆ ಒತ್ತಾಯಿಸಿ ಮೇ 10ರಂದು ಭಾನುವಾರ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯನ್ನು ಉಳಿಸಿಕೊಳ್ಳುವ ಸವಾಲು ರೈತರ ಮುಂದಿದೆ. ಇದು ಅಳಿವು ಉಳಿವಿನ ಪ್ರಶ್ನೆಯಾಗಿದ್ದು ರೈತರು ದನ ಕರು, ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗೂ ವ್ಯವಸಾಯದ ಸಲಕರಣೆಗಳೊಂದಿಗೆ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಈ ಯೋಜನೆ ವಿರುದ್ಧ ರೈತರು 14 ತಿಂಗಳಿಂದ ಹೋರಾಡುತ್ತಿದ್ದಾರೆ. ಇಲ್ಲಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಇವರಲ್ಲಿ ಯಾರೊಬ್ಬರೂ ರೈತರ ಅಹವಾಲು ಆಲಿಸಿ ಉತ್ತರ ನೀಡುವ ಧೈರ್ಯ ಪ್ರದರ್ಶಿಸಿಲ್ಲ. ಇಲ್ಲಿವರೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 3500 ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೂ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬದಲಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಅಲ್ಲದೆ, ಈ ಯೋಜನೆಗೆ ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹಿರಿಯ ಸಚಿವ ಎಚ್.ಕೆ.ಪಾಟೀಲ್ ಅವರಿಂದ ಹಸಿ ಸುಳ್ಳು ಹೇಳಿಸಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇದು ರೈತರಿಗೆ ಮಾಡಿದ ಅಪಮಾನ ಎಂದು ಟೀಕಿಸಿದರು.
ಆಲ್ ಇಂಡಿಯಾ ಕಿಸಾನ್ ಸಭಾದ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ.ರವೀಂದ್ರನ್ ಗ್ರಾಮಗಳಲ್ಲಿ ಅಧ್ಯಯನ ಮಾಡಿ ಭೂ ಸ್ವಾಧೀನ ಮಾಡಬಾರದೆಂದು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ದೆಹಲಿಯ ಆಲ್ ಇಂಡಿಯಾ ಕಿಸಾನ್ ಸಭಾದ ಪದಾಧಿಕಾರಿಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಈ ಹೋರಾಟ ರಾಷ್ಟ್ರಮಟ್ಟದ ಪ್ರತಿಭಟನೆಯಾಗಿ ರೂಪುಗೊಳ್ಳಲಿದೆ. ಇದೊಂದು ರಿಯಲ್ ಎಸ್ಟೇಟ್ ದಂಧೆಯಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿಯಬಾರದು ಎಂದು ಟಿ.ಯಶವಂತ್ ಒತ್ತಾಯಿಸಿದರು.ತಾಪಂ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ಬಿಡದಿ ಹೋಬಳಿ ಬೈರಮಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ 25 ಗ್ರಾಮಗಳ 9640 ಎಕರೆ ಕೃಷಿ ಭೂಮಿ ವರ್ಷಪೂರ್ತಿ ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಾದ ರೇಷ್ಮೆ, ಹೈನುಗಾರಿಕೆ, ಜೋಳ, ರಾಗಿ, ಹಣ್ಣು, ತರಕಾರಿ ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ. ಇದನ್ನು ನಿರ್ನಾಮ ಮಾಡಲು ಸರ್ಕಾರ ಹೊರಟಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಜಾರಿ ಮಾಡುವುದಾದರೆ ಆ ಭಾಗದ ರೈತರು ಮುಂದೇನು ಮಾಡಬೇಕು. ಕೂಲಿ ಕಾರ್ಮಿಕರು ಹೇಗೆ ಬದುಕು ನಡೆಸಬೇಕು. ಜಾನುವಾರು, ಕೃಷಿ ಸಲಕರಣೆಗಳನ್ನು ಏನು ಮಾಡಬೇಕು ಎಂಬುದಕ್ಕೆ ಉತ್ತರ ಕೊಡಲಿ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ರೈತ ಹಿತರಕ್ಷಣಾ ಸಂಘದ ಮುಖಂಡರಾದ ನಾಗರಾಜು, ಅಶ್ವತ್ ಇದ್ದರು.
ಕೋಟ್ ..............ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧದ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ. ನಮ್ಮ ಭೂಮಿ ನಮಗೆ ಸಿಗದಿದ್ದರೆ ಯಾವ ಹಂತದ ಹೋರಾಟಕ್ಕೆ ಬೇಕಾದರು ಸಿದ್ಧರಾಗಿದ್ದೇವೆ. ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಣಿಯದಿದ್ದರೆ ವಿಧಾನಸೌಧಕ್ಕೆ ಪಾದಯಾತ್ರೆ ತೆರಳುತ್ತೇವೆ.
- ಪ್ರಕಾಶ್, ಮಾಜಿ ಸದಸ್ಯರು, ತಾಪಂ8ಕೆಆರ್ ಎಂಎನ್ 2.ಜೆಪಿಜಿ
ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.