ಯಲ್ಲಾಪುರ: ನದಿ ಜೋಡಣೆ ವಿರೋಧಿಸಿ ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನ. ೩ರಂದು ಪಟ್ಟಣದ ಟಿಎಂಎಸ್ ಸೂಪರ್ ಮಾರ್ಟ್ ಎದುರುಗಡೆ ಬೆಳಗ್ಗೆ ೯.೩೦ಕ್ಕೆ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೧೦ ಗಂಟೆಗೆ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ.

ಸಭೆಯಲ್ಲಿ ಬೆಂಗಳೂರಿನ ಪರಿಸರ ತಜ್ಞ ಬಿ.ಎಂ. ಕುಮಾರಸ್ವಾಮಿ ಮತ್ತು ಗೋವಾದ ಕಲಾನಂದ ಮಣಿ ಅವರು ಮಾತನಾಡುವರು. ಬೆಳಗ್ಗೆ ೧೧ ಗಂಟೆಗೆ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲು ಹೋರಾಟ ಸಮಿತಿ ನಿರ್ಣಯಿಸಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಪರಿಸರ ಕಾರ್ಯಕರ್ತರು, ಉದ್ಯಮಿಗಳು ಸೇರಿದಂತೆ ೨೦ ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ ಬದಲಿ ಮಾರ್ಗವನ್ನು ಸೂಚಿಸಿದ್ದಾರೆ. ನದಿ ಜೋಡಣೆ ವಿರೋಧಿ ಹೋರಾಟಕ್ಕೆ ರೂಪಾಲಿ ನಾಯ್ಕ ಸಂಪೂರ್ಣ ಬೆಂಬಲ

ಕಾರವಾರ: ಜಿಲ್ಲೆಯ ಪಶ್ಚಿಮಘಟ್ಟದ ಪರಿಸರ, ನದಿ, ಅರಣ್ಯ ಹಾಗೂ ಜನಜೀವನಕ್ಕೆ ಮಾರಕವಾಗಬಹುದಾದ ಬೇಡ್ತಿ- ವರದಾ ಮತ್ತು ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆಗಳನ್ನು ವಿರೋಧಿಸಿ ನ. 3ರಂದು ಯಲ್ಲಾಪುರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.ಜಿಲ್ಲೆ ಈಗಾಗಲೇ ಸುಪಾ, ಕದ್ರಾ, ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಸೀಬರ್ಡ್ ನೌಕಾನೆಲೆಯಂತಹ ಬೃಹತ್ ಯೋಜನೆಗಳಿಗಾಗಿ ತನ್ನ ಭೂಮಿ, ಅರಣ್ಯ ಮತ್ತು ನೈಸರ್ಗಿಕ ಸಂಪತ್ತಿನ ಬಹುಭಾಗವನ್ನು ತ್ಯಾಗ ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಇದೀಗ ಮತ್ತೆ ನದಿಗಳ ತಿರುವು ಮತ್ತು ನದಿ ಜೋಡಣೆ ಯೋಜನೆಗಳ ಮೂಲಕ ಪಶ್ಚಿಮಘಟ್ಟದ ಪರಿಸರ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದಿದ್ದಾರೆ.