ಸಂಗಾತಿ ರಂಗಭೂಮಿ ನೇತೃತ್ವದಲ್ಲಿ ಕಳೆದ 19 ವರ್ಷಗಳಿಂದ ರಾಜ್ಯೋತ್ಸವದಂದು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಿ, ಈ ಪರಿಸರದಲ್ಲಿ ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದು ನಮ್ಮ ಭಾಗಕ್ಕೆ ಹೆಮ್ಮೆಯ ಸಂಗತಿ.

ಅಂಕೋಲಾ: ರಾಷ್ಟ್ರೀಯ ಉತ್ಸವ ಸಮಿತಿ, ತಾಲೂಕು ಆಡಳಿತ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕನ್ನಡ ಚಂದ್ರಮ ಉಕ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಗಾತಿ ರಂಗಭೂಮಿ ಇವರ ನೇತೃತ್ವದಲ್ಲಿ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಉತ್ಸವ- 2026 ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ನೃತ್ಯ, ಸಮೂಹ ಗೀತೆ ಹಾಗೂ ಸನ್ಮಾನ ಕಾರ್ಯಕ್ರಮ ಸಂಘಟಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ನಾಟಿ ವೈದ್ಯ ಹನುಮಂತ ಬಿ. ಗೌಡ ಅವರು ವಿದ್ಯಾರ್ಥಿಗಳಿಗೆ ಕನ್ನಡ ಧ್ವಜವನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಂಗಾತಿ ರಂಗಭೂಮಿ ನೇತೃತ್ವದಲ್ಲಿ ಕಳೆದ 19 ವರ್ಷಗಳಿಂದ ರಾಜ್ಯೋತ್ಸವದಂದು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಿ, ಈ ಪರಿಸರದಲ್ಲಿ ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದು ನಮ್ಮ ಭಾಗಕ್ಕೆ ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯಕ ವಹಿಸಿ ಮಾತನಾಡಿ, ರಾಜ್ಯೋತ್ಸವದ ಕಾರ್ಯಕ್ರಮ ಮುಂಜಾನೆ ಮಾತ್ರ ಸೀಮಿತವಾಗಿರದೇ, ಸಂಜೆಯೂ ಈ ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಮಹಾಸಂಗಮ ಇಲ್ಲಿ ನಡೆಯುತ್ತಿದೆ. ಇದು ನಮ್ಮಲ್ಲಿ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸುವಂತೆ ಮಾಡಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಗದೀಶ ಜಿ. ನಾಯಕ, ನಿವೃತ್ತ ಉಪನ್ಯಾಸಕ ಪ್ರೊ. ಮಹೇಶ ಬಿ. ನಾಯಕ, ಪರಿಸರ ಕಾರ್ಯಕರ್ತ ಎನ್. ಸುರೇಶ, ಪ್ರಗತಿಪರ ಕೃಷಿಕ ತಿಮ್ಮಣ್ಣ ನಾಯಕ, ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಸನ್ಮಾನಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ವಸಂತ ಕೆ. ನಾಯ್ಕ, ಪರಿಸರ ಕಾರ್ಯಕರ್ತ ರವೀಂದ್ರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ರಫೀಕ ಶೇಖ, ಎನ್ಸಿಸಿ ಕಮಾಂಡರ್ ಜಿ.ಆರ್. ತಾಂಡೇಲ್, ಸಂಗೀತ ಶಿಕ್ಷಕಿ ಪ್ರವೀಣ ದೊಡ್ಮನಿ, ನೃತ್ಯ ಕೋರಿಯಾಗ್ರಾಫರ್ ಪ್ರಿಯಾ, ಭರತನಾಟ್ಯ ಹಾಗೂ ಸಿನಿಮಾ ಕಲಾವಿದೆ ಪೂಜಾರಾಣಿ ಎಂ. ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕರಾದ ಕೆ. ರಮೇಶ ಸ್ವಾಗತಿಸಿದರು. ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಲಾವಿದರು ಕನ್ನಡ ನಾಡು- ನುಡಿಯ ಕುರಿತು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನೀಡಿದರು.

ಸ್ಪರ್ಧಾ ವಿಜೇತರು

ನೃತ್ಯ ಸ್ಪರ್ಧೆಯಲ್ಲಿ ಪ್ರೌಢವಿಭಾಗ ಜೈಹಿಂದ್ ಆಂಗ್ಲ ಮಾಧ್ಯಮ(ಪ್ರಥಮ), ಪಿ.ಎಂ. ಆಂಗ್ಲ ಮಾಧ್ಯಮ(ದ್ವಿತೀಯ), ಪಿ.ಎಂ. ಕನ್ನಡ ಮಾಧ್ಯಮ(ತೃತೀಯ), ಪ್ರಾಥಮಿಕ ವಿಭಾಗ- ಡಾ. ದಿನಕರ ದೇಸಾಯಿ ಹಿ.ಪ್ರಾ. ಶಾಲೆ(ಪ್ರಥಮ), ಸಂಗಾತಿ ರಂಗಭೂಮಿ ನೃತ್ಯ ಶಾಲೆ(ದ್ವಿತೀಯ) ಬಹುಮಾನ ಪಡೆದುಕೊಂಡರು. ನಿರ್ಣಾಯಕರಾಗಿ ಪೂಜಾರಾಣಿ ಎಂ. ನಾಯ್ಕ ಹಾಗೂ ಗಿರೀಶ ಅವರು ಕಾರ್ಯ ನಿರ್ವಹಿಸಿದರು.