ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಹೊಂದುವುದರ ಜತೆಗೆ ಅದನ್ನು ಸಾಧಿಸಲು ನಿರಂತರ ಪರಿಶ್ರಮ, ಶ್ರದ್ಧೆ ಮತ್ತು ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿರಹಟ್ಟಿವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಹೊಂದುವುದರ ಜತೆಗೆ ಅದನ್ನು ಸಾಧಿಸಲು ನಿರಂತರ ಪರಿಶ್ರಮ, ಶ್ರದ್ಧೆ ಮತ್ತು ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕು. ಶ್ರಮಪಟ್ಟು ಓದಿದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶ್ರೀ ಜಗದ್ಗುರು ಫಕೀರೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿವಿಧ ಪಠ್ಯೇತರ ಚಟುವಟಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಶಿಕ್ಷಣವು ಮನುಷ್ಯನ ಬದುಕನ್ನು ಬದಲಿಸುವ ಶಕ್ತಿಯುತ ಸಾಧನವಾಗಿದೆ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಪಠ್ಯಪುಸ್ತಕದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ನೈತಿಕ ಮೌಲ್ಯ, ಶಿಸ್ತು ಮತ್ತು ಸಂಸ್ಕಾರಗಳನ್ನು ಕಲಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಸಾಧನೆಗೆ ಮಾರ್ಗದರ್ಶಕರಾಗಬೇಕು. ವಿದ್ಯಾರ್ಥಿಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಸಮಯಪ್ರಜ್ಞೆ ಮತ್ತು ನಿರಂತರ ಅಧ್ಯಯನ ಅತ್ಯಗತ್ಯ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಶ್ರಮದಿಂದ ಓದಿದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ನಿರಂತರ ಅಧ್ಯಯನ, ಪರಿಶ್ರಮ ಮತ್ತು ಶ್ರದ್ಧೆ ಬಹಳ ಮುಖ್ಯ. ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜ್ಞಾನ ವೃದ್ಧಿಯೊಂದಿಗೆ ಯಶಸ್ಸಿನ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಓದಿಗೆ ನಿರ್ದಿಷ್ಟ ಸಮಯ ಮೀಸಲಿಡಬೇಕು ಎಂದು ಹೇಳಿದರು.ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಓದುವ ಬದಲು ಪ್ರತಿನಿತ್ಯ ಪಾಠಗಳನ್ನು ಅಭ್ಯಾಸ ಮಾಡುವುದರಿಂದ ವಿಷಯಗಳ ಮೇಲೆ ಉತ್ತಮ ಹಿಡಿತ ಸಾಧಿಸಬಹುದು. ಓದಿನ ಜತೆಗೆ ಸಾಮಾನ್ಯ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನವೇ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಬದಲಾವಣೆಗೆ ತಕ್ಕಂತೆ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಹೊಂದಿರಬೇಕು.ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿ ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ಪಡೆದು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಡಾ. ಉಮೇಶ್ ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಜೆ. ಗಿರಿ ತಿಮ್ಮಣ್ಣನವರ್ ಮಾತನಾಡಿದರು. ಕೆ.ಎ. ಬಳಿಗೇರ, ಡಾ. ಶಂಕರ್ ಬಾರಿಕೆರ, ಡಾ. ಪೃಥ್ವಿರಾಜ್ ಎಂ., ಪಿ.ಡಿ. ಕರಿಗಾರ, ಎಸ್.ಯು. ಸಜ್ಜನ ಶೆಟ್ಟರ್, ಬಸವರಾಜ ಕುರಗುಂದ, ಎಫ್.ಬಿ. ಪೂಜಾರ, ಡಾ. ಎಸ್.ಆರ್. ಶಿರಹಟ್ಟಿ, ಮಂಜುನಾಥ ಸೊಂಟನೂರ, ಪಕೀರೇಶ ರಟ್ಟಿಹಳ್ಳಿ, ದೀಪು ಕಪ್ಪತ್ತನವರ, ರಾಮಣ್ಣ ಕಂಬಳಿ, ಬಸವರಾಜ ತುಳಿ, ಎಚ್.ಎಂ. ದೇವಗಿರಿ, ಗೂಳಪ್ಪ ಕರಿಗಾರ, ಸಂತೋಷ್ ತೊಡೆಕರ, ರಾಜು ನಾಯಕ್, ಚನ್ನಬಸಪ್ಪ ಹಾಲಗಿ ಇದ್ದರು.