ಸಾರಾಂಶ
ಭಟ್ಕಳ: ಇಲ್ಲಿನ ಮೂಡಭಟ್ಕಳ ಬೈಪಾಸ್ ಬಳಿ ಚತುಷ್ಪಥ ಕಾಮಗಾರಿ ಮಾಡಲು ಅವಕಾಶ ಕೊಡಿ. ನಂತರ ನಿಮ್ಮ ಬೇಡಿಕೆಯಾದ ಅಂಡರಪಾಸ್ ಮಾಡಲು ಪ್ರಯತ್ನಿಸಲಾಗುವುದು ಎಂದ ಸಂಸದ ವಿಶ್ವೇಶ್ವರ ಹೆಗಡೆ ಮಾತಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೊದಲು ಅಂಡರಪಾಸ್ ಮಾಡಿಕೊಟ್ಟರೆ ಮಾತ್ರ ಹೆದ್ದಾರಿ ಕಾಮಗಾರಿಗೆ ಮಾಡಲು ಬಿಡುತ್ತೇವೆಂದು ಸಾರ್ವಜನಿಕರು ಸಂಸದರಿಗೆ ಖಡಕ್ ಸಂದೇಶ ನೀಡಿದರು.
ಮಂಗಳವಾರ ಸಂಜೆ ಮೂಡಭಟ್ಕಳದ ಕೇತಪೈ ನಾರಾಯಣ ದೇವಸ್ಥಾನದಲ್ಲಿ ಮೂಡಭಟ್ಕಳದಲ್ಲಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸುವ ಪ್ರಯುಕ್ತ ಸಂಸದರು ಸಭೆ ಕರೆದಿದ್ದರು.ಈ ಸಭೆಯಲ್ಲಿ ಸಂಸದ ಕಾಗೇರಿ ಅವರು ನಮ್ಮ ಜಿಲ್ಲೆಯಲ್ಲಿ 187 ಕಿಮೀ ಹೆದ್ದಾರಿ ಪೈಕಿ 179 ಕಿಮೀನಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಏಳೆಂಟು ಕಿಮೀ ರಸ್ತೆ ಪೂರ್ಣಗೊಳಿಸಲು ಸಮಸ್ಯೆ ಉಂಟಾಗಿದೆ. ಕೆಲವು ಕಡೆ ಅಂಡರಪಾಸ್, ಪರಿಹಾರ ವಿತರಣೆ ವಿಳಂಬ, ಕೋರ್ಟಿಗೆ ಹೋಗಿರುವುದು ಹೀಗೆ ಹಲವು ಸಮಸ್ಯೆಗಳಿವೆ. ಮೂಡಭಟ್ಕಳದ ಅಂಡರಪಾಸ್ ಸೇರಿದಂತೆ ಅಗತ್ಯ ಇರುವ ಕಾಮಗಾರಿ ಬಗ್ಗೆ ಈಗಾಗಲೇ ಪ್ರಸ್ತಾವನೆ ಹೋಗಿದ್ದು, ಅದು ಮಂಜೂರಿ ಆಗಿ ಬಂದು ಕೆಲಸ ನಡೆಯಲಿದೆ. ಆದರೆ ಯಾವಾಗ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ.
ನಾನು ಕಾಮಗಾರಿ ಮೂರು ತಿಂಗಳಲ್ಲೇ ಮಾಡಿಸುತ್ತೇನೆಂದು ಸುಳ್ಳು ಹೇಳುವುದಿಲ್ಲ. ಹೊಸ ಕಾಮಗಾರಿ ಮಂಜೂರಿ ಆಗಿ ಬರುವ ತನಕ ಈಗಿದ್ದ ಸ್ಥಳದಲ್ಲೇ ಚತುಷ್ಪಥ ಹೆದ್ದಾರಿ ಕಾಮಗಾರಿ ಮಾಡಲು ಜನರು ಅವಕಾಶ ಮಾಡಿಕೊಡಬೇಕು ಎಂದರು.ಇದಕ್ಕೆ ತೀವ್ರ ವಿರೋಧ ಮತ್ತು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ನಾವು ಹಲವು ವರ್ಷಗಳಿಂದ ಮೂಡಭಟ್ಕಳ ಬೈಪಾಸ್ ಬಳಿ ಅತಿ ಅಗತ್ಯವಾದ ಅಂಡರಪಾಸ್ ಮಾಡಿಕೊಡಿ ಎಂದು ಐಆರ್‌ಬಿ, ಹೆದ್ದಾರಿ ಪ್ರಾಧಿಕಾರ, ಹಿಂದಿನ ಸಂಸದರು, ಜಿಲ್ಲಾಧಿಕಾರಿಗಳು, ಸಚಿವರು ಹೀಗೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಸರ್ವೆ ನಡೆದು ಪ್ರಸ್ತಾವನೆ ಕೂಡ ಈ ಹಿಂದೆಯೇ ಹೋಗಿದೆ. ಈಗ ಅಂಡರಪಾಸ್ ನಂತರ ಮಾಡೋಣ. ಹೆದ್ದಾರಿ ಕಾಮಗಾರಿ ಮುಂದುವರಿಸಲು ಅವಕಾಶ ಕೊಡಿ ಎಂದರೆ ಇದು ಸಾಧ್ಯವಿಲ್ಲ.
ಅಂಡರಪಾಸ್ ಆಗದೇ ಹೆದ್ದಾರಿ ಕಾಮಗಾರಿ ಮಾಡಿದರೆ ಈಗ ಆಗುವುದಕ್ಕಿಂತ ಹೆಚ್ಚಿನ ಅಪಘಾತ ಇಲ್ಲಿ ಆಗಲಿದೆ. ಈಗಾಗಲೇ ಇಲ್ಲಿ ಹಲವು ಸಾವುಗಳಾಗಿವೆ. ಅಂಡರಪಾಸ್ ಆದರೆ ಮಾತ್ರ ಜನರಿಗೆ ಅನುಕೂಲ. ಇದಾಗದೇ ರಸ್ತೆ ಆದರೆ ಇಲ್ಲಿನ ಜನರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.ಸಂಸದರು ಸಾರ್ವಜನಿಕರ ಬಳಿ ಅಂಡರಪಾಸ್ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದರೂ ಒಪ್ಪದ ಸಾರ್ವಜನಿಕರು ಮೊದಲು ಅಂಡರಪಾಸ್ ಮಾಡಿದ ನಂತರವೇ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಂದುವರಿಸಿ. ಅಲ್ಲಿಯವರೆಗೆ ನಾವು ಯಾವುದೇ ಕಾರಣಕ್ಕೂ ಹೆದ್ದಾರಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು.
ಸಂಸದರು ನಿಮ್ಮ ಪರವಾಗಿ ನಾನಿದ್ದೇನೆ. ನಾನು ಅಂಡರಪಾಸ್ ವಿರೋಧಿ ಅಲ್ಲ. ನಿಮ್ಮ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಮ್ಮ ಅಭಿಪ್ರಾಯ ಏನು ಎಂದು ಕೇಳಬೇಕಿತ್ತು. ಸಮಸ್ಯೆಯನ್ನು ಒಟ್ಟಾಗಿ ಎದುರಿಸೋಣ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿ ಹೊರಟರು.ಸಭೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ಎನ್. ನಾಯ್ಕ, ಶಿವಾನಿ ಭಟ್ಕಳ, ಖೇದಾರ ಕೊಲ್ಲೆ, ಶ್ರೀಕಾಂತ ನಾಯ್ಕ, ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ, ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ ಡೈರೆಕ್ಟರ್ ಶಿವಕುಮಾರ ಮುಂತಾದವರಿದ್ದರು.