ಕರಸೇವಕರ ಬಂಧನ ವಿರೋಧಿಸಿ ಹಿಂಜಾವೇ ಪ್ರತಿಭಟನೆ

| Published : Jan 07 2024, 01:30 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ಖಂಡಿಸಿ ಮಡಿಕೇರಿ ನಗರದ ಡಿವೈಎಸ್ಪಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ‘ನಾನು ಕರಸೇವಕ ನನ್ನನ್ನೂ ಬಂಧಿಸಿ’ ಎಂದು ಶನಿವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ಖಂಡಿಸಿ ನಗರದ ಡಿವೈಎಸ್ಪಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ‘ನಾನು ಕರಸೇವಕ ನನ್ನನ್ನೂ ಬಂಧಿಸಿ’ ಎಂದು ಶನಿವಾರ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ರಾಮ ಜನ್ಮಭೂಮಿ ಹೋರಾಟದ ಹಳೆಯ ಪ್ರಕರಣಗಳನ್ನು ಕೆದಕಿ ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಬಂಧಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂಪರ ಕಾರ್ಯಕರ್ತರನ್ನು ಬಂಧಿಸಿ, ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ೨೦೧೭ರಲ್ಲಿ ಚಿಕ್ಕಮಗಳೂರು ದತ್ತಪೀಠ ಹೋರಾಟವನ್ನು ಮುಂದಿಟ್ಟುಕೊಂಡು ಸರ್ಕಾರ ಕರಸೇವಕರನ್ನು ಬಂಧಿಸುವ ಹುನ್ನಾರ ನಡೆಸುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆ ಕರಸೇವಕನನ್ನು ಬಂದಿಸಿರುವುದುನ್ನು ರಾಜ್ಯದ ಹಿಂದೂಗಳು ಸಹಿಸುವುದಿಲ್ಲ. ನಾವು ಕೂಡ ಕರಸೇವಕರೇ ಸರ್ಕಾರ ನಮ್ಮನ್ನು ಈ ಕ್ಷಣ ಬಂಧಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ. ಹರಿಪ್ರಸಾದ್ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದು ಕೋಮು ಸೌಹಾರ್ದತೆಯನ್ನು ಮುಖಂಡರೇ ಹಾಳುಗೆಡವುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು. ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ವಿನಯ್, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭೆ ಸದಸ್ಯರಾದ ಸತೀಶ್, ಕವನ್ ಕಾವೇರಪ್ಪ, ಉಮೇಶ್ ಸುಬ್ರಮಣಿ, ಅಪ್ಪಣ್ಣ, ಕುಮಾರ್‌ ಕೆ.ಟಿ., ಶಾಂತಿನಿಕೇತನ ಚೇತನ್, ರಮೇಶ್ ಹೊಳ್ಳ, ಕನ್ನಂಡ ಸಂಪತ್ ಸೇರಿದಂತೆ ಹಲವರು ಇದ್ದರು.ಕುಶಾಲನಗರ: ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆಹುಬ್ಬ‍ಳ್ಳಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ ಖಂಡಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕುಶಾಲನಗರ ಡಿವೈಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಉದ್ದೇಶಪೂರ್ವಕವಾಗಿ ಹಿಂದುಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾವು ಕೂಡ ಕರಸೇವಕರು, ತಮ್ಮನ್ನು ಬಂಧಿಸಿ ಎಂದು ಘೋಷಣೆ ಕೂಗಿದರು. ನಂತರ ಕಾರ್ಯಕರ್ತರು ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ ಅವರ ಮೂಲಕ ಸರ್ಕಾರಕ್ಕೆ ಪ್ರತಿಭಟನಾ ಪತ್ರ ಸಲ್ಲಿಸಿದರು.ಈ ಸಂದರ್ಭ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾದ ಬೋಜೇಗೌಡ, ತಾಲೂಕು ಪ್ರಮುಖರಾದ ಹರೀಶ್, ವಿನೋದ್, ಉಮೇಶ್, ಜಿ.ಎಲ್. ನಾಗರಾಜ್ ಅಮೃತರಾಜ್, ನವನೀತ್, ಭರತ್ ಮಾಚಯ್ಯ, ದರ್ಶನ್ ಜೋಯಪ್ಪ, ಎಂ.ಡಿ. ಕೃಷ್ಣಪ್ಪ, ಕೆ.ಜಿ. ಮನು ಚಂದ್ರಶೇಖರ್ ಹೇರೂರು, ಉಮಾಶಂಕರ್, ವೈಶಾಖ್‌, ಪ್ರದೀಪ್ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಪ್ರಮುಖರು ಇದ್ದರು.