ಸಾರಾಂಶ
ಮಾನವೀಯ ಗುಣ ನಮಗೆ ಉನ್ನತ ಸ್ಥಾನ ನೀಡುತ್ತದೆ. ಈ ಶಾಲೆಯ ಎಸ್‌ಡಿಎಂಸಿ ಹೊಸ ಮಾದರಿಯಲ್ಲಿ ದಾನಿಗಳನ್ನು ಸಂಪರ್ಕಿಸಿ ದಾನ ಸಂಗ್ರಹ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ.
ಹಾನಗಲ್ಲ: ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ದಾನ ನೀಡಿ ಬೆಂಬಲಿಸಿ ವಿದ್ಯೆ ಬೆಳಗಿಸಿದ ಈ ನಾಡಿನಲ್ಲಿ ದಾನಿಗಳಿಗೆ ಕೊರತೆ ಇಲ್ಲ, ಸಾರ್ವಜನಿಕರಿಂದ ಪಡೆದು ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಶನಿವಾರ ಹಾನಗಲ್ಲಿನ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಿಸಲಾದ ನೂತನ ೩ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾನಗಲ್ಲಿನಂತಹ ಪಟ್ಟಣದಲ್ಲಿ ಈವರೆಗೂ ಒಂದು ಸರ್ಕಾರಿ ಪ್ರೌಢಶಾಲೆ ಸ್ಥಾಪನೆ ಆಗಿರಲಿಲ್ಲ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳು ಬೇಕು ಎಂಬ ಒತ್ತಾಯವಿದೆ.
ಈಗ ಹಾನಗಲ್ಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಅರಂಭ ಸಾಧ್ಯವಾಗಿದೆ. ಬ್ಯಾಡಗಿ ತಾಲೂಕಿನ ಕದರಮಂಡಳಿಗಯಲ್ಲಿ ದಾನದಿಂದಲೇ ಒಂದು ಶಾಲೆ ನಿರ್ಮಿಸಿಕೊಟ್ಟ ದಾನಿಗಳ ಮಾದರಿಯಲ್ಲಿ ಶಾಸಕರ ಮಾದರಿ ಶಾಲೆಯ ಅಭಿವೃದ್ಧಿಗೆ ಮುಂದಾಗೋಣ. ಮಾನವೀಯ ಗುಣ ನಮಗೆ ಉನ್ನತ ಸ್ಥಾನ ನೀಡುತ್ತದೆ. ಈ ಶಾಲೆಯ ಎಸ್‌ಡಿಎಂಸಿ ಹೊಸ ಮಾದರಿಯಲ್ಲಿ ದಾನಿಗಳನ್ನು ಸಂಪರ್ಕಿಸಿ ದಾನ ಸಂಗ್ರಹ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ.
೧೫೦ ವರ್ಷಗಳ ಇತಿಹಾಸವಿರುವ ಈ ಶಾಲೆ ಮಾದರಿಯಾಗಲು ಕಾಲ ಕಾಲಕ್ಕೆ ಸರ್ಕಾರದ ಅನುದಾನ ಒದಗಿಸಲು ಬದ್ಧನಾಗಿದ್ದೇನೆ. ಈಗಾಗಲೇ ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ೨೫ ಕೊಠಡಿ ನಿರ್ಮಾಣ ಮಾಡಲಾಗಿದೆ.ಬಲವರ್ಧನೆಗೆ ಕಾಳಜಿ, ಖಾಸಗಿ ಸಹಭಾಗಿತ್ವದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಿದ್ದೇವೆ. ವಿದ್ಯಾರ್ಥಿಗಳ ಹಿತಕ್ಕಾಗಿ ಎಲ್ಲ ಶಿಕ್ಷಕರು ಶ್ರಮ ವಹಿಸಬೇಕಾಗಿದೆ. ಪಾಲಕರೂ ಕೂಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳ ಕಲಿಕೆಗೆ ಶಿಕ್ಷಕರು ಶ್ರಮಿಸುವುದರ ಜತೆಗೆ ಪಾಲಕರು ಕೂಡ ಮನೆ ಪಾಠ ಗಮನಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಭೋಸಲೆ, ಉಪಾಧ್ಯಕ್ಷೆ ಹೇಮಾವತಿ ಹಂಜಗಿ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಕಲ್ಯಾಣಕುಮಾರ ಶೆಟ್ಟರ್, ಅನಂತವಿಕಾಸ ನಿಂಗೋಜಿ, ಸದಸ್ಯರಾದ ವಿರುಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಪ್ರಕಾಶ ತಳವಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ, ಪುರಸಭೆಯ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅತಿಥಿಗಳಾಗಿದ್ದರು.
ನಿಖಿತಾ ಮಾಳಗಿ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಆರ್.ಬಿ. ರಡ್ಡಿ ಸ್ವಾಗತಿಸಿದರು. ಶ್ರೀನಿವಾಸ ದೀಕ್ಷಿತ್ ನಿರೂಪಿಸಿದರು. ಲತಾ ಸದಾರಾಧ್ಯಮಠ ವಂದಿಸಿದರು.