ಸಾರಾಂಶ
ಕುಷ್ಟಗಿ: ವಸತಿ ಶಾಲಾ ಪ್ರವೇಶ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ರಚನಾ ಕಾರ್ಯಾಗಾರ ಯಶಸ್ವಿಗೊಳಿಸಬೇಕು ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.ತಾಲೂಕಿನ ಶಾಖಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆಯ ಭಾಗವಾಗಿ ಪ್ರಶ್ನ ಪತ್ರಿಕೆಗಳನ್ನು ತಯಾರಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಭಾಗವಾಗಿ ಅತಿ ಹೆಚ್ಚಿನ ಮಕ್ಕಳನ್ನು ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಮಾಡುವಲ್ಲಿ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಕರ ಪರಿಶ್ರಮ ಬೇಕಾಗಿದೆ.
ಈ ವರ್ಷ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಕ್ಕಳು ಕುಷ್ಟಗಿ ತಾಲೂಕಿನ ಶಾಲೆಗಳ ವಿದ್ಯಾರ್ಥಿಗಳು ವಸತಿ ಶಾಲೆಗಳಿಗೆ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ವಿನೂತನ ಪ್ರಯತ್ನಗಳ ಮೂಲಕ ಅತಿ ಹೆಚ್ಚಿನ ಮಕ್ಕಳು ಕುಷ್ಟಗಿ ತಾಲೂಕಿನಿಂದಲೇ ವಿದ್ಯಾರ್ಥಿಗಳು ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದರೂ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷ 1500 ಮಕ್ಕಳನ್ನು ಆಯ್ಕೆಯಾಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಕಾರ್ಯದ ಭಾಗವಾಗಿ ಅತ್ಯುತ್ತಮ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಮಕ್ಕಳಿಗೆ ವಾರದಲ್ಲಿ ಎರಡು ಸಾರಿ 12 ಸರಣಿ ಪರೀಕ್ಷೆಗಳ ಮೂಲಕ ಉತ್ತಮ ಸಿದ್ಧತೆ ಮಾಡುವುದರ ಜೊತೆಗೆ ಹೆಚ್ಚಿನ ಮಕ್ಕಳು ವಿವಿಧ ವಸತಿ ಶಾಲೆಗೆ ಆಯ್ಕೆಯಾಗುವಲ್ಲಿ ಮುತುವರ್ಜಿ ವಹಿಸಿ ಎಂದು ಮಾರ್ಗದರ್ಶನ ನೀಡಿದರು.
ಕಳೆದ ಸಾಲಿನಲ್ಲಿ ಕುರುಬನಾಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಪ್ರಶ್ನೆ ಪತ್ರಿಕೆಗಳ ತಯಾರಿ ಕಾರ್ಯಾಗಾರ ನಡೆಸಿ 12 ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ದಾನಿಗಳ ಸಹಕಾರದಿಂದ ಮುದ್ರಿಸಿ ಶಾಲೆಗಳಿಗೆ ವಿತರಿಸಲಾಗಿತ್ತು ಎಂದರು.ನೋಡಲ್ ಬಿಆರ್‌ಪಿ ಶರಣಪ್ಪ ತೆಮ್ಮಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಆರ್‌ಪಿ ಡಾ.ಜೀವನಸಾಬ ವಾಲಿಕಾರ್, ಗ್ರಾಪಂ ಉಪಾಧ್ಯಕ್ಷ ನಾಗಪ್ಪ ಅವಳಿ, ಸದಸ್ಯರಾದ ಮಾನಪ್ಪ ತಳವಾರ್, ಹನುಮಂತಪ್ಪ ಸಿರಿವಾರ್, ಹನುಮೇಶ್ ಹರಿಜನ, ಶಾಲಾ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ್ ಲಕ್ಕಲಕಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಂಜಪ್ಪ ಪೂಜಾರಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಸುಬಾನ ನದಾಫ್ , ಸಂಪನ್ಮೂಲ ಶಿಕ್ಷಕರಾದ ಸಿದ್ದಯ್ಯ ಗುರುವಿನ್ ಗುರಾಚಾರ, 30 ವಿಷಯವಾರು ಪರಿಣಿತ ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))