ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಹಿಂದೂ ಸಮಾಜವನ್ನು ಒಗ್ಗೂಡಿಸುವ ದೃಷ್ಟಿಯಿಂದ ಇಂಥ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಆಯೋಜನೆ ಮಾಡಿ ಸಂಘಟನೆ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಜ.25 ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಶ್ರವಣಬೆಳಗೊಳದ ಬಾಹುಬಲಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಹಿಂದೂ ಸಮಾಜೋತ್ಸವ ನೆರವೇರಲಿದೆ ಎಂದು ಧರ್ಮ ಜಾಗರಣ ಸಮಿತಿ ಜಿಲ್ಲಾ ಸಂಯೋಜಕ ಎಚ್.ಸಿ.ಕೃಷ್ಣಮೂರ್ತಿ ಹೊಸಹಳ್ಳಿ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಬೆಳಗ್ಗೆ ೯:೩೦ ಗಂಟೆಗೆ ಶ್ರವಣಬೆಳಗೊಳದ ನಾಗಯ್ಯನಕೊಪ್ಪಲು ಸರ್ಕಲ್ ನಿಂದ ಶೋಭಾಯಾತ್ರೆ ಆರಂಭವಾಗಿ ಗೊಮ್ಮಟನಗರದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿರುವ ವೇದಿಕೆ ತಲುಪಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ಮತ್ತು ಆಶೀರ್ವಚನ ನೀಡಲಿದ್ದು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಮೋಹನಕುಮಾರಿ ಮತ್ತು ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ರವರು ಉಪಸ್ಥಿತರಿದ್ದು, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶ್ರೀ ಶರತ್ ಪಂಪ್ವೆಲ್ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಎಚ್.ಎನ್.ಲೋಕೇಶ್ ಹಡೇನಹಳ್ಳಿ ಮಾತನಾಡಿ, ಹಿಂದೂಗಳೆಲ್ಲ ಒಗ್ಗೂಡಿದರೆ ದೇಶದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಧರ್ಮ ಬಲಿಷ್ಠಗೊಂಡು, ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವ ಉದ್ದೇಶದಿಂದ ಹಾಗೂ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ನಾವೆಲ್ಲರೂ ಒಗ್ಗೂಡಿದರೆ ಮಾತ್ರ ಪರಿಹಾರ ದೊರೆಯಲಿದೆ. ನಮ್ಮ ದೇಶದಲ್ಲಿ ಬಹು ಪಾಲು ಜನರಿಗೆ ದೇಶ ಮತ್ತು ಧರ್ಮದ ಬಗ್ಗೆ ಅಭಿಮಾನ ಇಲ್ಲದಿರುವುದೇ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದ್ದು ಇದರ ಅರಿವು ಮೂಡಿಸುವ ಉದ್ದೇಶವೇ ಈ ಹಿಂದೂ ಸಮಾಜೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು.ಶ್ರವಣಬೆಳಗೊಳ ಹಿಂದೂ ಸಮಾಜೋತ್ಸವ ಸಮಿತಿ ಸದಸ್ಯ ಮನುಗೌಡ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಹಿಂದೂ ಸಮಾಜವನ್ನು ಒಗ್ಗೂಡಿಸುವ ದೃಷ್ಟಿಯಿಂದ ಇಂಥ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಆಯೋಜನೆ ಮಾಡಿ ಸಂಘಟನೆ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರಾದ ನಾಗೇಶ್ ಹಿರಿಬಿಳ್ತಿ, ಎಸ್.ಜೆ.ಭಾಸ್ಕರಾಚಾರ್, ಸತೀಶ್ ಹೊಸಹಳ್ಳಿ ಇದ್ದರು.