ಕನ್ನಡಪ್ರಭ ವಾರ್ತೆ ವಿಜಯಪುರ

ಜೋಡೆತ್ತಿನ ಕೃಷಿಗೆ ಪ್ರೋತ್ಸಾಹಿಸಲು ಹಾಗೂ ನಂದಿ ಕೃಷಿಯಿಂದ ಮನುಕುಲಕ್ಕೆ ಮತ್ತು ದೇಶಕ್ಕೆ ಆಗುವ ಲಾಭಗಳ ಕುರಿತು ಜಾಗೃತಿ ಮೂಡಿಸಲು ನಂದಿ ಸೇನೆ ರಥಯಾತ್ರೆ ಆರಂಭಿಸಲಾಗಿದೆ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಜಿ.ನಾಡಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ಶಕ್ತಿಯಿಂದ ಭೂಮಿಯ ಜೀವಂತಿಕೆ ಸರ್ವನಾಶವಾಗುತ್ತಿದ್ದು, ನಂದಿ ಶಕ್ತಿಯಿಂದ ಭೂಮಿಯ ಜೀವಂತಿಕೆ ವಿಕಾಸವಾಗುವುದು ಎಂಬ ವಿಷಯದ ಕುರಿತು ರಾಜ್ಯಮಟ್ಟದಲ್ಲಿ ಜನಜಾಗೃತಿ ಮೂಡಿಸಲು ಯಡೂರಿನಿಂದ ಶ್ರೀಶೈಲಕ್ಕೆ ಐತಿಹಾಸಿಕ ನಂದಿ ಸೇನೆ ರಥಯಾತ್ರೆ ಜರಗುತ್ತಿದೆ ಎಂದು ತಿಳಿಸಿದರು.ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಅಡಿಯಲ್ಲಿ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಜರಗುವ ನಂದಿ ಸೇನೆ ರಥಯಾತ್ರೆ 10 ದಿನಗಳ ಕಾಲ ಸಾಗುವ ಮಾರ್ಗದಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ರೈತ ಸಮಾವೇಶಗಳು ಜರಗುತ್ತಿವೆ. ಮಾ.6 ಅಥಣಿ, ಮಾ.7 ಹೊನವಾಡ, ಮಾ.8 ವಿಜಯಪುರ ಮತ್ತು ಮನಗೂಳಿ, ಮಾ.9 ಬಸವನಬಾಗೇವಾಡಿ ಮತ್ತು ಹೂವಿನ ಹಿಪ್ಪರಗಿ, ಮಾ.10 ತಾಳಿಕೋಟಿ ಮತ್ತು ಹುಣಸಗಿ, ಮಾ.11 ದೇವದುರ್ಗ ಹಾಗೂ ಮಾ.12 ರಂದು ರಾಯಚೂರದಲ್ಲಿ ರೈತ ಸಮಾವೇಶಗಳು ಜರುಗಲಿವೆ. ಕೊನೆಗೆ ಶ್ರೀಶೈಲಕ್ಕೆ ಮಾ.15 ರಂದು ನಂದಿ ಸೇನೆ ರಥಯಾತ್ರೆ ತಲುಪಿದ ನಂತರ ಸಾವಿರಾರು ಗ್ರಾಮಗಳಿಂದ ಆಗಮಿಸಿದ ಜೋಡೆತ್ತಿನ ರೈತರ ಸಮ್ಮುಖದಲ್ಲಿ ಶ್ರೀಶೈಲ ಮಲ್ಲಯ್ಯನ ಸನ್ನಿಧಾನದಲ್ಲಿ ನಂದಿ ಸೇನೆ ರಥಯಾತ್ರೆಯ ಸಮಾರೋಪ ಸಮಾರಂಭ ಜರುಗಲಿದೆ ಎಂದರು. ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ನಂದಿ ಸೇನೆ ರಥ ಯಾತ್ರೆ ಸಾಗುವ ದಾರಿಯಲ್ಲಿ ಬರುವ ಗ್ರಾಮಗಳ ರೈತರು ಜೋಡೆತ್ತಿನ ಬಂಡಿಗಳಿಂದ ನಂದಿ ಸೇನೆ ರಥಯಾತ್ರೆಯನ್ನು ಸ್ವಾಗತಿಸಿ, ಬೀಳ್ಕೊಡುವ ಮೂಲಕ ಶ್ರೀಶೈಲ‌ ಮಲ್ಲಯ್ಯನಿಗೆ ಭಕ್ತಿ ಸೇವೆ ಸಲ್ಲಿಸಲಿರುವ ಐತಿಹಾಸಿಕ ಕ್ಷಣಕ್ಕೆ ನಂದಿ ಸೇನೆ ರಥಯಾತ್ರೆ ಸಾಕ್ಷಿಯಾಗಲಿದೆ. ನಂದಿ ಶಕ್ತಿಯಿಂದ ಭೂಮಿಯ ಜೀವಂತಿಕೆ ಹೆಚ್ಚಾಗುವುದು. ತೈಲ ಶಕ್ತಿಯಿಂದ ಭೂಮಿಯ ಜೀವಂತಿಕೆ ನಾಶವಾಗುವುದು. ರಾಜ್ಯದ 60 ಭೂಮಿಯ ಸತ್ವ ನಾಶವಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣ ಕೇವಲ ತೈಲ ಶಕ್ತಿಯಾಗಿದೆ. ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ಕೃಷಿಕರನ್ನು ಒಗ್ಗೂಡಿಸುವುದು. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಬಸವ ತತ್ವ ಪುನರುತ್ಥಾನಕ್ಕಾಗಿ ಶೇ.10 ಬಜೆಟ್ ಮೀಸಲಿಡುವ ಕಾನೂನು ಜಾರಿಗಾಗಿ ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11,000 ಪ್ತೋತ್ಸಾಹ ಧನ ನೀಡುವ ಯೋಜನೆ ಜಾರಿಗಾಗಿ ರಾಜ್ಯದ ಬಹು ಜನರ ಅಭಿಪ್ರಾಯ ಕ್ರೋಢೀಕರಿಸುವುದು ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶವಾಗಿದೆ. ರಥಯಾತ್ರೆಯಲ್ಲಿ ಭಾಗವಹಿಸಲು ಮೊ.9449662047 ಅಥವಾ ಮೊ.9901447325 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ನಂದಿ ಸೇನೆ ರಥಯಾತ್ರೆಯ ಉದ್ದೇಶದ ಕುರಿತು ವಿವರಿಸಿದರು.ಗೋಷ್ಠಿಯಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಕಾಮನ್ನವರ, ಬಸವರಾಜ ಕೋನರಡ್ಡಿ, ಬಾಳಾಸಾಹೇಬ ಈಶ್ವರಗೊಂಡ, ಅಭಿಶೇಕ ಬಿರಾದಾರ ಇದ್ದರು.