ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ದೇಸಾಯಿ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ ಖಾಸಗಿ ಶಾಲಾ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ. ಉರುಳಿ ಬಿದ್ದ ವಾಹನ ತಾಲುಕಿನ ಸಿದ್ದಾಪುರದ ಸನದಿ ಇಂಟರ್‌ ನ್ಯಾಷನಲ್‌ ಶಾಲೆಗೆ ಸೇರಿದ್ದು ಎನ್ನಲಾಗಿದೆ.

ಸಿದ್ದಾಪುರದಿಂದ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ. ಗಾಯಗೊಂಡ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಗಳು ರಜೆ ಇದ್ದ ಕಾರಣ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಹೀಗಾಗಿ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ಉರುಳಿಬಿದ್ದ ಘಟನೆಯಿಂದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.